ಜಮಖಂಡಿ ತಾಲೂಕಿನ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ಹಂಚಿಕೆಯಾದ ಕಾರಣ, ಅವರು ಹಲವು ವರ್ಷಗಳಿಂದ ಪಿಂಚಣಿ, ಮನೆ ಸೌಲಭ್ಯದಂತಹ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯದೆ ಇಬ್ಬರೂ ಸಂಕಷ್ಟ ಅನುಭವಿಸುತ್ತಿದ್ದಾರೆ.

ಬಾಗಲಕೋಟೆ: ಒಂದೇ ಆಧಾರ್‌ ಸಂಖ್ಯೆ ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾಗಿರುವ ಅಪರೂಪದ ಪ್ರಕರಣವೊಂದು ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಲೋಪದೋಷದಿಂದಾಗಿ ಇಬ್ಬರು ಬಡ ಕುಟುಂಬಗಳು ಹಲವು ವರ್ಷಗಳಿಂದ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗ್ರಾಮದ ಆನಂದ ಬಡಿಗೇರ ಹಾಗೂ ಚನ್ನಬಸವ ದೊಡ್ಡಮನಿ ಎಂಬ ಇಬ್ಬರು ವ್ಯಕ್ತಿಗಳ ಆಧಾರ ಕಾರ್ಡ್‌ಗಳಲ್ಲಿ ಒಂದೇ ಆಧಾರ ಸಂಖ್ಯೆ ನಮೂದಾಗಿದ್ದೇ ಈ ಸಮಸ್ಯೆಗೆ ಪ್ರಮುಖ ಕಾರಣ. ಇಬ್ಬರೂ ತಮ್ಮದೇ ಆದ ಗುರುತಿನ ದಾಖಲೆ ಹೊಂದಿದ್ದರೂ, ಆಧಾರ ಸಂಖ್ಯೆ ಒಂದೇ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು, ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಕಲಚೇತನ ಆನಂದ್‌ಗೆ ವರ್ಷಗಳಿಂದ ಸಿಗದ ಪಿಂಚಣಿ

ಆನಂದ ಬಡಿಗೇರ ಅವರು ವಿಕಲಚೇತನರಾಗಿದ್ದು, ದೈಹಿಕ ಅಸಮರ್ಥತೆಯಿಂದಾಗಿ ಕಠಿಣ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ದೊರೆಯಬೇಕಾದ ಮಾಸಿಕ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳು ಆಧಾರ ಸಂಖ್ಯೆಯ ಗೊಂದಲದಿಂದಾಗಿ ವರ್ಷಗಳಿಂದ ತಲುಪಿಲ್ಲ ಎನ್ನಲಾಗಿದೆ.

ಸರ್ಕಾರದ ನೆರವಿನ ಮೇಲೆ ಜೀವನ ಸಾಗಿಸಬೇಕಾದ ಕುಟುಂಬಕ್ಕೆ ಪಿಂಚಣಿ ಕೂಡ ಸಿಗದಿರುವುದು ಮತ್ತಷ್ಟು ಸಂಕಷ್ಟ ತಂದಿದೆ. ಬಡತನದಲ್ಲಿರುವ ಇವರಿಗೆ ಮನೆ ಸೌಲಭ್ಯವೂ ಕೈತಪ್ಪಿತು. ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರಾಗಿದ್ದರೂ, ಆಧಾರ ಸಂಖ್ಯೆಯಲ್ಲಿನ ಸಮಸ್ಯೆಯಿಂದಾಗಿ ಮನೆ ಸೌಲಭ್ಯವೂ ಕೈತಪ್ಪಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಚನ್ನಬಸವ ಅವರ ಕುಟುಂಬದಲ್ಲಿರುವ ಚಿಕ್ಕ ಮಗುವಿಗೂ ತಂದೆಯ ಆಧಾರ ದಾಖಲೆಗಳಲ್ಲಿನ ಗೊಂದಲದಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನ ಯುಐಡಿಎಐ ಕಚೇರಿಗೆ ಅಲೆದಾಟ

ಆಧಾರ ಸಂಖ್ಯೆಯ ಸಮಸ್ಯೆ ಪರಿಹರಿಸಿಕೊಳ್ಳಲು ಇಬ್ಬರೂ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಜಮಖಂಡಿ ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಸ್ಥಳೀಯ ಶಾಸಕರಿಗೂ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಯುಐಡಿಎಐ ಕಚೇರಿಗೂ ತೆರಳಿ ತಮ್ಮ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಕಳೆದ ವರ್ಷ ಬೆಂಗಳೂರಿನ ಯುಐಡಿಐಎ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಬಳಿಕ, ಸುಮಾರು ಆರು ತಿಂಗಳ ನಂತರವೂ ಆಧಾರ ಸಂಖ್ಯೆಯಲ್ಲಿನ ಸಮಸ್ಯೆ ಬಗೆಹರಿಯದೇ ಇರುವುದರ ಜೊತೆಗೆ, ದಾಖಲೆಗಳಲ್ಲಿ ಹೆಸರು ಬದಲಾಗಿರುವ ಮತ್ತೊಂದು ಗೊಂದಲ ಎದುರಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಕ್ಕೆ ಒತ್ತಾಯ

ಒಬ್ಬ ವ್ಯಕ್ತಿಗೆ ಮೀಸಲಾಗಬೇಕಾದ ಆಧಾರ ಸಂಖ್ಯೆ ಮತ್ತೊಬ್ಬ ವ್ಯಕ್ತಿಗೂ ಒಂದೇ ಆಗಿರುವುದು ಇಬ್ಬರ ಜೀವನದ ಮೇಲೆಯೇ ಗಂಭೀರ ಪರಿಣಾಮ ಬೀರಿದೆ. ಆಧಾರ ಗುರುತಿನ ಸಮಸ್ಯೆಯಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದಿರುವುದು ಕುಟುಂಬಗಳನ್ನು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಹೀಗಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಯುಐಡಿಎಐಗೆ ಸಂಬಂಧಿಸಿದ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಬ್ಬರ ದಾಖಲೆಗಳನ್ನು ಪರಿಶೀಲಿಸಿ ಪ್ರತ್ಯೇಕ ಹಾಗೂ ಸರಿಯಾದ ಆಧಾರ ಸಂಖ್ಯೆಯನ್ನು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು.

