ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ವಿಸ್ತರಿಸುವ ಯೋಜನೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕಾವೇರಿ ವಿವಾದದ ನಡುವೆ ಈ ಯೋಜನೆ ಜಾರಿಯಾದರೆ ಬೆಂಗಳೂರು ಮಿನಿ ತಮಿಳುನಾಡಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ತಾಂತ್ರಿಕ ವ್ಯತ್ಯಾಸಗಳು ಮತ್ತು ಸಾರ್ವಜನಿಕ ಆಕ್ರೋಶದಿಂದಾಗಿ ಈ ಯೋಜನೆಗೆ ದೊಡ್ಡ ವಿಘ್ನ ಎದುರಾಗಿದೆ.
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ (Yellow Line) ಬೆಂಗಳೂರಿನ ಆರ್ವಿ ರಸ್ತೆ (RV Road) ಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ 19.15 ಕಿ.ಮೀ ಉದ್ದದ ಎತ್ತರಿಸಿದ (Elevated) ಮೆಟ್ರೋ ಮಾರ್ಗವಾಗಿದೆ. ಸದ್ಯ ಈ ಲೈನ್ ಅನ್ನು ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ವಿಸ್ತರಿಸುವ ಯೋಜನೆ ಇದ್ದು, ಇದಕ್ಕೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಸುಮಾರು 10 ಕಿ.ಮೀ ವರೆಗೆ (ಹೊಸ 9 ನಿಲ್ದಾಣಗಳೊಂದಿಗೆ) ಹಳದಿ ಮಾರ್ಗವನ್ನು ವಿಸ್ತರಿಸಲು ಪ್ರಸ್ತಾವನೆ ಇದೆ. ಹೀಗೆ ಮಾಡುವುದು ಬೇಡ ಎನ್ನುವುದು ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಕರವೇ ಮುಖಂಡ ಪ್ರವೀಣ್ ಶೆಟ್ಟಿ ಸೇರಿದಂತೆ ಇತರ ಕನ್ನಡಿಗರ ಆಗ್ರಹವಾಗಿದೆ.
ಏಕೆ ವಿರೋಧ?
ಹೊಸೂರಿನವರೆಗೆ ನಮ್ಮಮೆಟ್ರೊ ವಿಸ್ತರಿಸಿದರೆ, ತಮಿಳುನಾಡಿಗೆ ಕರ್ನಾಟಕದ ಮೆಟ್ರೋವನ್ನು ವಿಸ್ತರಿಸಿದಂತೆ ಆಗುತ್ತದೆ. ಇದಾಗಲೇ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಎರಡೂ ರಾಜ್ಯಗಳ ನಡುವೆ ಭಾರಿ ವಿವಾದ ಇದೆ. ಇಂಥ ಸಂದರ್ಭದಲ್ಲಿ, ಬೆಂಗಳೂರಿಗೆ ಸೀಮಿತವಾಗಿರುವ ನಮ್ಮೆ ಮೆಟ್ರೋ ತಮಿಳುನಾಡಿಗೆ ವಿಸ್ತರಿಸಬಾರದು ಎನ್ನುವುದು ಇವರ ಆಗ್ರಹ. ಒಂದು ವೇಳೆ ಹೀಗೆ ಮಾಡಿದರೆ, ಬೆಂಗಳೂರು ನಗರ ಮಿನಿ ತಮಿಳುನಾಡು ಆಗಿ ಪರಿವರ್ತನೆಯಾಗುವ ಅಪಾಯವಿದೆ ಎನ್ನುವುದು ಅವರ ಆಕ್ರೋಶ. ಇದಾಗಲೇ ಬೆಂಗಳೂರಿನಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎರಡೂ ರಾಜ್ಯಗಳ ನಡುವೆ ಮೆಟ್ರೋ ಆದರೆ ಇದರ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ ಎನ್ನುವುದು ಕನ್ನಡ ಪರ ಸಂಘಟನೆಗಳ ಎಚ್ಚರಿಕೆ.
