ಹಾಸನದ ನಿಟ್ಟೂರು ಗ್ರಾಮದ ವೃದ್ಧ ದಂಪತಿ, ಮೂವರು ಮಕ್ಕಳಿದ್ದರೂ ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಪತ್ನಿ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದು, ಮಗನ ಕಿರುಕುಳದಿಂದ ಬೇಸತ್ತಿರುವ ದಂಪತಿ, ತಮ್ಮನ್ನು ವೃದ್ಧಾಶ್ರಮಕ್ಕಾದರೂ ಸೇರಿಸಿ ಎಂದು ಕಣ್ಣೀರಿಟ್ಟಿದ್ದಾರೆ.

ಹಾಸನ: ಮೂವರು ಮಕ್ಕಳಿದ್ದರೂ ನಮ್ಮನ್ನು ನೋಡಿಕೊಳ್ಳುವವರಿಲ್ಲ. 6 ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಪತ್ನಿಯ ಆರೈಕೆಯ ಜತೆಗೆ ಹಸಿವು, ಅನಾರೋಗ್ಯ, ಮನೆಯ ದುಸ್ಥಿತಿ ಹಾಗೂ ಮಗನ ಹಿಂಸೆಯನ್ನು ಎದುರಿಸುತ್ತಿದ್ದೇನೆ. ಕಡೆಪಕ್ಷ ನಮ್ಮನ್ನು ವೃದ್ಧಾಶ್ರಮಕ್ಕಾದರೂ ಕಳುಹಿಸಿ, ಉಳಿದ ಜೀವನವನ್ನಾದರೂ ನೆಮ್ಮದಿಯಿಂದ ಕಳೆಯಲು ಅವಕಾಶ ಮಾಡಿಕೊಡಿ ಎಂದು ಹಾಸನ ತಾಲೂಕಿನ ನಿಟ್ಟೂರು ಗ್ರಾಮದ ವೃದ್ಧರಾದ ರೆವಣ್ಣ ಸಿದ್ಧಪ್ಪ ಕಣ್ಣೀರಿಟ್ಟಿದ್ದಾರೆ.

ಈಗ ನಮ್ಮ ಬದುಕಿಗೆ ಮಕ್ಕಳೇ ಭಾರ

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ನಿಟ್ಟೂರು ಗ್ರಾಮದ ರೇವಣ್ಣ ಸಿದ್ದಪ್ಪ (86) ಹಾಗೂ ಅವರ ಪತ್ನಿ ಜಯಮ್ಮ (76) ತಮ್ಮ ನೋವು ತೋಡಿಕೊಂಡಿದ್ದು, ಮಕ್ಕಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟೆವು. ಆದರೆ ಈಗ ನಮ್ಮ ಬದುಕಿಗೆ ಮಕ್ಕಳೇ ಭಾರವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯಿದ್ದು, ಎಲ್ಲರಿಗೂ ಮದುವೆ ಮಾಡಿ ಜವಾಬ್ದಾರಿ ಮುಗಿಸಿದ್ದೇವೆ. ಆದರೆ ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ.

ಪತ್ನಿ ಜಯಮ್ಮ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಕಳೆದ ಆರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಆರೈಕೆ ಮಾಡುವುದು ವಯಸ್ಸಾದ ತನಗೆ ಅತ್ಯಂತ ಕಷ್ಟವಾಗುತ್ತಿದೆ. ಒಂದು ಕಡೆ ಪತ್ನಿಯ ಅನಾರೋಗ್ಯ ಮತ್ತೊಂದೆಡೆ ತನ್ನ ವೃದ್ಧಾಪ್ಯ ಎರಡನ್ನೂ ನಿಭಾಯಿಸಲಾಗದೆ ಸಂಕಷ್ಟದಲ್ಲಿದ್ದೇನೆ ಎಂದು ರೇವಣ್ಣ ಸಿದ್ದಪ್ಪ ನೋವು ತೋಡಿಕೊಂಡರು.

ಅಡುಗೆ ಮಾಡಿಕೊಳ್ಳುವ ಶಕ್ತಿಯೂ ಇಲ್ಲ

ವಾಸಿಸುತ್ತಿರುವ ಮನೆಯೂ ಶಿಥಿಲಾವಸ್ಥೆಯಲ್ಲಿದ್ದು, ವಯಸ್ಸಿನ ಕಾರಣ ಅಡುಗೆ ಮಾಡಿಕೊಳ್ಳುವ ಶಕ್ತಿಯೂ ಇಲ್ಲವಾಗಿದೆ. ಕೆಲವೊಮ್ಮೆ ಹೋಟೆಲ್‌ನಿಂದ ಊಟ ತಂದುಕೊಳ್ಳಬೇಕಾಗುತ್ತದೆ. ಹಣವಿಲ್ಲದ ಸಂದರ್ಭದಲ್ಲಿ ಎರಡು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ಹಸಿವಿನಿಂದಲೇ ಮಲಗಿರುವ ದಿನಗಳೂ ಇವೆ ಎಂದು ಅವರು ಕಣ್ಣೀರಿಟ್ಟರು.

