Tungabhadra Dam: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಗಂಗಾವತಿ (ಜು.29): ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜುಲೈ 31 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ತಾಲೂಕಿನ ಪಂಪಾಸರೋವರದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ದಿನ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಜೊತೆ ಜಲಾಶಯಕ್ಕೆ ತೆರಳಿ ಇನ್ನು ಎರಡು ಮೂರು ದಿನಗಳಲ್ಲಿ ವಿಜಯನಗರ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಲಾಗಿದೆ. ಆದರೂ ಅಧಿಕಾರಿಗಳ ಗಮನ ಸೆಳೆಯಲು ಗಂಗಾವತಿ ಮತ್ತು ಕೊಪ್ಪಳ ಭಾಗದವರು ಜೊತೆಯಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.

ರೈತರು ಎಲ್ಲರು ಸೇರಿ ಹೋರಾಟ ನಡೆಸಬೇಕೆಂದು ನಿರ್ಧರಿಸಲಾಯಿತು. ಜಲಾಶಯದಿಂದ 11 ಎ ವಿಜಯನಗರ ಕಾಲುವೆಗೆ ನೀರು ಬಿಡಲೆಬೇಕೆಂದು ಒತ್ತಾಯಿಸಲಾಗುತ್ತದೆ ಎಂದರು. ಜುಲೈ.31 ರಂದು ಗಂಗಾವತಿ ಮತ್ತು ಕೊಪ್ಪಳ ಭಾಗದ ರೈತರು ಲಿಂಗಾಪುರ ಬಳಿ ಸೇರಿ ಅಲ್ಲಿಂದ ಜಲಾಶಯಕ್ಕೆ ತೆರಳಿ ನೀರಾವರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.

ರೈತರು ಒಂದಾಗಿ ಹೋರಾಟ ಮಾಡಬೇಕು

ಸಿಂಗನಾಳ ವಿರೂಪಾಕ್ಷಪ್ಪ ಅವರು ಮಾತನಾಡಿ ನಾವೆಲ್ಲ ರೈತರು ಒಂದಾಗಿ ಹೋರಾಟ ಮಾಡಬೇಕು, ರಾಜ್ಯದಲ್ಲಿ ಈ ಕಾಂಗ್ರೆಸ್ ಪಕ್ಷದ ಆಡಳಿತ ಇರುವುದರಿಂದ ಈ ರೀತಿ ರೈತರಿಗೆ ತೊಂದರೆಗಳು ಆಗುತ್ತಿದೆ ಎಂದು ದೂರಿದರು. ಮಾಜಿ ಸಂಸದ ಶಿವರಾಮ ಗೌಡ, ಸಿದ್ದರಾಮಯ್ಯ ಸ್ವಾಮಿ, ಗ್ರಾಮೀಣ ಅಧ್ಯಕ್ಷ ಡಿ.ಕೆ ಆಗೊಲಿ, ಮನೋಹರ ಗೌಡ, ರೈತ ಮುಖಂಡ ಗಿರಿಗೌಡ, ತಿಪ್ಪರುದ್ರ ಸ್ವಾಮಿ, ಚನ್ನಪ್ಪ ಮಳಗಿ, ನಾರಾಯಣಪ್ಪ, ಆನೆಗುಂದಿ ಹಾಗೂ ಸುತ್ತಮುತ್ತಲಿನ ಹಳ್ಳಿಯ ರೈತರು ಭಾಗವಹಿಸಿದ್ದರು.