ಮೈಸೂರು ದಸರಾ ಆಚರಣೆ ವೇಳೆ ಪೊಲೀಸರ ಅನುಚಿತ ವರ್ತನೆ ಹಾಗೂ ಚಿನ್ನದ ಅಂಬಾರಿ ಆನೆ ಆಯ್ಕೆ ಬಗ್ಗೆ ಮಾಹಿತಿ ನೀಡದ ಸರ್ಕಾರದ ವಿರುದ್ಧ ರಾಜಮನೆತನದ ಪ್ರಮೋದಾದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಚಿವ ಯತೀಂದ್ರ ಸಿದ್ದರಾಮಯ್ಯ, ಅರಮನೆ ಹಾಗೂ ದಸರಾ ಸರ್ಕಾರಕ್ಕೆ ಸೇರಿದ್ದು, ಆನೆ ಬಗ್ಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮೈಸೂರು: ತಲೆತಲಾಂತರಗಳಿಂದ ಮೈಸೂರು ರಾಜರ ಒಡೆತನದಲ್ಲಿರುವ ಚಿನ್ನದ ಅಂಬಾರಿಯ ವಿಷಯವಾಗಿ ಇದೀಗ ರಾಜಮನೆತನ ಮತ್ತು ಸರ್ಕಾರ ನಡುವೆ ಜಟಾಪಟಿ ಶುರುವಾಗಿದೆ. ದಸರಾ ಆಚರಣೆಯ ಸಂದರ್ಭದಲ್ಲಿ ಸರ್ಕಾರದ ಹಾಗೂ ಪೊಲೀಸರ ನಡೆ ಮತ್ತು ಸಮನ್ವಯದ ಕೊರತೆಯ ಬಗ್ಗೆ ರಾಣಿ ಪ್ರಮೋದಾದೇವಿ ಅವರು ಆಕ್ಷೇಪ ವ್ಯಕ್ತಪಡಿಸಿ, ಸುದೀರ್ಘ ಪತ್ರ ಬರೆದಿದ್ದಾರೆ. ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಯಾವ ಆನೆ ಹೊರಲಿದೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಯು ಕೊನೆಯ ಕ್ಷಣದವರೆಗೂ ಅರಮನೆಗೆ ನೀಡದೆ ಗೋಪ್ಯವಾಗಿಟ್ಟಿತ್ತು ಎನ್ನುವ ಕಾರಣಕ್ಕೆ ರಾಜಮನೆತನಕ್ಕೆ ತುಂಬಾ ಅಸಮಾಧಾನ ಉಂಟಾಗಿದೆ. ದಸರಾ ಆಚರಣೆಯ ಧಾರ್ಮಿಕ ವಿಧಿವಿಧಾನಗಳ ಸಮಯದಲ್ಲಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದು, ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜೊತೆಮಾತನಾಡಿದ್ದ ರಾಣಿ ಪ್ರಮೋದಾ ದೇವಿ ಅವರು, ರಾಜ ಕುಟುಂಬದ ಖಾಸಗಿ ಪಾರ್ಕಿಂಗ್ ಸ್ಥಳದ ಅತಿಕ್ರಮಣ, ವಿವೇಚನೆಯಿಲ್ಲದೆ ಬ್ಯಾರಿಕೇಡ್ ಅಳವಡಿಸಿರುವುದರಿಂದ ಅರಮನೆ ಆಚರಣೆಗಳಿಗೆ ಅಡ್ಡಿಯಾಗುತ್ತಿದೆ. ಇಂತಹ ಘಟನೆಗಳಿಂದಲೇ ವಿಜಯದಶಮಿಯಂದು ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆ ನಡೆಸುವ ನಿರ್ಧಾರವನ್ನೇ ಮರುಪರಿಶೀಲಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಕಾರ್ಯಕ್ರಮಕ್ಕೆ ಕೇವಲ ಐದು ದಿನಗಳಿರುವಾಗ ಯಾವ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಕೊಳ್ಳಬೇಕಾಯಿತು. ಇದರಿಂದ ಅನಗತ್ಯ ಒತ್ತಡ ಉಂಟಾಯಿತು ಎಂದಿದ್ದರು.
ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರು ಸೆಲ್ಫಿ ಹಾಗೂ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಂಬಾರಿ ಬಳಿ ಇರಲು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಅಧಿಕೃತ ಪಾಸ್ ನೀಡಲಾಗಿದ್ದರೂ, ನಾನಾ ಸರಕಾರಿ ಇಲಾಖೆಗಳ ಅನಧಿಕೃತ ವ್ಯಕ್ತಿಗಳು ಅಲ್ಲಿ ಕಾಣಿಸಿಕೊಳ್ಳುತ್ತಿರುವುದು ಭರವಸೆಯ ಉಲ್ಲಂಘನೆಯಾಗಿದೆ ಎಂದು ಅವರು ನೊಂದು ನುಡಿದಿದ್ದರು.
ಸರ್ಕಾರದ ತಿರುಗೇಟು
ಮಾಧ್ಯಮಗಳ ಮುಂದೆ ಈ ಮಾತುಗಳನ್ನಾಡಿರುವುದಕ್ಕೆ ಹಾಗೂ ಅವರ ಪತ್ರದ ವಿಚಾರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಖಡಕ್ ಉತ್ತರ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅರಮನೆ ಕೂಡ ಸರ್ಕಾರದ್ದು. ಅವರಿಗೆ ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅಂಬಾರಿಗೂ ಸರ್ಕಾರ ದುಡ್ಡು ಕೊಡುತ್ತದೆ. ಏನಾದರೂ ಸಮಸ್ಯೆ ಇದಿದ್ರೆ ಸರ್ಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ಏನೂ ತಂದಿಲ್ಲ. ಏಕಾಏಕಿ ಮಾಧ್ಯಮಗಳಿಗೆ ಪತ್ರ ಬರೆದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅವರೇನು ಸರ್ಕಾರಕ್ಕೆ ಪತ್ರ ಬರೆದಿಲ್ಲ. ಅಗತ್ಯವಿದರೆ ನಾವು ಕೆಲವರನ್ನು ಸರ್ಕಾರದಿಂದ ಅವರ ಬಳಿಗೆ ಕಳುಹಿಸುತ್ತೇವೆ. ಏನು ಸಮಸ್ಯೆಯಾಗಿದೆ ಎಂಬುದರ ಬಗ್ಗೆ ಬೇಕಿದ್ದರೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಪ್ರಮೋದಾದೇವಿ ಒಡೆಯರ್ ಹೇಳಿರುವ ಸಮಸ್ಯೆ ಬಗೆಹರಿಸುತ್ತೇವೆ. ಆದರೆ ಅವರು ಹೇಳಿರುವುದನ್ನಲ್ಲ ಒಪ್ಪಲು ಆಗುವುದಿಲ್ಲ. ಅವರು ಹೇಳಿದ ರೀತಿ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ಸರ್ಕಾರದ್ದು ದಸರಾ ಅಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರ್ಕಾರದ ದಸರಾಗೂ ಇತಿಹಾಸ ಇದೆ ಎಂದು ಹೇಳಿದ್ದಾರೆ.
ಅವರಲ್ಲಿಯೇ ಗೊಂದಲ
1972ರಿಂದಲೂ ಸರ್ಕಾರ ದಸರಾ ನಡೆಸುತ್ತಿದೆ. ಅದನ್ನು ದಸರಾ ಅಲ್ಲ ಎಂಬುದು ನಾವು ಒಪ್ಪುವುದಿಲ್ಲ. ಅಂಬಾರಿ ಆನೆ ಯಾವುದು ಎಂದು ಕಾನೂನು ಪ್ರಕಾರ ಅವರಿಗೆ ಹೇಳುವ ಅವಶ್ಯಕತೆ ಇಲ್ಲ. ಅಂಬಾರಿ ಆನೆ ತೀರ್ಮಾನ ಆಗಿದ್ದೆ ಕೊನೆ ಘಳಿಗೆಯಲ್ಲಿ. ಮೊದಲು ಮಹೇಂದ್ರ, ಆಮೇಲೆ ಧನಂಜಯ ಎಂದರು, ಆಮೇಲೆ ಪ್ರಶಾಂತ ಎಂದರು. ಇಲ್ಲೇ ಸ್ವಲ್ಪ ಗೊಂದಲ ಇತ್ತು. ಹೀಗಾಗಿ ಆಯ್ಕೆ ತಡವಾಗಿದೆ. ಅವರಿಗೆ ಅಂಬಾರಿ ಆನೆ ಯಾವುದು ಎಂಬುದನ್ನು ಹೇಳುವ ಅಗತ್ಯ ಇಲ್ಲ ಎಂದಿದ್ದಾರೆ.







