ಅಪರೂಪದ ಕಾಯಿಲೆಯಿಂದ ವೀಲ್ ಚೇರ್ ಗೆ ಸೀಮಿತವಾಗಿದ್ದ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿನಿ ನಿವೇದಿತಾ, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ. ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಈ ಕಾಯಿಲೆಯು ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಕೇವಲ ಮೂರೇ ವಾರಗಳಲ್ಲಿ ವಾಸಿಯಾಗಿದ್ದು, ಯುವತಿ ಈಗ ಮೊದಲಿನಂತೆ ಓಡಾಡುತ್ತಿದ್ದಾಳೆ.

ಹಾವೇರಿ: ನಂಬಿದವರಿಗೆ ಇಷ್ಟಾರ್ಥ ಸಿದ್ಧಿಸುವ ಕಲ್ಪವೃಕ್ಷ, ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳು. ಈ ಮಾತಿಗೆ ಸಾಕ್ಷಿಯೆಂಬಂತೆ ಹಾವೇರಿ ಜಿಲ್ಲೆಯಲ್ಲಿ ಒಂದು ವಿಸ್ಮಯಕಾರಿ ಘಟನೆ ನಡೆದಿದೆ. ಆಧುನಿಕ ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಪ್ರಕರಣವೊಂದರಲ್ಲಿ ರಾಯರ ಮಂತ್ರಾಕ್ಷತೆ ಮತ್ತು ಅನುಗ್ರಹದಿಂದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯೊಬ್ಬಳು ಅಕ್ಷರಶಃ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾಳೆ.

ಏನಾಗಿತ್ತು?

ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿ ನಿವೇದಿತಾ ಶಿವಪ್ಪ ನೆಗಳೂರು (22). ಗದಗದ ಜಿಮ್ಸ್ (GIMS) ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಫೈನಲ್ ಇಯರ್ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಸುಮಾರು ಏಳು ತಿಂಗಳ ಹಿಂದೆ ನಿವೇದಿತಾಗೆ ಪದೇ ಪದೇ ಮೂರ್ಚೆ ಹೋಗುವ ಸಮಸ್ಯೆ ಕಾಣಿಸಿಕೊಂಡಿತ್ತು. ನೋಡನೋಡುತ್ತಿದ್ದಂತೆಯೇ ಆಕೆಯ ಕೈಕಾಲುಗಳ ಸ್ವಾಧೀನ ತಪ್ಪಿಹೋಗಿತ್ತು. ವೀಲ್ ಚೇರ್ ಇಲ್ಲದೆ ಒಂದು ಹೆಜ್ಜೆ ಇಡಲಾರದ ಸ್ಥಿತಿಗೆ ಆಕೆ ತಲುಪಿದ್ದಳು.

ವೈದ್ಯಲೋಕಕ್ಕೇ ಸವಾಲಾಗಿದ್ದ ಕಾಯಿಲೆ

ನಿವೇದಿತಾ ಅನುಭವಿಸುತ್ತಿದ್ದದ್ದು ಸಾಮಾನ್ಯ ಕಾಯಿಲೆಯಲ್ಲ. ಅದು 'ಆಟೋ ಇಮ್ಯೂನ್ ಡಿಸೀಸ್' (Autoimmune Disease). ದೇಹದ ರೋಗನಿರೋಧಕ ಶಕ್ತಿಯೇ ತನ್ನದೇ ಆದ ಮೆದುಳಿನ ಕೋಶಗಳ ಮೇಲೆ ದಾಳಿ ಮಾಡಿ ಹಾನಿ ಉಂಟುಮಾಡುವ ಗಂಭೀರ ಸ್ಥಿತಿ ಇದು. ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಗಳು, ಮಣಿಪಾಲ್ ಆಸ್ಪತ್ರೆ ಸೇರಿದಂತೆ ಹಲವೆಡೆ ಚಿಕಿತ್ಸೆ ಕೊಡಿಸಲಾಯಿತು. ಸುಮಾರು 5-6 ಲಕ್ಷ ರೂಪಾಯಿ ಖರ್ಚು ಮಾಡಿದರೂ ಚೇತರಿಕೆ ಕಾಣಲಿಲ್ಲ. ಒಂದು ಹಂತದಲ್ಲಿ ಆಕೆ ಐಸಿಯುಗೆ ದಾಖಲಾದಾಗ ಬದುಕುಳಿಯುವ ಭರವಸೆಯೇ ಕ್ಷೀಣಿಸಿತ್ತು. ವೈದ್ಯರೇ ಕಂಗಾಲಾಗಿದ್ದರು.

