Mysuru : ಗ್ರಾಪಂ ಕಾರ್ಯ ರಾಜ್ಯ, ರಾಷ್ಟ್ರ ಪ್ರಶಸಿಗೆ ಅರ್ಹ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾದಾಪುರ ಗ್ರಾಪಂ ನಿರ್ಮಿಸಿರುವ ಕಲ್ಯಾಣಿ ಮತ್ತು ಉದ್ಯಾನವನ ಕೆಲಸಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗಬೇಕೆಂದು ಶಾಸಕ ಎಂ. ಅಶ್ವಿನ್‌ಕುಮಾರ್ ಆಶಯ ವ್ಯಕ್ತಪಡಿಸಿದರು.
ಟಿ. ನರಸೀಪುರ (ಅ.18): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾದಾಪುರ ಗ್ರಾಪಂ ನಿರ್ಮಿಸಿರುವ ಕಲ್ಯಾಣಿ ಮತ್ತು ಉದ್ಯಾನವನ ಕೆಲಸಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಗಬೇಕೆಂದು ಶಾಸಕ ಎಂ. ಅಶ್ವಿನ್‌ಕುಮಾರ್ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಮಾದಾಪುರ ಗ್ರಾಮದ (Village) ಶ್ರೀ ಸಿದ್ದಪ್ಪಾಜಿ ದೇವಾಲಯದ (Temple) ಬಳಿ ಮಾದಾಪುರ ಗ್ರಾಪಂನಿಂದ ಮನರೇಗಾ ಯೋಜನೆಯಲ್ಲಿ ಸುಮಾರು 22 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಕಲ್ಯಾಣಿ ಮತ್ತು ಉದ್ಯಾನವನವನ್ನು ಗ್ರಾಪಂ ಅಧ್ಯಕ್ಷೆ ನಳಿನಿ ಸೋಮಣ್ಣ ಅವರ ಜೊತೆಗೂಡಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮಾದಾಪುರ ಗ್ರಾಪಂ ಇಡಿ ರಾಜ್ಯಕ್ಕೆ ಮಾದರಿಯಾಗುವಂತ ಉತ್ತಮ ಕಾರ್ಯವನ್ನು ಮಾಡಿದೆ, ಈ ರೀತಿಯ ಸುಂದರವಾದ ಕಲ್ಯಾಣಿ ಮತ್ತು ಉದ್ಯಾನವನವನ್ನು ಗ್ರಾಪಂಗಳು ನಿರ್ಮಾಣ ಮಾಡಿರುವುದು ತುಂಬಾ ವಿರಳ ಹಾಗೂ ನಮ್ಮ ಜಿಲ್ಲೆಯಲ್ಲಿ ಈ ರೀತಿಯ ಕೆಲಸ ಪ್ರಥಮವಾಗಿದೆ, ಹಾಗಾಗಿ ಪಂಚಾಯತಿಯ ಕೆಲಸಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಬೇಕು ಎಂದರು.
ಈ ಭವ್ಯವಾದ ಕಲ್ಯಾಣಿ ಮತ್ತು ಉದ್ಯಾನವನ ಮರುಡೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳನ್ನು ಕೈಬೀಸಿ ಕರೆಯುವುದರಲ್ಲಿ ಅನುಮಾನವಿಲ್ಲ ಅಷ್ಟುಸುಂದರವಾಗಿದೆ, ಹಾಗೆ ಉದ್ಯಾನವನ ಪಕ್ಕದಲ್ಲಿರುವ ಸಿದ್ದಪ್ಪಾಜಿ ದೇವಾಲಯ ಪುರಾಣ ಪ್ರಸಿದ್ದವಾಗಿದ್ದು, ಭಕ್ತಿ ಭಾವದಲ್ಲಿ ಮಿಂದೇಳಲು ಒಳ್ಳೆಯ ಪ್ರಶಾಂತವಾದ ಪುಣ್ಯ ಸ್ಥಳವಾಗಿದೆ ಎಂದರು.
ಕಲ್ಯಾಣಿ ಲೋಕಾರ್ಪಣೆಗೆ ಹೋಮ ಹವನ ಕಾರ್ಯಕ್ರಮ ಹಿರಿಯ ಆಗಮಿಕರಾದ ಪರಶಿವಮೂರ್ತಿ ನೇತೃತ್ವದಲ್ಲಿ ಶಾಸ್ತ್ರಿಗಳಾದ ಆರ್. ಮಂಜುನಾಥ್, ಎಸ್. ಉಮೇಶಪ್ಪ, ಅಭಿ, ಮಹೇಶ್ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ನಳಿನಿ ಸೋಮಣ್ಣ, ಉಪಾಧ್ಯಕ್ಷ ಪ್ರದೀಪ್, ಸದಸ್ಯರಾದ ತ್ರಿಪುರಾಂತಕ, ಮಹೇಶ್, ಬಸವರಾಜು, ತಾಲೂಕು ಸಾರ್ವಜನಿಕ ಆಸ್ಪತ್ರೆ ಶಸ್ತ್ರಚಿಕಿತ್ಸ ತಜ್ಞ ಡಾ. ರೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಸುಶೀಲಾ, ಚಂದ್ರು, ಚಂಡಿ ಪ್ರಕಾಶ್, ತಾಪಂ ಇಒ ಕೃಷ್ಣ, ನರೇಗಾ ನಿರ್ದೇಶಕ ಶಶಿಕುಮಾರ್, ಜಿಪಂ ಮಾಜಿ ಸದಸ್ಯ ಜೈಪಾಲ…ಭರಣಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ ಇದ್ದರು.
