ಹುಬ್ಬಳ್ಳಿಯಲ್ಲಿ, ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ಓಲಾ, ಊಬರ್‌ನಂತಹ ಆ್ಯಪ್ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಆ್ಯಪ್‌ಗಳಿಂದ ತಮ್ಮ ಆದಾಯ ಕುಸಿದು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ, ಸರ್ಕಾರ ತಕ್ಷಣವೇ ಇವುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿ: ಓಲಾ, ಊಬರ್, ರ‍್ಯಾಪಿಡೊ, ನಮ್ಮ ಯಾತ್ರಿ ಸೇರಿದಂತೆ ವಿವಿಧ ಆ್ಯಪ್‌ಗಳ ಮೂಲಕ ಆಟೋ ಸೇವೆ ನಡೆಸುತ್ತಿರುವ ವ್ಯವಸ್ಥೆ ಸ್ಥಗಿತಗೊಳಿಸಲು ಒತ್ತಾಯಿಸಿ ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಜೀವನೋಪಾಯಕ್ಕೆ ತೀವ್ರ ತೊಂದರೆ
ಈ ವೇಳೆ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ರಮೇಶ ಹೆಳವರ ಮಾತನಾಡಿ, ಈ ಆ್ಯಪ್‌ಗಳಿಂದ ಸಾಂಪ್ರದಾಯಿಕ ಆಟೋ ಚಾಲಕರ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಜೀವನೋಪಾಯಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆ್ಯಪ್ ಆಧಾರಿತ ಆಟೊ ಸೇವೆ ವಿರುದ್ಧ ಆಕ್ರೋಶ
ಆ್ಯಪ್ ಕಂಪನಿಗಳು ಬೇಕಾಬಿಟ್ಟಿ ನಿಯಮ ರೂಪಿಸಿ, ಪ್ರಯಾಣಿಕರು ಹಾಗೂ ಚಾಲಕರಿಂದ ವಿವಿಧ ರೀತಿಯ ಸೇವಾ ಶುಲ್ಕ ವಸೂಲಿ ಮಾಡುತ್ತಿವೆ. ರಾಜ್ಯ ಸರ್ಕಾರ ಆಟೋ ಹಾಗೂ ಟ್ಯಾಕ್ಸಿ ಕ್ಷೇತ್ರಕ್ಕೆ ಸ್ಪಷ್ಟ ನೀತಿ ರೂಪಿಸದೆ ಇರುವುದರಿಂದ ಸಾವಿರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ಕೂಡಲೇ ಎಲ್ಲ ಆ್ಯಪ್ ಆಧಾರಿತ ಆಟೊ ಸೇವೆಗಳನ್ನು ರಾಜ್ಯದಲ್ಲಿ ನಿಷೇಧಿಸಿ ಆಟೋ ಚಾಲಕರ ಹಿತಾಸಕ್ತಿ ಕಾಪಾಡಬೇಕು ಎಂದರು.
ಇದನ್ನೂ ಓದಿ: ತೆಲಂಗಾಣದಲ್ಲಿ ಮಳೆ ತಡೆಗೆ ಶಿವಮೊಗ್ಗದಲ್ಲಿ ಮಾಟಮಂತ್ರ: ಶಾಸಕನ ವಿರುದ್ಧ ಗಂಭೀರ ಆರೋಪ
ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಾರಾಯಣಸ್ವಾಮಿ, ಹುಬ್ಬಳ್ಳಿ ಅಧ್ಯಕ್ಷ ರಾಜು ತಳವಾರ, ಪದಾಧಿಕಾರಿಗಳಾದ ದೇವರಾಜ ಕಾಮಕರ, ಬಸಯ್ಯ ಶಿವಪ್ಪಯ್ಯನಮಠ, ಹನುಮಂತ ಉಣಕಲ್, ಲಕ್ಷ್ಮಣ ಮಡ್ಲಿ, ಮಂಜುನಾಥ ಭಜಂತ್ರಿ, ಅಶೋಕ ಬೂದಳ್ಳಿ, ವೀರೇಶ ಜುಂಜಣ್ಣವರ, ಶಂಭು ಕೋಟಿ, ಬಾಪೂಗೌಡ, ಷಣ್ಮುಖ ಬ್ಯಾಹಟ್ಟಿ, ಮಂಜುನಾಥ ಹುಬ್ಬಳ್ಳಿ, ಶಿವರಾಜ ಸೇರಿದಂತೆ ಹಲವರಿದ್ದರು.


