10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್!
ಒಂದೆಡೆ ಕೃಷಿ ಬಿಟ್ಟು ನಗರದತ್ತ ಯುವ ಸಮುದಾಯ ವಲಸೆ ಹೋಗುತ್ತಿದ್ದರೆ, ಇನ್ನೊಂದೆಡೆ ನಗರದಲ್ಲಿ ಕೈ ತುಂಬ ಸಂಬಳ ಪಡೆಯುವ ಯುವಜನ ಆ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿಗಿಳಿಯುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಮೂಲಕದ ಗಿರೀಶ್ ನಾಯ್ಕ ತಿಂಗಳಿಗೆ 80 ಸಾವಿರ ಸಂಬಳ ತರುತ್ತಿದ್ದ ಉದ್ಯೋಗ ತೊರೆದು ಗುಲಾಬಿ ಕೃಷಿಗಿಳಿದಿದ್ದಾರೆ.
- ಕೆ.ಎಂ.ಮಂಜುನಾಥ್, ಬಳ್ಳಾರಿ
ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ನಾಯ್ಕ. ಸದ್ಯಕ್ಕೀಗ ಇಸ್ರೇಲಿ ಮಾದರಿಯಲ್ಲಿ ಗುಲಾಬಿ ಮಾಡುತ್ತಿದ್ದಾರೆ. ಅವರ ತಾಯ್ನೆಲದ ಪ್ರೀತಿ, ಕೃಷಿ ಬದುಕಿನ ಹಂಬಲ ದಂಗು ಬಡಿಸುವಂತಿದೆ.
ಬೆಳೆಗೆ ನೀರು ಹರಿಸಲು ಸ್ವಯಂಚಾಲಿತ ಯಂತ್ರ!
ಗಿರೀಶ್ ಅವರ ತಂದೆ ವಿದ್ಯುತ್ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿದ್ದರು. ಗಿರೀಶ್‌ಗೆ ಬಾಲ್ಯದಿಂದಲೂ ಏನಾದರೂ ಸಾಧಿಸಬೇಕು ಎಂಬ ಹುಮ್ಮಸ್ಸಿತ್ತು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪಿಯುಸಿ ಶಿಕ್ಷಣ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿದರು. ಬಿಇ, ಬಿಟೆಕ್ ಪೂರ್ಣಗೊಳಿಸಿ, ಆಟೋಮೊಬೈಲ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಬೆಂಗಳೂರಿನ ಮೆಥೋಡ್, ಅಗೆನ್ ಟೆಕ್ನಾಲಜಿಯಲ್ಲಿ ಒಂದಿಷ್ಟುವರ್ಷ ದುಡಿದು ಬಳಿಕ ಪೂನಾದ ಟಾಟಾ ಜಾನ್ಸನ್ ಕಂಟ್ರೋಲ್‌ಗೆ ಸೇರಿದರು.
ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ
ಅಲ್ಲಿ ಆರು ವರ್ಷ ಕೆಲಸ ಮಾಡಿದರು. ತಿಂಗಳಿಗೆ 85 ಸಾವಿರ ರು.ಗಳಷ್ಟುಸಂಬಳ ಸಿಗುತ್ತಿತ್ತು. ಈ ನಡುವೆ ಇವರ ಕಾರ್ಯಕ್ಷಮತೆಯನ್ನು ಕಂಡು ಜರ್ಮನಿಗೂ ಕಳಿಸಿತು ಕಂಪೆನಿ. ಐಷಾರಾಮಿ ಬದುಕು, ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ತೃಪ್ತಿ ಇರಲಿಲ್ಲ. ಏನನ್ನೋ ಕಳೆದುಕೊಂಡಂತೆ ಮನಸ್ಸು ಮರುಗುತ್ತಿತ್ತು. ಹಳ್ಳಿ ಬದುಕು, ಅಲ್ಲಿಗೆ ಮರಳಿ ಹೋಗಬೇಕು ಎಂಬ ಆಸೆ ಹೆಚ್ಚುತ್ತಿತ್ತು. ಕೊನೆಗೂ ಹಳ್ಳಿ ಜೀವನದ ಬಗ್ಗೆ ನಿರ್ಧಾರ ಕೈಗೊಂಡೇ ಬಿಟ್ಟರು. ಒಂದು ದಶಕಕ್ಕೂ ಮೇಲ್ಪಟ್ಟಸಿಟಿಯ ಐಷಾರಾಮಿ ಬದುಕಿಗೆ ಗುಡ್‌ಬೈ ಹೇಳಿ ಹುಟ್ಟೂರಿಗೆ ಮರಳಿದರು.