ತಮ್ಮ ಬದುಕಿಗೆ ಕೊನೆಯ ಆಸರೆಯಾಗಿರುವ ಎರಡು ಎಕರೆ ಜಮೀನನ್ನು ಹಂಚಿಕೆ ಮಾಡಿಕೊಡುವಂತೆ ಮಕ್ಕಳು ಒತ್ತಡ ಹೇರುತ್ತಿದ್ದಾರೆ. ನಮ್ಮನ್ನು ನೋಡಿಕೊಳ್ಳುವ ಬದಲು ಆಸ್ತಿಯ ಮೇಲೆಯೇ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಿರಿಯ ಮಗ ಕುಮಾರ ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಮ್ಮ ಮೇಲೆ ಹಲ್ಲೆ ನಡೆಸುತ್ತಾನೆ. ಈ ಕುರಿತು ಹಲವು ಬಾರಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸೂಕ್ತ ರಕ್ಷಣೆ ದೊರೆತಿಲ್ಲ. ವಯಸ್ಸಾದ ನಾವು ಯಾರ ಮೊರೆ ಹೋಗಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮನೆಯಲ್ಲಿ ನೆಮ್ಮದಿ ಇಲ್ಲ, ಹೊರಗೆ ಹೋಗಿ ಬದುಕುವ ಶಕ್ತಿಯೂ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪೊಲೀಸ್ ರಕ್ಷಣೆ ನೀಡುವಂತೆ ವೃದ್ದ ದಂಪತಿ ಮನವಿ

ದೈನಂದಿನ ಜೀವನ ನಿರ್ವಹಣೆಗೆ ಹಣದ ಅಗತ್ಯವಿರುವುದರಿಂದ ತಾವು ಕ್ರಯಕ್ಕೆ ಪಡೆದಿರುವ 20 ಗುಂಟೆ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಆದರೆ ಮಗನಿಂದ ತೊಂದರೆಯಾಗುವ ಭಯವಿದ್ದು, ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು ಎಂದು ದಂಪತಿ ಮನವಿ ಮಾಡಿದರು.

ತಮ್ಮ ಮೇಲೆ ಹಲ್ಲೆ ನಡೆಸುತ್ತಿರುವ ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ರಕ್ಷಣೆ ಒದಗಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ಅಗತ್ಯ ಆರೈಕೆ ಹಾಗೂ ತಮ್ಮಿಬ್ಬರಿಗೂ ಸುರಕ್ಷಿತ ಜೀವನ ಕಲ್ಪಿಸಬೇಕು ಎಂದು ಅಧಿಕಾರಿಗಳಲ್ಲಿ ಕೋರಿಕೊಂಡರು. ಮಕ್ಕಳಿಂದ ಹಿಂಸೆ ಅನುಭವಿಸಿ ಬದುಕುವುದಕ್ಕಿಂತ ವೃದ್ಧಾಶ್ರಮಕ್ಕಾದರೂ ಕಳುಹಿಸಿ. ಅಲ್ಲಾದರೂ ನೆಮ್ಮದಿಯಾಗಿ ಬದುಕುತ್ತೇವೆ. ನಮ್ಮನ್ನು ಹೀಗೆಯೇ ಬಿಟ್ಟರೆ ನಾವಿಬ್ಬರೂ ಸತ್ತು ಹೋಗುವ ಪರಿಸ್ಥಿತಿ ಬರುತ್ತದೆ ಎಂದು ರೇವಣ್ಣ ಸಿದ್ದಪ್ಪ ಕಣ್ಣೀರಿಟ್ಟರು.

ಇದನ್ನೂ ಓದಿ: ₹46.33 ಲಕ್ಷ ವೇತನದ ಉದ್ಯೋಗ ಪಡೆದ ಆಳ್ವಾಸ್ ಕಾಲೇಜಿನ ಹಾವೇರಿ ರೈತನ ಮಗಳು ಸೃಷ್ಟಿ ಉಳ್ಳಾಗಡ್ಡಿ