ತೆಲಂಗಾಣದಲ್ಲಿ ಮಳೆ ಬಾರದಿರಲು ರಾಜಕೀಯ ಷಡ್ಯಂತ್ರದ ಶಂಕೆ ವ್ಯಕ್ತವಾಗಿದೆ. ರಾಜಕೀಯ ಲಾಭಕ್ಕಾಗಿ ಬಿಆರ್‌ಎಸ್ ಶಾಸಕ ಹರೀಶ್ ರಾವ್ ಅವರು ಕರ್ನಾಟಕದ ಶಿವಮೊಗ್ಗದಲ್ಲಿ ಮಾಟಮಂತ್ರ ಮಾಡಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಆರೋಪಿಸಿದ್ದಾರೆ. ಈ ಆರೋಪವನ್ನು ಹರೀಶ್ ರಾವ್ ತಳ್ಳಿಹಾಕಿದ್ದಾರೆ.
ಹೈದರಾಬಾದ್: ಬರದಿಂದ ಎದುರಾಗುವ ರಾಜಕೀಯ ಲಾಭ ಪಡೆಯುವ ಸಂಚಿನ ಕಾರಣಕ್ಕಾಗಿ ಬಿಆರ್‌ಎಸ್ ಶಾಸಕರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ದೇಗುವೊಂದಕ್ಕೆ ತೆರಳಿ ಮಾಟಮಂತ್ರ ಮಾಡಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಗಂಭೀರ ಆರೋಪ ಮಾಡಿದ್ದಾರೆ.
ಕ್ಷುದ್ರ ಪೂಜೆ ಎಂದ ಮಹೇಶ್ ಕುಮಾರ್ ಗೌಡ್
ಈ ಕುರಿತು ಮಂಗಳವಾರ ಇಲ್ಲಿ ಪ್ರತಿಕ್ರಿಯೆ ನೀಡಿರುವ ಗೌಡ್, ‘ರಾಜ್ಯದಲ್ಲಿ ಮಳೆಯಾಗದೇ ಬರ ಸಂಭವಿಸಿದರೆ ಅದರಿಂದ ಬರ ಎದುರಾಗಲಿದೆ. ಇದರಿಂದ ಆಡಳಿತ ವಿರೋಧಿ ಅಲೆ ಎದ್ದು ರಾಜಕೀಯ ಲಾಭ ಪಡೆಯಬಹುದು ಎಂಬುದು ಬಿಆರ್‌ಎಸ್ ನಾಯಕರ ಲೆಕ್ಕಾಚಾರ. ಇದೇ ಕಾರಣಕ್ಕಾಗಿ ಬಿಆರ್‌ಎಸ್ ಶಾಸಕ ಹರೀಶ್ ರಾವ್ ಅವರು ಕಳೆದ ಮಾರ್ಚ್, ಮೇ ಮತ್ತು ಜೂನ್ ತಿಂಗಳಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕೆಲವೊಂದು ದೇಗುಲ, ತಮಿಳುನಾಡಿನ ತಿರುಚ್ಚಿ ದೇಗುಲಗಳಿಗೆ ಭೇಟಿ ನೀಡಿ ಕೆಲವೊಂದು ‘ಕ್ಷುದ್ರ ಪೂಜೆ’ ಮಾಡಿಸಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಈ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು ಎಂದು ಗೌಡ್ ಹೇಳಿದ್ದಾರೆ.
ಈ ನಡುವೆ ಆರೋಪ ತಳ್ಳಿಹಾಕಿರುವ ಹರೀಶ್ ರಾವ್, ಇದೊಂದು ಕೀಳು ಆರೋಪ ಎಂದಿದ್ದಾರೆ.


