ಗಜೇಂದ್ರಗಡ ತಾಲೂಕಿನ ವಿದ್ಯಾರ್ಥಿಗಳು SSLCಯಲ್ಲಿ ಉತ್ತಮ ಅಂಕ ಗಳಿಸುತ್ತಿದ್ದರೂ, ಉನ್ನತ ವ್ಯಾಸಂಗಕ್ಕೆ ಸ್ಥಳೀಯವಾಗಿ ಉತ್ತಮ ಕಾಲೇಜುಗಳಿಲ್ಲ. ಈ ಕಾರಣದಿಂದ ಪ್ರವೀಣಕುಮಾರ ಸೊಬಗಿನರಂತಹ ಪ್ರತಿಭೆಗಳು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದು ಪಾಲಕರಿಗೆ ಆರ್ಥಿಕ ಹೊರೆಯಾಗಿದೆ.

ಎಸ್.ಎಂ. ಸೈಯದ್

ಗದಗ : ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಛಾಪು ಮೂಡಿಸಿದ ತಾಲೂಕಿನ ಸೂಡಿ ಗ್ರಾಮದ ಪ್ರವೀಣಕುಮಾರ ಸೊಬಗಿನ ಸಾಧನೆಗೆ ಶಹಭಾಶ್‌ಗಿರಿ ಜತೆಗೆ ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಉಚಿತ ಪ್ರವೇಶದ ಆಹ್ವಾನಗಳು ಬರುತ್ತಿವೆ. ಆದರೆ, ಉತ್ತಮ ಅಂಕ ಪಡೆದರೂ ಗಜೇಂದ್ರಗಡ ಹಾಗೂ ರೋಣ ತಾಲೂಕಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅನ್ಯ ಜಿಲ್ಲೆಗಳಿಗೆ ತೆರಳುವ ದುಸ್ಥಿತಿಯಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ತಾಲೂಕು ದಾಖಲಿಸುತ್ತಿದೆ. ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಇಟಗಿ ಗ್ರಾಮದ ಪಿಎಂಶ್ರೀ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರತಿಭೆಗಳ ಸಾಲು

2021ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಜೇಂದ್ರಗಡದ ಕಿರಣ ತಾಳಿಕೋಟಿ 625ಕ್ಕೆ 625 ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಗೋಗೇರಿ ಗ್ರಾಮದ ಸರ್ಕಾರಿ ಶಾಲೆಯ ಪ್ರತಿಭಾ ಮುತ್ತಪ್ಪ ಸೊಬರದ ವಿದ್ಯಾರ್ಥಿನಿ 2022ನೇ ಸಾಲಿನಲ್ಲಿ 625ಕ್ಕೆ 622 ಅಂಕ ಗಳಿಸಿದ್ದರು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಿರಣ ತಾಳಿಕೋಟಿ ಬೆಳಗಾವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಪ್ರತಿಭಾ ಮುತ್ತಪ್ಪ ಸೊಬರದ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಟ್ಟಿ ಹೆಚ್ಚಾಗುತ್ತದೆ.

ಆದರೆ ಜಿಲ್ಲೆ ಹಾಗೂ ರಾಜ್ಯವೇ ತಿರುಗಿ ತಾಲೂಕಿನತ್ತ ನೋಡುವ ಫಲಿತಾಂಶ ಬಂದರೂ ಉನ್ನತ ವ್ಯಾಸಂಗದ ಕನಸನ್ನು ಈಡೇರಿಸಿಕೊಳ್ಳಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಅನೇಕ ವಿದ್ಯಾರ್ಥಿಗಳ ಕನಸನ್ನು ಕಮರುವಂತೆ ಮಾಡುತ್ತಿದೆ.

ಆರ್ಥಿಕ ಸಂಕಷ್ಟ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಗನಿಗೆ ಉಚಿತ ಪ್ರವೇಶ ನೀಡಲು ಅನೇಕ ಕಾಲೇಜುಗಳು ಸಂಪರ್ಕಿಸುತ್ತಿವೆ. ಆದರೆ ಮುಂದಿನ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಚಿಂತೆಗೆ ದೂಡಿದೆ ಎಂದು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿಯ ತಾಯಿ ಲಲಿತಾ ಈರಪ್ಪ ಸೊಬಗಿನ ತಿಳಿಸಿದರು.

ಇದನ್ನೂ ಓದಿ: ಗಜೇಂದ್ರಗಡದಲ್ಲಿ ಯುರೋಪ್, ಮಧ್ಯ ಏಷ್ಯಾದ ವಲಸೆ ಹಕ್ಕಿ 'ಸಣ್ಣ ಕೊಂಬಿನ ಗೂಬೆ' ಗೋಚರ!

ಅನುಕೂಲ

2022ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 622 ಅಂಕ ಪಡೆದ ನನ್ನ ಮಗಳು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ತಾಲೂಕಿನಲ್ಲಿಯೇ ಉನ್ನತ ವ್ಯಾಸಂಗ ಕೇಂದ್ರಗಳಿದ್ದರೆ ಮತ್ತಷ್ಟು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಗೋಗೇರಿ ಗ್ರಾಮದ ಮುತ್ತಪ್ಪ ಸೊಬರದ ತಿಳಿಸಿದರು.

ಇದನ್ನೂ ಓದಿ: ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