ಆಧಾರ ಸಮಸ್ಯೆಯಿಂದ ಇದುವರೆಗೆ ಸ್ಥಗಿತಗೊಂಡಿರುವ ಪಿಂಚಣಿ, ಮನೆ ಸೇರಿದಂತೆ ಅರ್ಹ ಸರ್ಕಾರಿ ಸೌಲಭ್ಯಗಳನ್ನು ಮರುಪಡೆಯಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಆಧಾರ್ ಸಂಖ್ಯೆಯಲ್ಲಿನ ಈ ಲೋಪದಿಂದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಪ್ರಕರಣವನ್ನು ಪರಿಶೀಲಿಸಿ ಶೀಘ್ರ ನ್ಯಾಯ ಒದಗಿಸಬೇಕು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.

ಸನ್‌ 2012ರಲ್ಲಿ ಆಧಾರ ಕಾರ್ಡಗಳ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಗ್ರಾಪಂ ಕೇಂದ್ರದಲ್ಲಿ ಆನಂದ ಬಡಿಗೇರ ಹಾಗೂ ನಾನು ಇಬ್ಬರು ಸರತಿ ಸಾಲಿನಲ್ಲಿ ನಿಂತಿದ್ದೇವು, ಸಾಕಷ್ಟು ಗಂಟೆಗಳ ಕಾಯ್ದ ನನ್ನ ಸರದಿ ಬಂದಿತ್ತು. ನನಗಿಂತಲು ಮೊದಲು ಆನಂದ ಬಡಿಗೇರ ಆಧಾರ್‌ ಕಾರ್ಡ್ ನೋಂದಣಿ ಮುಗಿದಿತ್ತು. ನಂತರ ನನ್ನ ಸರದಿ ಬಂದಾಗ ನನಗೂ ಅದೇ ಸಂಖ್ಯೆಯ ರಸೀದಿ ನೀಡಿದ್ದರು. ನೋಂದಣಿ ಮಾಡಿಕೊಳ್ಳುವರ ತಪ್ಪಿನಿಂದಾಗಿ ನನಗೆ ಆಧಾರ್‌ ಕಾರ್ಡ್ ಬರಲಿಲ್ಲ.

2 ವರ್ಷಗಳ ನಂತರ 2014ರಲ್ಲಿ ನನಗೂ ಆಧಾರ್‌ ಕಾರ್ಡ್ ಬಂದಿತ್ತಾದರೂ ಒಂದೇ ನಂಬರಿನದಾಗಿತ್ತು ಎಂಬುದು ನಮಗೆ ಅರಿವಿಗೆ ಬಂದದ್ದು 2017ರಲ್ಲಿ ಸರ್ಕಾರಿ ಸೌಲಭ್ಯಗಳು ಹಾಗೂ ನನಗಿರುವ 7 ವರ್ಷದ ಅಂಗವಿಕಲ ಮಗನಿಗೆ ಅಂಗವಿಕಲರ ವೇತನ ಬಾರದೇ ಇದ್ದಾಗ ಆಧಾರ ಸಮಸ್ಯೆಯ ಅರಿವು ಉಂಟಾಗಿ ಸ್ಥಳೀಯ ಶಾಸಕರ ಪತ್ರ ಪಡೆದು ಮೂರು ಬಾರಿ ಬೆಂಗಳೂರಿನ ಆಧಾರ ಕಚೇರಿಗೆ ಹೋಗಿ ಬಂದಿದ್ದೇವೆ. ಎರಡು ಆಧಾರಗಳನ್ನು ರದ್ದು ಮಾಡುತ್ತೇವೆ.

3 ತಿಂಗಳ ನಂತರ ಇಬ್ಬರೂ ಹೊಸದಾಗಿ ಆಧಾರ ಮಾಡಿಸಿಕೊಳ್ಳಿ ಎಂದು ಹೇಳಿ ಕಳುಹಿಸಲಾಯಿತು. ಈ ಎಲ್ಲ ಘಟನೆ ನಡೆದು ವರ್ಷ ಕಳೆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ಗ್ರಾಪಂನಿಂದ ಮಂಜೂರಾದ ಮನೆ ಪಡೆದುಕೊಳ್ಳಲಾಗಿಲ್ಲ, ಪಡಿತರ ಸಿಗುತ್ತಿಲ್ಲ, ಮನೆ ನಿರ್ಮಿಸುವ ಗೌಂಡಿ ಕೆಸಲ ಮಾಡುವ ನನಗೆ ಕಾರ್ಮಿಕ ಕಾರ್ಡ್ ಕೂಡಾ ದೊರೆತಿಲ್ಲ. ಕಚೇರಿಗಳಿಗೆ ಅಲೆದು ಸುಸ್ತಾಗಿದ್ದೇನೆ,

-ಚೆನ್ನಬಸವ ದೊಡಮನಿ, ಆಧಾರ ಸಂತ್ರಸ್ಥ, ಹಿರೇಪಡಸಲಗಿ ಗ್ರಾಮ