ಜೇನುಕೃಷಿ ಮಾಡಿ ಲಕ್ಷ ಎಣಿಸುವ ಅರವಿಂದ್!
ಜೇನಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಮಾರುಕಟ್ಟೆಯೂ ಇದೆ. ಆದರೆ ಬೇಡಿಕೆಗೆ ತಕ್ಕಷ್ಟು ಜೇನು ಉತ್ಪಾದನೆಯಾಗುತ್ತಿಲ್ಲ. ಬಳ್ಳಾರಿಯ ಕೃಷಿಕ ಅರವಿಂದ್, ಬೇರೆ ಕೃಷಿಯಲ್ಲಿ ಸೋತರೂ ಜೇನುಕೃಷಿಯಿಂದ ಮತ್ತೆ ಬದುಕು ಕಟ್ಟಿಕೊಂಡ ಕಥೆ ಇಲ್ಲಿದೆ.
ಮೆ ಣಸಿನಕಾಯಿ-ಹತ್ತಿ ಬೆಳೆ ನಷ್ಟವಾಗಿ ಕೈ ಸುಟ್ಟುಕೊಂಡ ಈ ರೈತ ಜೇನುಕೃಷಿ ಮಾಡಲು ಹೊರಟರು. ಇದನ್ನು ಕಂಡವರು ಇಲ್ಲೂ ಕೈ ಸುಟ್ಟುಕೊಳ್ಳುತ್ತಾರೆ, ಮತ್ತೆ ಲಕ್ಷಾಂತರ ಹಣ ಕಳೆದುಕೊಳ್ಳುತ್ತಾರೆ ಎಂದೇ ಭಾವಿಸಿದ್ದರು. ಆದರೆ, ವೈಜ್ಞಾನಿಕ ಜೇನುಕೃಷಿ ಕುರಿತು ತರಬೇತಿ ಪಡೆದು ಎಲ್ಲರಿಗೂ ಅಚ್ಚರಿಯಾಗುವಂತೆ ಜೇನುಕೃಷಿಯಲ್ಲಿ ಬೆಳೆದು ನಿಂತ ಈ ರೈತ, ಪ್ರತಿ ವರ್ಷ ಲಕ್ಷ ಲಕ್ಷ ಲಾಭದ ಗಳಿಕೆ ಎಣಿಸಲಾರಂಭಿಸಿದರು.
10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್!
ಅಷ್ಟೇ ಅಲ್ಲ; ಜೇನಿನ ಉಪ ಉತ್ಪನ್ನಗಳನ್ನು ತಯಾರಿಸಿ ಈ ಕ್ಷೇತ್ರದಲ್ಲೂ ಲಾಭ ಮಾಡಿಕೊಂಡರು. ತನ್ನಂತೆ ಜೇನುಕೃಷಿ ಮಾಡಲು ಆಸಕ್ತಿ ತೋರಿಸುವ ರೈತರಿಗೂ ತರಬೇತಿ ನೀಡಿ ಅವರ ಬದುಕಿನಲ್ಲೂ ನೆಮ್ಮದಿ ಮೂಡಿಸಿದರು !
ಇವರ ಹೆಸರು ಅರವಿಂದ್. ಬಳ್ಳಾರಿಯ ಬಾಂಬೆಪ್ರೆಸ್ ರಸ್ತೆಯ ನಿವಾಸಿ. ಬಿಎಸ್‌ಸಿ ಪದವೀಧರ. ನಗರ ಹೊರವಲಯದಲ್ಲಿ 30 ಎಕರೆ ಸ್ವಂತ ಭೂಮಿಯಲ್ಲಿ ಹತ್ತಿ-ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಿದ್ದರು. ಜತೆಗೆ ಪೀಠೋಪಕರಣ ಉದ್ಯಮವನ್ನು ಸಹ ನಡೆಸುತ್ತಿದ್ದರು. ಇದ್ದಕ್ಕಿದ್ದಂತೆಯೇ ಮೆಣಸಿನಕಾಯಿ, ಹತ್ತಿ ಬೆಳೆ ನಷ್ಟವಾಗಲು ಶುರುವಾಯಿತು. ಸಕಾಲಕ್ಕೆ ಬಾರದ ಮಳೆ, ಹೆಚ್ಚಿದ ರೋಗಾಣುಗಳಿಂದ ಬೆಳೆನಷ್ಟದಲ್ಲಿ ಲಕ್ಷಾಂತರ ರು. ಕಳೆದುಕೊಂಡರು. ಏತನ್ಮಧ್ಯೆ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಪೀಠೋಪಕರಣ ಉದ್ಯಮ ಕೂಡ ನಷ್ಟವಾಯಿತು. ಮುಂದೇನು ಎಂದು ದಿಕ್ಕು ತೋಚದಿದ್ದಾಗ ಜೇನುಕೃಷಿಯ ಬಗ್ಗೆ ತಿಳಿಯಿತು.