ಇಸ್ರೇಲಿ ಮಾದರಿಯ ಗುಲಾಬಿ ಕೃಷಿ
ಬಳ್ಳಾರಿಯ ಕೂಡ್ಲಗಿಯಲ್ಲಿ ನೀರಿಗೆ ಅಭಾವವಿದೆ. ಇಲ್ಲಿ ಬೆಳೆ ಬೆಳೆಯುವುದು ಸವಾಲು. ಆದರೆ ಕೃಷಿ ಮಾಡಿಯೇ ತೀರುತ್ತೇನೆ ಎಂಬ ಛಲ ಹೊತ್ತ ಗಿರೀಶ್ ಅವರಿಗೆ ಹೊಳೆದದ್ದು ಇಸ್ರೇಲಿ ಮಾದರಿಯ ಕೃಷಿ. ಇಸ್ರೇಲ್‌ನಲ್ಲಿ ಮಳೆ ಕಡಿಮೆ. ಬೀಳುವ ಅತ್ಯಲ್ಪ ಮಳೆ ನೀರನ್ನೇ ಹಿಡಿದು ಇಲ್ಲಿ ಕೃಷಿ ಮಾಡುತ್ತಾರೆ. ಅದೀಗ ಇಸ್ರೇಲಿ ಕೃಷಿ ಮಾದರಿ ಎಂದು ಪ್ರಸಿದ್ಧ. ಗಿರೀಶ್ ಅವರೂ ಇಸ್ರೇಲ್ ಮಾದರಿಯಲ್ಲಿ ಗುಲಾಬಿ ಹೂಗಳನ್ನು ಬೆಳೆದು ರಫ್ತು ಮಾಡಬಹುದು, ಇದರಿಂದ ಹೆಚ್ಚಿನ ಲಾಭ ಗಳಿಸಬಹುದು ಅಂದುಕೊಂಡರು. ತಮ್ಮದೇ 10 ಎಕರೆ ಭೂಮಿಯಲ್ಲಿ ಹೂವು ಬೆಳೆಯಲು ನಿರ್ಧರಿಸಿದರು. ಆದರೆ ದೊಡ್ಡ ಪ್ರಮಾಣದ ಬಂಡವಾಳ ಬೇಡುವ ಹೂವು ಬೆಳೆಗೆ ಹಣ ಜೋಡಿಸುವುದು ಎಲ್ಲಿಂದ ಎಂಬ ಆಲೋಚನೆ ಬರುತ್ತಿದ್ದಂತೆಯೇ ಬ್ಯಾಂಕ್‌ನಿಂದ ಸಾಲ ಪಡೆಯುತ್ತಾರೆ. ಉಳಿದ ಹಣಕ್ಕೆ ತಂದೆಯ ಪಿಎಫ್ ಹಣ, ಮನೆಯಲ್ಲಿದ್ದ ಚಿನ್ನ ಮಾರಾಟ ಮಾಡಿ ಹೂವಿನ ಕೃಷಿಗೆ ಮುಂದಾಗುತ್ತಾರೆ. ಮಗನ ಕೃಷಿ ಪ್ರೇಮದಿಂದ ಸಂತಸಗೊಂಡ ತಂದೆ-ತಾಯಿ ಬೇಕಾದ ಆರ್ಥಿಕ ನೆರವು ಒದಗಿಸುತ್ತಾರೆ.
ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ! .
ಏಳು ಬಣ್ಣಗಳ ಗುಲಾಬಿ ಹೂಗಳು
ಸುಮಾರು 10 ಎಕರೆ ಭೂಮಿಯಲ್ಲಿ ಗಿರೀಶ್ ಕಳೆದ ಮೂರು ವರ್ಷದಿಂದ 6 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಉಳಿದ ಜಾಗದಲ್ಲಿ 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ, 7 ಪಾಲಿಹೌಸ್‌ಗಳು, ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಿದ್ದಾರೆ. ಕೆಂಪು, ಬಿಳಿ, ನೇರಳೆ ಸೇರಿದಂತೆ ಒಟ್ಟು ಏಳು ಬಣ್ಣದ ಬಗೆಯ ಗುಲಾಬಿಗಳು ಗಿರೀಶ್ ಅವರ ತೋಟದಲ್ಲಿ ನಿತ್ಯ ಅರಳುತ್ತವೆ. ವಾರಕ್ಕೆ ಮೂರು ಲೋಡ್ ಬೆಂಗಳೂರಿನ ಹೆಬ್ಬಾಳದಲ್ಲಿರುವ ಸರ್ಕಾರಿ ಸ್ವಾಮ್ಯದ ‘ಅಂತರಾಷ್ಟ್ರೀಯ ಹೂವು ಹರಾಜು ಕೇಂದ್ರ’ಕ್ಕೆ ಹೂಗಳ ಮಾರಾಟಕ್ಕೆ ಕಳಿಸಲಾಗುತ್ತದೆ. ಒಂದು ಲೋಡ್‌ನಲ್ಲಿ 12ರಿಂದ 15 ಸಾವಿರ ಹೂಗಳು ಇರುತ್ತವೆ. ಒಟ್ಟು ವಾರಕ್ಕೆ 45 ಸಾವಿರದಷ್ಟುಹೂಗಳು ಮಾರಾಟವಾಗುತ್ತವೆ ಎನ್ನುತ್ತಾರೆ ಗಿರೀಶ್.