ಹೀಗೆನಾದರೂ ನಮ್ಮ ಮೆಟ್ರೋ ವಿಸ್ತರಿಸಿದರೆ ಉಗ್ರ ಹೋರಾಟ ಮಾಡುವುದಾಗಿ, ಸಂಘಟನೆ ಎಚ್ಚರಿಕೆ ಕೊಟ್ಟಿದೆ. ಈ ಕುರಿತು, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಪ್ರವೀಣ್ ಶೆಟ್ಟಿ, 'ಕಾವೇರಿ ನೀರನ್ನು ಬಿಡದ ಹಾಗೂ ಮೇಕೆದಾಟು ಯೋಜನೆಗೆ ಅನುಮತಿ ನೀಡದ ನೆರೆ ರಾಜ್ಯಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಅಗತ್ಯವಿಲ್ಲ.ಒಂದು ವೇಳೆ ಹೀಗೆ ಅನುಮತಿ ಕೊಟ್ಟರೆ, ನಮ್ಮ ಮೆಟ್ರೋ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂಜಿಆರ್ ಅವರ ಹೆಸರುಗಳನ್ನು ಇಡುವ ಪರಿಸ್ಥಿತಿಯೂ ಬರಬಹುದು. ಅದರಲ್ಲೂ, ಇದು ಯಾವುದೇ ಜನಾಂಗೀಯ ದ್ವೇಷದ ಪ್ರಶ್ನೆಯಲ್ಲ, ಬದಲಿಗೆ ಕರ್ನಾಟಕದ ಹಿತಾಸಕ್ತಿಯ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮೆಟ್ರೋ ವಿಸ್ತರಣೆ ಆಗಬಾರದು. ಇದಕ್ಕಾಗಿ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ.
ಏನಿದು ಯೋಜನೆಯ ಪ್ರಸ್ತಾವ?
ತಮಿಳುನಾಡು ಸರ್ಕಾರವು ಹೊಸೂರಿನಿಂದ ಬೊಮ್ಮಸಂದ್ರದವರೆಗೆ 23 ಕಿ.ಮೀ ಕಾರಿಡಾರ್ ನಿರ್ಮಿಸಲು ಆಸಕ್ತಿ ತೋರಿಸಿತ್ತು. ಅದರಂತೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹೊಸೂರು-ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋ ಯೋಜನೆಗೆ ಶೀಘ್ರ ಅನುಮೋದನೆ ಮತ್ತು ಹಣಕಾಸು ನೆರವು ನೀಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಹೊಸೂರಿನ ಆರ್ಥಿಕ ಬೆಳವಣಿಗೆ ಮತ್ತು ಸಾವಿರಾರು ಕಾರ್ಮಿಕರ ಪ್ರಯಾಣಕ್ಕೆ ಇದು ಅಗತ್ಯ ಎಂದು ತಮಿಳುನಾಡು ವಾದ ಮಂಡಿಸಿದೆ. ಇದಕ್ಕೆ ಪೂರಕವಾಗಿ ಕರ್ನಾಟಕವು ಬೊಮ್ಮಸಂದ್ರದಿಂದ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಮೂಲಕ ಗಡಿಯವರೆಗೆ 9 ನಿಲ್ದಾಣಗಳಿರುವ ಮಾರ್ಗಕ್ಕೆ ಚಾಲನೆ ನೀಡಲು ಮುಂದಾಗಿತ್ತು. ಆದರೆ ತಾಂತ್ರಿಕ ವ್ಯತ್ಯಾಸಗಳು (BMRCL ನ 750V DC ವಿದ್ಯುತ್ ವ್ಯವಸ್ಥೆ vs ತಮಿಳುನಾಡಿನ 25kV AC ವ್ಯವಸ್ಥೆ) ಮತ್ತು ಪ್ರಸ್ತುತ ಸಾರ್ವಜನಿಕ ಆಕ್ರೋಶದಿಂದಾಗಿ ಈ ಯೋಜನೆಗೆ ದೊಡ್ಡ ವಿಘ್ನ ಎದುರಾಗಿದೆ.







