ಶರಣು ಸೊಲಗಿ

ಮುಂಡರಗಿ(ಮೇ.11): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಮೆಂಟ್‌ ಉತ್ಪಾದನೆ ಮತ್ತು ಸಾಗಾಣಿಕೆಯಲ್ಲಿ ತೀವ್ರ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. 50 ಕೆಜಿ ಸಿಮೆಂಟ್‌ನ ಬ್ಯಾಗೊಂದರ ಬೆಲೆ 60 ರಿಂದ 80 ರಷ್ಟು ಏರಿಕೆ ಕಂಡುಬಂದಿದೆ. ಲಾಕ್‌ಡೌನ್‌ ತೆರವು ಹಿನ್ನೆಲೆಯಲ್ಲಿ ಆರಂಭವಾಗಿರುವ ಕಟ್ಟಡ ನಿರ್ಮಾಣ ಕಾಮಗಾರಿಯ ಮೇಲೆ ಇದರಿಂದ ತೀವ್ರ ಪರಿಣಾಮ ಉಂಟಾಗಿದೆ. ಬೆಲೆ ಏರಿಕೆಯಿಂದ ಕಾಮಗಾರಿ ಮಂದ ಗತಿಯಲ್ಲಿ ಸಾಗಿದ್ದು, ಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ.

2 ತಿಂಗಳ ಹಿಂದೆ ಪ್ರತಿಷ್ಠಿತ ಕಂಪನಿಯ ಸಿಮೆಂಟ್‌ ಚೀಲವೊಂದು 280 ರಿಂದ 300ಗಳಿಗೆ ದೊರೆಯುತ್ತಿತ್ತು. ಇನ್ನೊಂದು ಕಂಪನಿಯದ್ದು 320 ರಿಂದ 330ಕ್ಕೆ ಸಿಗುತ್ತಿತ್ತು. ಆದರೆ ಇದೀಗ ಅತೀ ಕಡಿಮೆ ದರ ಅಂದರೆ 350 ಗಳಿಗೆ ಬಂದು ನಿಂತಿದೆ. 350 ರಿಂದ 400 ತನಕ ಸಿಮೆಂಟ್‌ ದರ ಇದೆ.

ಕೊರೋನಾ ಕಾಟ: ಮಾಸ್ಕ್‌ ಧರಿಸದಿದ್ದರೆ 250 ರೂ. ದಂಡ..!

ಸರ್ಕಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಿದೆ. ಕಾರ್ಮಿಕರಿಗೆ ಕೆಲಸ ನೀಡಬೇಕೆಂಬ ಉದ್ದೇಶದಿಂದ ಅವಕಾಶ ಕಲ್ಪಿಸಿದೆ. ಆದರೆ ಸಿಮೆಂಟ್‌ ದರ ಹೆಚ್ಚಾಗಿದ್ದರಿಂದ ಬಹುತೇಕ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಮುಂದಾಗುತ್ತಿಲ್ಲ. ಕಂಪನಿಯವರೇ ದರ ಹೆಚ್ಚಿಸಿದ್ದಾರೆ ನಾವೇನೂ ಮಾಡುವಂತಿಲ್ಲ ಎಂದು ಡೀಲರ್‌ಗಳು ಹೇಳುತ್ತಿದ್ದಾರೆ. ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮನೆ ನಿರ್ಮಾಣ ಕಾಮಗಾರಿಗೂ ಇದರಿಂದ ತೀವ್ರ ಹೊಡೆತ ಬಿದ್ದಿದೆ. ಇದರಿಂದ ಗೌಂಡಿಗಳು, ಮೇಸ್ತ್ರಿಗಳು, ಗಾರೆ ಕೆಲಸದವರು ತೊಂದರೆಗೆ ಸಿಲುಕಿದ್ದಾರೆ.

ಈ ಹಿಂದೆ ಸಿಮೆಂಟ್‌ ದರ ಕಡಿಮೆ ಇರುವ ಸಂದರ್ಭದಲ್ಲಿ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡು ಕಾಮಗಾರಿ ಪಡೆದ ಅನೇಕ ಗುತ್ತಿಗೆದಾರರು ಸಹ ದಿಢೀರ್‌ ಸಿಮೆಂಚ್‌ ದರ ಏರಿಕೆಯಿಂದಾಗಿ ಸಾಕಷ್ಟುಹಾನಿ ಅನುಭವಿಸುವಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಸಿಮೆಂಟ್‌ ಕಂಪನಿಗಳಿಗೆ ತಾಕೀತು ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ದರಕ್ಕೆ ಮಾರಾಟ ಮಾಡುವಂತೆ ಸೂಚಿಸಬೇಕೆನ್ನುವುದು ಸಾರ್ವಜನಿಕರ ಹಾಗೂ ಕಟ್ಟಡ ಕಾರ್ಮಿಕರ ಅಭಿಪ್ರಾಯವಾಗಿದೆ.

ಸಿಮೆಂಟ್‌ ದರ ಏರಿಕೆಯಾಗಿದ್ದರಿಂದಾಗಿ ನಿತ್ಯವೂ ಗ್ರಾಹಕರು ಕಿರಿಕಿರಿ ಮಾಡುತ್ತಿದ್ದಾರೆ. ಹೀಗಾಗಿ ನಿತ್ಯವೂ ವ್ಯಾಪಾರ ಕಡಿಮೆಯಾಗುತ್ತಿದೆ. ಆದರೆ ಕಂಪನಿ ಕೊಡುವ ದರಕ್ಕೆ ಮಾರಾಟ ಮಾಡುವುದು ನಮ್ಮ ಕರ್ತವ್ಯ. 50 ಬ್ಯಾಗ್‌ ಸಿಮೆಂಟ್‌ ಕೊಳ್ಳುವವರು 10 ಬ್ಯಾಗ್‌ ಕೊಳ್ಳುತ್ತಿದ್ದಾರೆ. ಮೊದಲಿಗಿಂತ ಇದೀಗ ವ್ಯಾಪಾರ ಸಂಪೂರ್ಣ ಕಡಿಮೆಯಾದಂತಾಗಿದೆ ಎಂದು ಸಿಮೆಂಟ್‌ ವ್ಯಾಪಾರಸ್ಥ ರಜನಿಕಾಂತ್‌ ದೇಸಾಯಿ ಅವರು ಹೇಳಿದ್ದಾರೆ. 

ಕಟ್ಟಡ ಕಾಮಗಾರಿ ಸಾಕಷ್ಟಿದ್ದರೂ ಸಿಮೆಂಟ್‌ ದರ ಹೆಚ್ಚಾಗಿದ್ದರಿಂದ ಮನೆ ಕಟ್ಟಿಸುವವರು ಹಿಂದೇಟು ಹಾಕುತ್ತಿದ್ದಾರೆ. ಸ್ವಲ್ಪ ದಿನ ಕಾದು ನೋಡೋಣ ಎನ್ನುತ್ತಿದ್ದಾರೆ. ಹೀಗಾಗಿ ಕಟ್ಟಡ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದ್ದು, ಎಲ್ಲೋ ಒಂದೆರಡು ಕಾಮಗಾರಿ ನಡೆಯುತ್ತಿವೆ. ಸರ್ಕಾರ ಸಿಮೆಂಟ್‌ ದರ ಕಡಿಮೆ ಮಾಡಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಟ್ಟಡ ಕಾಮಗಾರಿ ಮೇಸ್ತ್ರಿ ರಿಜ್ವಾನ್‌ ಅಲಿ ಹಾತಲಗೇರಿ ತಿಳಿಸಿದ್ದಾರೆ.