ಕರ್ನಾಟಕದಲ್ಲೊಂದು ಬಾಳೆ ಗ್ರಾಮ; ಗದಗ ಜಿಲ್ಲೆಯ ಹಮ್ಮಗಿಗೆ ಭೇಟಿ ನೀಡಿ!
ಮರುಪ್ರಯತ್ನದ ಮೂಲಕ ಮತ್ತೆ ಬದುಕು ಕಟ್ಟಿಕೊಳ್ಳುವ ನಿರ್ಧಾರಕ್ಕೆ ಬಂದ ಅರವಿಂದ್, ಜೇನುಕೃಷಿಯ ಬಗ್ಗೆ ತರಬೇತಿಗಳನ್ನು ಪಡೆದು, ಸಾಕಷ್ಟು ಮಾಹಿತಿಯನ್ನು ಕಲೆಹಾಕಿ ಜೇನುಕೃಷಿಯತ್ತ ವಾಲಿದರು. ಇದಕ್ಕೆ ಕಾರಣವೂ ಇತ್ತು. ಇದು ಬಂಡವಾಳ ಬೇಡುವುದಿಲ್ಲ. ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ ಎಂಬುದು ಮುಖ್ಯ ಕಾರಣ. ಕೇವಲ ಎರಡು ವರ್ಷಗಳಲ್ಲಿ ಹಳೆಯ ಸಾಲ ತೀರಿಸಿಕೊಂಡು ಲಕ್ಷಾಂತರ ರು.ಗಳ ಲಾಭ ಗಳಿಸಲಾರಂಭಿಸಿದರು.
2 ಲಕ್ಷ ರು. ಬಂಡವಾಳದಲ್ಲಿ ಜೇನುಕೃಷಿ ಶುರು
ಜೇನುಸಾಕಾಣಿಕೆ ಹಾಗೂ ಅದರ ಮೂಲಕ ಉಪ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ಪಡೆದ ಅರವಿಂದ್, ಎರಡು ಲಕ್ಷ ರು.ಗಳ ಬಂಡವಾಳ ಮೂಲಕ ಜೇನುಸಾಕಾಣಿಕೆಯ ಕೆಲಸ ಶುರು ಮಾಡುತ್ತಾರೆ. ‘ಈ ಎರಡು ಲಕ್ಷ ರೂಪಾಯಿಗಳನ್ನು ಜೇನು ಬಾಕ್ಸ್‌ಗಳ ಖರೀದಿಗೆ ಖರ್ಚು ಮಾಡಿದ್ದು ಬಿಟ್ಟರೆ ಮತ್ಯಾವ ಖರ್ಚು ಮಾಡಿಲ್ಲ. ಮನೆಯ ಮುಂದೆ, ಸಾವಯವ ಕೃಷಿಕರ ಹೊಲಗಳಲ್ಲಿ ಜೇನಿನ ಪೆಟ್ಟಿಗೆಗಳನ್ನು ಇಟ್ಟು ಬರುತ್ತೇನೆ. ಜೇನುಪೆಟ್ಟಿಗೆ ಇಡುವುದರಿಂದ ಸಾವಯವ ಕೃಷಿಯ ಇಳುವರಿ ಶೇ.30 ರಷ್ಟು ಹೆಚ್ಚಾಗುವುದರಿಂದ ಪ್ರತಿ ಒಂದು ಜೇನುಪೆಟ್ಟಿಗೆಗೆ ಜಮೀನಿನ ಮಾಲೀಕರು ಹಾಗೂ ಸಾವಯವ ಬೀಜೋತ್ಪನ್ನ ಸಂಸ್ಥೆಯವರು 1500 ರು.ಗಳಂತೆ ನೀಡುತ್ತಾರೆ. ನನ್ನ ಬಳಿ 200 ಜೇನುಪೆಟ್ಟಿಗೆಗಳಿವೆ. ಇನ್ನು 200 ಬಾಕ್ಸ್‌ಗಳನ್ನು ಖರೀದಿಸಿ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಇಡಲು ನಿರ್ಧರಿಸಿದ್ದೇನೆ. ಒಂದು ಜೇನು ಪೆಟ್ಟಿಗೆಗೆ 4500 ರು. ಖರ್ಚಾಗುತ್ತದೆ. ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸಹ ಸಿಗುತ್ತದೆ. ಇದನ್ನು ಬಳಸಿಕೊಂಡರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಜೇನು ಕೃಷಿ ಮಾಡಬಹುದು. ಒಂದೆಡೆ ಸಾವಯವ ಕೃಷಿಕರು ನೀಡುವ ಹಣದ ಜತೆಗೆ ಜೇನು ಮಾರಾಟದಿಂದ ಬರುವ ಆದಾಯ ಮತ್ತು ಜೇನಿನ ಉಪ ಉತ್ಪನ್ನಗಳಿಂದ ಸಿಗುವ ಹಣದಿಂದ ನಾನು ಆರ್ಥಿಕವಾಗಿ ಬಲಗೊಳ್ಳುವಂತೆ ಮಾಡಿದೆ’ ಎಂದು ಸಂಭ್ರಮದಿಂದಲೇ ಹೇಳಿಕೊಳ್ಳುತ್ತಾರೆ ಅರವಿಂದ್.
ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ
ನೀವು ಜೇನುಕೃಷಿ ಮಾಡಿ
‘ನಾನು ಜೇನುಕೃಷಿ ಮಾಡಿ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದೇನೆ. ಜೇನಿಗೆ ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಗೆ ಉತ್ತಮ ಬೇಡಿಕೆ ಇದೆ. ಆದರೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಅನೇಕ ರೈತರಿಗೆ ಜೇನುಕೃಷಿ ಮಾಡಿ, ಲಾಭಗಳಿಸಿ ಎಂದು ಮಾರ್ಗದರ್ಶನ ಮಾಡುತ್ತೇನೆ. ನನಗೆ ಜೇನುಕೃಷಿಯ ಬಗ್ಗೆ ಅತೀವ ಆಸಕ್ತಿ ಇತ್ತು. ಪ್ರತಿ ಜೇನು ಹುಳುಗಳ ಗುಣ ಹಾಗೂ ಅವುಗಳ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬೇಕು. ಜೇನುಕೃಷಿ ಪ್ರಗತಿಗೆ ಅಳವಡಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ)ಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದೇನೆ. ಈಗಾಗಲೇ ನೂರಾರು ರೈತರಿಗೆ ಜೇನುಕೃಷಿಯ ಬಗ್ಗೆ ತರಬೇತಿ ನೀಡಿದ್ದು, ಆಸಕ್ತರಿಗೆ ಈ ಬಗ್ಗೆ ತಿಳಿಸಿಕೊಡಬೇಕು. ಅವರು ಸಹ ಈ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕು ಎಂಬುದು ನನ್ನಾಸೆ’ ಎನ್ನುತ್ತಾರೆ ಅರವಿಂದ್.
ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!
ಉಪ ಉತ್ಪನ್ನಗಳಿಂದಲೂ ಆದಾಯ
ಜೇನು ಕೃಷಿಯಿಂದ ಲಾಭ ಗಳಿಸುತ್ತಿರುವ ಅರವಿಂದ್ ಅವರು, ಜೇನಿನ ಉಪ ಉತ್ಪನ್ನಗಳನ್ನು ತಯಾರಿಸಿ ಲಕ್ಷಾಂತರ ರೂಪಾಯಿ ಲಾಭ ಮಾಡಿದ್ದಾರೆ. ಜೇನು ಮಿಶ್ರಣದೊಂದಿಗೆ ಪಪ್ಪಾಯಿ, ಅಂಜೂರ ಜಾಮ್, ಅಶ್ವಗಂಧ, ಅರಿಷಿನ, ಬೇವು, ಗಂಧ, ಬೆಳ್ಳುಳ್ಳಿ, ತುಳಸಿ, ನಿಂಬೆ, ನುಗ್ಗೆ ಮತ್ತಿತರ ಗಿಡಗಳನ್ನು ಎಲೆಗಳನ್ನು ಬಳಕೆ ಮಾಡಿ ಅನೇಕ ಔಷಧಿಗಳನ್ನು ತಯಾರಿಸುತ್ತಾರೆ. ನೋವು ನಿವಾರಕ ಬಾಮ್, ಸೋಪು, ಸುಗಂಧ ತೈಲ ಸೇರಿದಂತೆ ಹತ್ತಾರು ಬಗೆಯ ಉಪ ಉತ್ಪನ್ನಗಳನ್ನು ತಯಾರಿಸುತ್ತಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಉಪ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಆಸಕ್ತರಿಗೆ ಈ ಬಗ್ಗೆ ತಿಳಿಸಿಕೊಡಲು ಇವರು ರೆಡಿಯಿದ್ದಾರೆ.
ಪಾಳು ಭೂಮಿಯಲ್ಲಿ ಹೂವು ಬೆಳೆದ ಲಾಯರ್!