ಗಜೇಂದ್ರಗಡ(ಡಿ.19): ಫೀ ತುಂಬಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರದಬ್ಬಿದ ಘಟನೆ ಬುಧವಾರ ಜ. ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ನಡೆದಿದ್ದು, ಶಾಲೆಯ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಶುಲ್ಕ ಪಾವತಿಸದ ಎಲ್‌ಕೆಜಿ ಯಿಂದ 12ನೇ ತರಗತಿಯ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಲೆಯ ಕಾರಿಡಾರ್‌ನಲ್ಲಿಯೇ ಕೂಡ್ರಿಸಲಾಗಿತ್ತು. ಇಂಗ್ಲಿಷ್‌ ಪಠ್ಯದ ಕಿರು ಪರೀಕ್ಷೆ ನಡೆಯುತ್ತಿದ್ದರೂ ಅದಕ್ಕೆ ಅವಕಾಶ ಕೊಡದೆ ಹೊರಹಾಕಿದ್ದರಿಂದ ಶಾಲೆಯ ಹೊರಗೆ ಕುಳಿತ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದರು. ಈ ವಿಷಯ ತಿಳಿದ ಶಾಲೆಗೆ ಧಾವಿಸಿದ ಕೆಲವು ಪಾಲಕರು ಶಾಲಾ ಫೀ ತುಂಬಿಲ್ಲ ಎಂದರೆ ನಮಗೆ ನೋಟಿಸ್‌ ನೀಡಬೇಕಿತ್ತು ಅಥವಾ ನಮ್ಮನ್ನು ಸಂಪರ್ಕಿಸಬೇಕಿತ್ತು. ಆದರೆ, ನೀವು ಹೀಗೆ ಮಕ್ಕಳನ್ನು ಹೊರಗೆ ಕೂಡ್ರಿಸಿದರೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಏನಾದರೂ ಅವಘಡದ ಪರಿಣಾಮವಾದರೆ ಯಾರು ಹೊಣೆ ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಕರು ಮಾಡಬೇಕೆ ಹೊರತು ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಮಕ್ಕಳನ್ನು ಪರೀಕ್ಷಾ ಕೊಠಡಿಯಿಂದ ಹೊರ ದಬ್ಬಿದ್ದು ಖಂಡನಾರ್ಹ. ಸರ್ಕಾರ ಇಂತಹ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಭೀಮಣ್ಣ ಇಂಗಳೆ ಅವರು ಆಗ್ರಹಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ನಂಜುಂಡಯ್ಯ ಅವರು, ಫೀ ತುಂಬಿಲ್ಲ ಎನ್ನುವ ಕಾರಣಕ್ಕೆ ಮಕ್ಕಳನ್ನು ಹೊರಗೆ ನಿಲ್ಲಿಸಿದ್ದು ತಪ್ಪು. ಈ ಕುರಿತು ಶಾಲಾ ಪ್ರಾಚಾರ್ಯರು ಸಂಪರ್ಕಕ್ಕೆ ಸಿಕ್ಕಿಲ್ಲ. ಭೇಟಿ ನೀಡುವ ಮೂಲಕ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯ ರಶ್ಮಿ ದೇಶಪಾಂಡೆ ಅವರು, ಪ್ರಾಚಾರ್ಯರ ಮೀಟಿಂಗಾಗಿ ಗದಗದಲ್ಲಿದ್ದು, ಬುಧವಾರ ನಮ್ಮ ಶಾಲೆಯಲ್ಲಿ ಕಿರು ಪರೀಕ್ಷೆ ನಡೆಯುತ್ತಿತ್ತು. ಹಾಲ್‌ ಟಿಕೆಟ್‌ಗೆ ಪ್ರಾಚಾರ್ಯರ ಸಹಿಗಾಗಿ ಶಿಕ್ಷಕರು ನನ್ನ ಆಫೀಸ್‌ಗೆ ಕಳುಹಿಸಿದ್ದಾರೆ. ಆದರೆ, ನಾನು ಗದಗ ಬಂದಿದ್ದೆ. ಸಹಿ ಮಾಡಲು ಸಹ ಶಿಕ್ಷಕಕರಿಗೆ ಸೂಚಿಸಿದ್ದೆ. ಹೀಗಾಗಿ ವಿದ್ಯಾರ್ಥಿಗಳು ಹೊರಗಡೆ ಇದ್ದರು. ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಹೊರಗಡೆ ಹಾಕಿಲ್ಲ ಎಂದು ತಿಳಿಸಿದ್ದಾರೆ.