Asianet Suvarna News Asianet Suvarna News

'ಅಡಕೆ ಔಷಧೀಯ ವಸ್ತು : ಅಡಕೆ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ'

  • ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಅಡಕೆ ಬಗ್ಗೆ ಹೇಳಿಕೆ
  • ಈ ಹೇಳಿಕೆ ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಹೇಳಿಕೆ
Dont mislead About arecanut says CAMPCO snr
Author
Bengaluru, First Published Nov 10, 2021, 2:30 PM IST

ಮಂಗಳೂರು (ನ.10): ಜಾರ್ಖಂಡ್‌ (Jarkand) ಸಂಸದ ನಿಶಿಕಾಂತ್‌ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಮಾನವನ ಆರೋಗ್ಯದ (Health) ಮೇಲೆ ಅಡಕೆಯ (arecanut) ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. ಇದು ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ (CAMPCO) ಹೇಳಿದೆ.

ಅಡಕೆ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಬೇಕಾದ ಔಷಧೀಯ (Medicine) ಗುಣಗಳನ್ನು ಹೊಂದಿರುವ ಪದಾರ್ಥ. ಮಧುಮೇಹ (sugar), ಕೊಲೆಸ್ಟರಾಲ್, ಹಲವಾರು ಅನುಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು,  ಪ್ರೊಟೊ ಜೋವನ್‌ ಪರಾವಲಂಬಿಗಳು ಇತ್ಯಾದಿಗಳನ್ನು ಸವಾರಿಸುವ ಶಕ್ತಿ ಹೊಂದಿದೆ. ಇದು ಎಚ್‌ಐವಿ (HIV) ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು, ಆಂಟಿ ಮಲೇರಿಯಲ್, ಆಂಥೆಲ್ಮಿಂಟಿಕ್‌ ಗುಣ ಲಕ್ಷಣಗಳನ್ನು ಸಹ ಹೊಂದಿದೆ. ಇದು ನೋವನ್ನು ಕಡಿಮೆ ಮಾಡಲು, ಗಾಯಗಳು ಮತ್ತು ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಆಂಟಿ - ವೆನಮ್‌ ಗುಣ ಲಕ್ಷಣಗಳನ್ನು ಹೊಂದಿದೆ ಎಂದಿದೆ.

ಅಡಕೆ ಎಲ್ಲ ಧಾರ್ಮಿಕ (Religious), ಸಾಮಾಜಿಕ (Social) ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಬಹಳ ಮಹತ್ವದ ಸ್ಥಾನವನ್ನು ಪಡೆಯುತ್ತದೆ ಮತ್ತು ಚರಕ ಸಂಹಿತೆಯಷ್ಟು ಹಿಂದಿನ ಆಯುರ್ವೇದ ಔಷಧದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಡಕೆ ಮಾತ್ರ ಕ್ಯಾನ್ಸರ್‌ ಕಾರಕವಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಸಮರ್ಥ ಸಂಶೋಧನಾ ಸಂಸ್ಥೆಗಳು ನಡೆಸಿದ ಇತ್ತೀಚಿನ ಸಂಶೋಧನೆಗಳು ಸಕಾರಾತ್ಮಕ ಫಲಿತಾಂಶಗಳನ್ನು ಸಾಬೀತು ಪಡಿಸಿವೆ. 1974ರಲ್ಲಿ ಬೆಂಗಳೂರಿನ (Bengaluru) ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಡಕೆ ಕ್ಯಾನ್ಸರ್‌ನ್ನು ಗುಣಪಡಿಸುತ್ತದೆ ಎಂದು ವರದಿ ಮಾಡಿದ್ದಾರೆ.

ಅಮೆರಿಕಾ (USA), ಅಟ್ಲಾಂಟಾ, ಎಮೋರಿ ವಿಶ್ವ ವಿದ್ಯಾಲಯದ ವಿನ್ಶಿಪ್‌ ಕ್ಯಾನ್ಸರ್‌ ಇನ್ಸ್ಟಿ ಟ್ಯೂಟ್‌ನ ಪ್ರಖ್ಯಾತ ವಿಜ್ಞಾನಿಗಳ ