ಮನೆ ಮನೆಗೆ ನಲ್ಲಿ ಸಂಪರ್ಕ ಚುರುಕಿಗೆ ಸಿಎಂ ಬೊಮ್ಮಾಯಿ ಅಪ್ಪಣೆ
ಸರ್ಕಾರದ ಯೋಜನೆಗಳ ಅನುಷ್ಠಾನ ಬಗ್ಗೆ ತಾಲೂಕು, ಗ್ರಾಮ ಮಟ್ಟದಲ್ಲಿ ಪರಿಶೀಲಿಸಬೇಕು ಮತ್ತು ಪ್ರಧಾನಿಯವರ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿಯನ್ನು ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಬೆಂಗಳೂರು (ಅ.18): ಸರ್ಕಾರದ ಯೋಜನೆಗಳ ಅನುಷ್ಠಾನ ಬಗ್ಗೆ ತಾಲೂಕು, ಗ್ರಾಮ ಮಟ್ಟದಲ್ಲಿ ಪರಿಶೀಲಿಸಬೇಕು ಮತ್ತು ಪ್ರಧಾನಿಯವರ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯ ಪ್ರಗತಿಯನ್ನು ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಪ್ರತ್ಯೇಕವಾಗಿ ಇಡೀ ದಿನ ಸಭೆ ನಡೆಸಲಾಯಿತು. ಸಭೆಯಲ್ಲಿ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳು ಮತ್ತು ಸರ್ಕಾರದ ಇತರೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಒತ್ತು ನೀಡಬೇಕು ಎಂದು ಸೂಚಿಸಲಾಯಿತು.
ಸಿದ್ದು ಅವಧಿಯಲ್ಲಿ ನಡೆದ ಭ್ರಷ್ಟಾಚಾರ ದೇಶದಲ್ಲೆಲ್ಲೂ ನಡೆದಿಲ್ಲ: ಸಿಎಂ ಬೊಮ್ಮಾಯಿ
ದಿಢೀರ್ ಭೇಟಿ ನೀಡುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು. ಜನರ ಪರವಾಗಿ ಕೆಲಸ ಮಾಡಲು ಹಿಂದೆ ಮುಂದೆ ನೋಡಬಾರದು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ತೊಡಕುಗಳಿದ್ದರೆ ತಕ್ಷಣ ಸರ್ಕಾರದ ಗಮನಕ್ಕೆ ತಂದರೆ ಅದನ್ನು ಸರಿಪಡಿಸಲಾಗುವುದು. ಸಭೆಯಲ್ಲಿ ನೀಡಿರುವ ನಿರ್ದೇಶನಗಳು ಸಂಪೂರ್ಣವಾಗಿ ಕಾರ್ಯಗತವಾಗಬೇಕು. ಕ್ರಿಯಾಶೀಲರಾಗಿ, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಇದರಿಂದ ಸರ್ಕಾರದ ಮೇಲೆ ವಿಶ್ವಾಸ ಮೂಡಲು ಸಾಧ್ಯ ಎಂದು ತಿಳಿಸಲಾಯಿತು.
ನಗರ ವಸತಿ ಯೋಜನೆಗಳು ಬಡವರ ಕೆಲಸವಾಗಿದ್ದು, ಅಧಿಕಾರಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಫಲಾನುಭವಿಗಳ ಆಯ್ಕೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಸತಿ ಯೋಜನೆಯಡಿ ಐದು ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಮತ್ತು ನಗರ ವಸತಿ ಯೋಜನೆಯಡಿ ಒಂದು ಲಕ್ಷ ಮನೆಗಳನ್ನು ಮುಂದಿನ ಮಾಚ್‌ರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಶಾಲಾ ಕಟ್ಟಡ, ವಿದ್ಯಾರ್ಥಿ ನಿಲಯ ನಿರ್ಮಾಣ, ಯಶಸ್ವಿನಿ ಯೋಜನೆ, ಅಮೃತ್ ಯೋಜನೆ, ಮತ್ತಿತರ ಮಹತ್ವಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳ ಪ್ರತಿ ಚಟುವಟಿಕೆಯೂ ಫಲಿತಾಂಶದ ಕೇಂದ್ರಿತ ಮತ್ತು ಕಾಲಮಿತಿಯನ್ನು ಹೊಂದಿರಬೇಕು ಎಂದು ಸೂಚನೆ ನೀಡಲಾಯಿತು.
ಇನ್ನು, ಜಲಜೀವನ್ ಮಿಷನ್ ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಯೋಜನೆಯ ಪ್ರಗತಿಯನ್ನು ನಿಯಮಿತವಾಗಿ ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಬ್ಯಾಚ್ 1 ಮತ್ತು 2ರ ಕಾಮಗಾರಿಗಳು ಪ್ರಾರಂಭವಾಗಿದೆ. ಬ್ಯಾಚ್ 1ರಡಿ ಶೇ.88ರಷ್ಟುಕಾಮಗಾರಿ ಪೂರ್ಣಗೊಂಡಿವೆ. ಉಳಿದ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ನರೇಗಾದಲ್ಲಿ 13 ಕೋಟಿ ಮಾನವ ದಿನಗಳ ಗುರಿಯಲ್ಲಿ ಈಗಾಗಲೇ ಶೇ.88ರಷ್ಟುಗುರಿಸಾಧನೆಯಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಿಎಂ ನೀಡಿದ ಇತರ ಸೂಚನೆಗಳು
- ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಗುರಿಯನ್ನು ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಆಧಾರ್ ಕಾರ್ಡ್‌ಗಳನ್ನು ಆರೋಗ್ಯ ಖಾತೆಗೆ ಲಿಂಕ್ ಮಾಡಬೇಕು.
- ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 302 ನಗರ ಸ್ಥಳೀಯ ಸಂಸ್ಥೆಗಳಿಗೆ 3885 ಕೋಟಿ ರು. ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಎಲ್ಲಿ ಬಾಕಿ ಇದೆಯೋ ಅದಷ್ಟುಬೇಗ ಪೂರ್ಣಗೊಳಿಸಬೇಕು. 2023ರ ಮಾ.15ರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು.
- ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ನಿವೇಶನ ಗುರುತಿಸಲು ಒತ್ತು ನೀಡಬೇಕು. ದೌರ್ಜನ್ಯ ತಡೆ ಅಧಿನಿಯಮದಡಿ ದಾಖಲಾಗಿರುವ ಕೊಲೆ ಪ್ರಕರಣದಲ್ಲಿ ಮೃತರ ಕುಟುಂಬದ ಅವಲಂಬಿತರಿಗೆ ಅನುಕಂಪದ ನೌಕರಿ ನೀಡಲು ಬಾಕಿ ಇರುವ ಪ್ರಸ್ತಾವನೆಗಳನ್ನು ಪ್ರಾದೇಶಿಕ ಆಯುಕ್ತರು ತ್ವರಿತವಾಗಿ ವಿಲೇವಾರಿಗೊಳಿಸಬೇಕು.
- ರಸಗೊಬ್ಬರ ವಿತರಣೆಗೆ ನಿಗಾವಹಿಸಬೇಕು. ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರಿಗೆ ಸಮಸ್ಯೆಯಿಂದ ರಸಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಬೇಕು.
- ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಕುರಿತು ಅರ್ಜಿ ತಿರಸ್ಕರಿಸುವ ಬ್ಯಾಂಕರ್‌ಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಬೇಕು.
- ರಾಜ್ಯದ 5946 ಪಂಚಾಯಿತಿಗಳ ಪೈಕಿ 5200 ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯಾರಂಭ ಮಾಡಿದೆ. ಉಳಿದ ಪಂಚಾಯಿತಿಗಳಲ್ಲಿಯೂ ಶೀಘ್ರವೇ ಪ್ರಾರಂಭಿಸಬೇಕು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ
- ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಮಂಜೂರಾದ ಕಾಮಗಾರಿಗಳನ್ನು ಪ್ರಸಕ್ತ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸಬೇಕು. ಐದು ಸಾವಿರ ಕೋಟಿ ರು. ಕಾರ್ಯಕ್ರಮ ಇದಾಗಿದ್ದು, ಮಾ.31ರೊಳಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಮುಂದಿನ ತಿಂಗಳು ನ.14ರೊಳಗೆ ಶಾಲಾ ಕೊಠಡಿಗಳ ನಿರ್ಮಾಣ ಪ್ರಾರಂಭವಾಗಬೇಕು.
- ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಜಿಲ್ಲಾ ಪಂಚಾಯತ್‌ನಲ್ಲಿ 30 ಕೋಟಿ ರು.ನಷ್ಟು ಅನುದಾನ ಇದ್ದು, ಲಸಿಕೆ, ಔಷಧಿ ಮತ್ತು ಪೌಷ್ಟಿಕ ಆಹಾರದ ವೆಚ್ಚ ಭರಿಸಬೇಕು.