ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿಇ, ಬಿಟೆಕ್ ಪದವೀಧರರಿಗೂ ಅವಕಾಶ ನೀಡಿದ್ದರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳನ್ನು ಭೇಟಿಯಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು.
- ರಾಜ್ಯ ಸರ್ಕಾರವು 900 ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ
- ಹುದ್ದೆಗೆ ಕೃಷಿ ಪದವೀಧರರು ಮಾತ್ರವಲ್ಲದೆ ಬಿಇ, ಬಿಟೆಕ್‌ನಲ್ಲಿ ಬಯೋ ಕೆಮಿಸ್ಟ್ರಿ ಓದಿದವರಿಗೂ ಅವಕಾಶ ನೀಡಿದೆ
- ಇದರ ವಿರುದ್ಧ ಬೆಂಗಳೂರು ಕೃಷಿ ವಿವಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಈಗ ಸಿಎಂ ಭೇಟಿಯಾಗಿದ್ದಾರೆ
ಬೆಂಗಳೂರು (ಆ.5): ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ದೆಹಲಿಯಲ್ಲಿ ಜೆನ್‌ಝೀಗಳು ನಡೆಸಿದ ಹೋರಾಟವನ್ನು ಕೇಂದ್ರ ಸರ್ಕಾರ ಉಪೇಕ್ಷಿಸಿದ ನಂತರ ಆದ ಘಟನಾವಳಿಗಳಿಂದ ಎಚ್ಚೆತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಮಂಗಳವಾರ ಬೆಂಗಳೂರಿನಲ್ಲಿ ತಮಗೆ ಮನವಿ ಸಲ್ಲಿಸಲು ಬಂದಿದ್ದ ವಿದ್ಯಾರ್ಥಿಗಳನ್ನು ಗಮನಿಸಿ, ಕಾರಿನಿಂದ ಇಳಿದು ಮರದ ಕೆಳಗೆ ಮನವಿ ಸ್ವೀಕರಿಸಿದ ಘಟನೆ ನಡೆದಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅದನ್ನು ಪರಿಹರಿಸುವ ಭರವಸೆಯನ್ನೂ ಕೊಟ್ಟಿದ್ದಾರೆ.
ಮರದ ಕೆಳಗೆ ಕುಳಿತು ದೂರು ಸ್ವೀಕಾರ
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ 14ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಸ್ಥಳದ ಬಳಿ ತಮಗೆ ಮನವಿ ಸಲ್ಲಿಸಲು ಮಂಗಳವಾರ ಬಂದಿದ್ದ ಜಿಕೆವಿಕೆ ಕೃಷಿ ವಿವಿ ವಿದ್ಯಾರ್ಥಿಗಳನ್ನು ಗಮನಿಸಿದ ಮುಖ್ಯಮಂತ್ರಿ ಅವರು ವಿದ್ಯಾರ್ಥಿಗಳನ್ನು ಹತ್ತಿರ ಕರೆದರು. ನಂತರ ಕಾರಿನಿಂದ ಇಳಿದು ಅಲ್ಲಿಯೇ ಇದ್ದ ಮರದ ನೆರಳಲ್ಲೇ ಕೂತು ವಿದ್ಯಾರ್ಥಿಗಳಿಂದ ವಸ್ತುಸ್ಥಿತಿಯ ವಿವರ ಪಡೆದರು.
ಪ್ರತಿಭಟನೆ ಕೈಬಿಡಿ, ನಮ್ಮ ಸರ್ಕಾರ ನಿಮ್ಮೊಂದಿಗಿದೆ:
ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮಗಳ ತಿದ್ದುಪಡಿಯಿಂದ ಕೃಷಿ ಪದವೀಧರರಿಗೆ ಸಮಸ್ಯೆಯಾಗಿದ್ದು, ಅವರ ಉದ್ಯೋಗ ಅವಕಾಶಗಳಿಗೆ ಧಕ್ಕೆಯಾಗದಂತೆ ಕಾನೂನಾತ್ಮಕವಾಗಿ ಬಗೆಹರಿಸಲು ಸೂಚನೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪ್ರತಿಭಟನೆ ಕೈ ಬಿಡಿ. ನಮ್ಮ ಸರ್ಕಾರ ನಿರುದ್ಯೋಗ ನಿರ್ಮೂಲನೆಗೆ ಕ್ರಮ ತೆಗೆದುಕೊಂಡಿದೆ. ನಿಮಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಸರ್ಕಾರವು 900ಕ್ಕೂ ಹೆಚ್ಚು ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗೆ ಬಿ.ಇ, ಬಿ.ಟೆಕ್‌ನಲ್ಲಿ ಬಯೋ ಕೆಮಿಸ್ಟ್ರಿ ಓದಿದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.


