ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ, ಬುಲೆಟ್‌ ಬೈಕ್‌ನಲ್ಲಿ ಹೊರಟಿದ್ದ ಭೂಮಾನಂದ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಬ್ಬೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ.

ರಾಯಚೂರು (ಆ.5): ಬುಲೆಟ್‌ ಬೈಕ್‌ನಲ್ಲಿ ಹೊರಟಿದ್ದ ಯುವಕನನ್ನ ನಡುರಸ್ತೆಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಂದು ಪರಾರಿಯಾದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ ನಡೆದಿದೆ. ಘಟನೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ನಡುರಸ್ತೆಯಲ್ಲೇ ದುಷ್ಕರ್ಮಿಗಳಿಂದ ಅಟ್ಯಾಕ್

ಭೂಮಾನಂದ(32), ಕೊಲೆಯಾದ ದುರ್ದೈವಿ. ಯುವಕ ಭೂಮಾನಂದ ಹದ್ದಿನಾಳ ಗ್ರಾಮದ ನಿವಾಸಿಯಾಗಿದ್ದಾನೆ. ನಿನ್ನೆ ಸಂಜೆ ಬುಲೆಟ್ ಬೈಕ್ ಹತ್ತಿ ಹೊರಗೆ ಹೋಗಿದ್ದ ಯುವಕ. ಈ ವೇಳೆ ಮಾರಕಾಸ್ತ್ರಗಳನ್ನ ಹಿಡಿದು ಹೊಂಚು ಹಾಕಿ ಕೂತಿದ್ದ ದುಷ್ಕರ್ಮಿಗಳು ಸುಂಕೇಶ್ವರಹಾಳ ಗ್ರಾಮದ ಬಳಿ ನಡುರಸ್ತೆಯಲ್ಲೇ ಅಟ್ಯಾಕ್ ಮಾಡಿದ್ದಾರೆ. ಏಕಾಏಕಿ ನಡೆದ ದಾಳಿಯಿಂದ ತಪ್ಪಿಸಿಕೊಳ್ಳಲಾಗದ ಯುವಕ. ಮಾರಕಾಸ್ತ್ರಗಳಿಂದ ಬಲವಾದ ಏಟುಗಳಿಂದ ಯುವಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಭೂಮಾನಂದ ಕೊಲೆಗೆ ಕಾರಣವೇನು?

ಹಣಕಾಸಿನ ವಿಷಯದಿಂದಲೇ ಕೊಲೆ ನಡೀತಾ? ರಾಜಕೀಯ ದ್ವೇಷವಾ? ಆಸ್ತಿ ವಿವಾದವಾ? ಅಥವಾ ಬೇರೆ ಏನಾದರೂ ಗಲಾಟೆ ನಡೆದಿತ್ತೇ? ಸದ್ಯ ಭೂಮಾನಂದ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಗಬ್ಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹ*ತ್ಯೆ ನಡೆದ ಸ್ಥಳದಲ್ಲಿನ ಸಿಸಿಟಿವಿಗಳನ್ನ ಪರಿಶೀಲಿಸಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಮುಂದಾಗಿರುವ ಪೊಲೀಸರು. ಈ ಪ್ರಕರಣವನ್ನ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.