ರಾಯರ ಮಠದಲ್ಲಿ ಪವಾಡ!

ವಿಧಿಯಾಟದ ನಡುವೆ ಕುಟುಂಬಸ್ಥರು ರಾಯರ ಮೇಲೆ ಭಾರ ಹಾಕಿ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ರಾಘವೇಂದ್ರ ಮಠಕ್ಕೆ ಆಕೆಯನ್ನು ಕರೆತಂದರು. ಅದೇ ಸಮಯದಲ್ಲಿ 100ನೇ ಸುಶೀಲೇಂದ್ರ ತೀರ್ಥರ ಆರಾಧನಾ ಮಹೋತ್ಸವಕ್ಕಾಗಿ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಅಲ್ಲಿಗೆ ಆಗಮಿಸಿದ್ದರು. ವೀಲ್ ಚೇರ್‌ನಲ್ಲಿ ಕುಳಿತಿದ್ದ ನಿವೇದಿತಾಳ ಸ್ಥಿತಿ ಕಂಡು ಮರುಗಿದ ಸ್ವಾಮೀಜಿಗಳು, ರಾಯರ ಮಂತ್ರಾಕ್ಷತೆ ಮತ್ತು ಭಾವಚಿತ್ರವನ್ನು ನೀಡಿ ಆಶೀರ್ವದಿಸಿದರು. 5 ವಾರಗಳ ಕಾಲ ರಾಯರ ಮಠಕ್ಕೆ ನಡೆದುಕೊಂಡು ಪ್ರದಕ್ಷಿಣೆ ಹಾಕಿ ಎಂದು ಸಲಹೆ ನೀಡಿದರು.

ಮೂರೇ ವಾರದಲ್ಲಿ ಕಂಡ ಅಚ್ಚರಿಯ ಬದಲಾವಣೆ!

ಸ್ವಾಮೀಜಿಗಳ ಮಾತಿನಂತೆ ನಿವೇದಿತಾ ಭಕ್ತಿಯಿಂದ ರಾಯರ ಸೇವೆ ಆರಂಭಿಸಿದಳು. ಆಶ್ಚರ್ಯವೆಂದರೆ ಐದು ವಾರ ಮುಗಿಯುವ ಮೊದಲೇ, ಅಂದರೆ ಕೇವಲ 3 ವಾರಗಳಲ್ಲಿ ನಿವೇದಿತಾಳ ಆರೋಗ್ಯದಲ್ಲಿ ಅದ್ಭುತ ಚೇತರಿಕೆ ಕಂಡುಬಂದಿತು. ವೀಲ್ ಚೇರ್‌ನಲ್ಲಿ ಅಸಹಾಯಕಳಾಗಿ ಕುಳಿತಿದ್ದ ಆಕೆ, ಇಂದು ಯಾರ ಸಹಾಯವೂ ಇಲ್ಲದೆ ತನ್ನಷ್ಟಕ್ಕೆ ತಾನೇ ಎದ್ದು ಓಡಾಡುತ್ತಿದ್ದಾಳೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಸಿಗದ ಗುಣಮುಖ, ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಸಿಕ್ಕಿದೆ ಎಂದು ನಿವೇದಿತಾ ಕುಟುಂಬಸ್ಥರು ಭಾವುಕರಾಗಿದ್ದಾರೆ. ವಿಷಯ ತಿಳಿದ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಮಂತ್ರಾಲಯಕ್ಕೆ ಬನ್ನಿ, ರಾಯರು ನಿಮ್ಮನ್ನು ಚೆನ್ನಾಗಿ ಇಡುತ್ತಾರೆ ಎಂದು ಹರಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳೆದರೂ, ಮನುಷ್ಯನ ತರ್ಕಕ್ಕೆ ನಿಲುಕದ ಶಕ್ತಿಯೊಂದು ಈ ಜಗತ್ತನ್ನು ನಡೆಸುತ್ತಿದೆ ಎಂಬುದಕ್ಕೆ ಹಾವೇರಿಯ ಈ ಘಟನೆಯೇ ಸಾಕ್ಷಿ. ನಿವೇದಿತಾ ಇಂದು ಸುಧಾರಿಸಿಕೊಂಡು ಮತ್ತೆ ತನ್ನ ವೈದ್ಯಕೀಯ ಶಿಕ್ಷಣದತ್ತ ಮುಖ ಮಾಡಿರುವುದು ರಾಯರ ಭಕ್ತರಲ್ಲಿ ಸಂತಸ ಮೂಡಿಸಿದೆ.