ವಾರ್ಷಿಕ 80 ರಿಂದ 85 ಲಕ್ಷ ರು. ವಹಿವಾಟು
‘ ಗುಲಾಬಿ ಕೃಷಿಯಿಂದ ಕಳೆದ ಮೂರೇ ವರ್ಷಗಳಲ್ಲಿ ವಾರ್ಷಿಕ 80 ರಿಂದ 85 ಲಕ್ಷ ರುಗಳಷ್ಟುವಹಿವಾಟು ಮಾಡುತ್ತಿದ್ದೇನೆ. ವರ್ಷಕ್ಕೆ ಲಕ್ಷಗಟ್ಟಲೆ ಲಾಭವಾಗುತ್ತಿದೆ. ಕೂಡ್ಲಿಗಿ ತಾಲೂಕಿನಲ್ಲಿ ನೀರಿಗೆ ಬರ ಎಂದು ಗೊತ್ತಿದ್ದೂ ಹನಿ ನೀರಾವರಿ ಮೂಲಕ ಗುಲಾಬಿ ಕೃಷಿ ಆರಂಭಿಸಿದೆ. ಇಸ್ರೇಲ್‌ನಿಂದ ಯಂತ್ರೋಪಕರಣಗಳನ್ನು ತಂದು ಇಲ್ಲಿ ಅಳವಡಿಸಿಕೊಂಡೆ. ಊರಲ್ಲಿದ್ದೇ ಏನಾದರೂ ಸಾಧಿಸಬೇಕು ಎಂಬ ಆಸೆ ಇತ್ತು. ನನ್ನ ಪ್ರಯತ್ನಕ್ಕೆ ತಂದೆ ಎಂ.ರಾಮಸ್ವಾಮಿ, ತಾಯಿ ಲಲಿತಾ, ಪತ್ನಿ ಅಕ್ಷತಾ ಸಹಕರಿಸಿದರು. ಇದರಿಂದ ನನ್ನ ಆಸೆ ನೆರವೇರಿತು. ಇದೀಗ ನೆಮ್ಮದಿಯಿಂದ ಊರಲ್ಲಿದ್ದು ಕೃಷಿ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ಗಿರೀಶ್.
ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!
ಬೆಳೆಯ ಕಾಳಜಿ ರೈತರೇ ಮಾಡಬೇಕು
ಕೃಷಿ ಕಾಯಕ ಎಂದರೆ ಗಿರೀಶ್‌ಗೆ ಅಚ್ಚುಮೆಚ್ಚು. ಹೊಲ ಗದ್ದೆಗಳಲ್ಲಿ ಓಡಾಡಬೇಕು, ತಮ್ಮ ಮಕ್ಕಳು ಹಳ್ಳಿ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲ ಇವರದು. ಅದೆಷ್ಟೋ ಜನ ಹೊಲ ಮನೆಗಳಿದ್ದರೂ ಹೊಟ್ಟೆಪಾಡಿಗಾಗಿ ನಗರಕ್ಕೆ ಹೋಗುವುದು ಗಿರೀಶ್ ನೋವು ತಂದಿತ್ತು. ಮತ್ತೊಂದೆಡೆ ರೈತರು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು, ಬೆಳೆದ ಬೆಳೆಗೆ ಬೆಲೆ ಇಲ್ಲದೆ ರಸ್ತೆಗೆ ಚೆಲ್ಲುವುದು ಕಂಡು ತಲ್ಲಣಿಸಿದ್ದರು. ನಮ್ಮ ಬೆಳೆಗೆ ಸೂಕ್ತ ಪರಿಹಾರ ನಾವೇ ಅಂದರೆ ರೈತರು ಕಂಡುಕೊಳ್ಳಬೇಕು ಎನ್ನುವ ಇವರು ಮಾರುಕಟ್ಟೆಸ್ಥಿತಿ ನೋಡಿಕೊಂಡು ವಾಣಿಜ್ಯ ಬೆಳೆಗೆ ಇಳಿಯಿರಿ ಎನ್ನುತ್ತಾರೆ. ವಿದ್ಯಾವಂತ ಯುವಕರು ಕೃಷಿಯತ್ತ ಮರಳಿದರೆ ಖಂಡಿತ ಕೃಷಿ ಕ್ಷೇತ್ರ ಲಾಭದಾಯಕ ಆಗುತ್ತದೆ ಎನ್ನುತ್ತಾರೆ.