ಕಟ್ಟಡ ಕಾರ್ಮಿಕರಿಗೆ ವಿವಿಧಸೌಲಭ್ಯ
ಕಟ್ಟಡ ಕಾರ್ಮಿಕರು (construction workers ) ಅತಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದು, ಸರ್ಕಾರದಿಂದ (Karnataka Govt) ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸಿಕೊಡಲು ಸದಾ ಸಿದ್ದವಾಗಿರುವುದಾಗಿ ಶಾಸಕ ಎಂ. ಅಶ್ವಿನ್ ಕುಮಾರ್ (MLA Ashwin Kumar) ಭರವಸೆ ನೀಡಿದರು.
ಪಟ್ಟಣದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ನಡೆದ ತಾಲೂಕು (Taluk) ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭವ್ಯ ಕಟ್ಟಡಗಳ ನಿರ್ಮಾಣದ ಮೂಲಕ ಸುಂದರ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರ ಬದುಕಿಗೆ ನೆಲೆ ದೊರಕಿಸಿಕೊಡಲು ಸರ್ಕಾರ ಸಹ ಶ್ರಮಿಸುತ್ತಿದ್ದು, ಕಟ್ಟಡ ಕಾರ್ಮಿಕರ ಭವಿಷ್ಯ ನಿಧಿಯಿಂದ ಮಕ್ಕಳ ಸ್ಕಾಲರ್ಶಿಪ್, ಮದುವೆಗಳಿಗೆ ಸಹಾಯಧನದಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ ಕಾರ್ಮಿಕರಿಗೆ ನೀಡುತ್ತಿರುವ ಯೋಜನೆಗಳು ಸಾಲುತ್ತಿಲ್ಲವೆಂಬ ಕಾರ್ಮಿಕರ ಮನವಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಪುರಸಭಾ ಸದಸ್ಯ ಆರ್. ಅರ್ಜುನ್ ಮಾತನಾಡಿ, ಕಾರ್ಮಿಕರು ದೇಶದಲ್ಲಿ ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿದ್ದು, ಕಷ್ಟದ ಹಾದಿಯಲ್ಲೂ ಕಠಿಣ ದುಡಿಮೆ ಮಾಡಿ ಸಂಸಾರ ಸಲಹುತ್ತಿರುವ ಬಗ್ಗೆ ಹೆಮ್ಮೆ ಇದೆ. ಕಾರ್ಮಿಕರಲ್ಲಿ ವಿದ್ಯಾಭ್ಯಾಸದ ಕೊರತೆ ಇದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದು ಕೂಲಿ ಕಾರ್ಮಿಕರ ಮಕ್ಕಳು ಕೂಲಿಗಳಾಗೇ ಮುಂದುವರೆಯುವ ಸಂಪ್ರದಾಯಕ್ಕೆ ತೀಲಾಂಜಲಿ ನೀಡಬೇಕು ಎಂದರು.
ಸಿಡಬ್ಲ್ಯೂಎಫ್‌ಐ (CWFI) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಮಾತನಾಡಿ, ಕೋವಿಡ್ (Covid) ವೇಳೆ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿ ಕೆಲ ಸೌಲಭ್ಯಗಳು ನೀಡಿದರೂ ಸಹ ಸಕಾಲಕ್ಕೆ ಕಾರ್ಮಿಕರಿಗೆ ತಲುಪಲೇ ಇಲ್ಲ. ಕಾರ್ಮಿಕರಿಗೆ ನೀಡಲಾದ ರೇಷನ್ ಕಿಟ್‌ನಲ್ಲೂ (Ration Kit) ಸರ್ಕಾರ ಕೋಟ್ಯಂತರ ರು. ಗಳ ಅವ್ಯವಹಾರವೆಸಗಿದೆ ಎಂದು ದೂರಿದರು.
ಪುರಸಭಾ ಅಧ್ಯಕ್ಷ ಎಸ್. ಮದನ್‌ರಾಜ್, ಉಪಾಧ್ಯಕ್ಷೆ ಪ್ರೇಮ್ಮಾರಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಎನ್.ಕೆ. ಬಾಲಾಜಿ ರಾವ್, ಸಿಡಬ್ಲ್ಯೂಎಫ್‌ಐ ಜಿಲ್ಲಾಧ್ಯಕ್ಷ ವಿ. ಸೋಮಶಂಕರ್, ಎಚ್.ಎಂ. ಬಸವಯ್ಯ, ಸಿಡಬ್ಲ್ಯೂಎಫ್‌ಐ ತಾಲೂಕು ಅಧ್ಯಕ್ಷ ಸಿ. ಪುಟ್ಟಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಬಿ. ನವೀನ್‌ಕುಮಾರ್ ಇದ್ದರು.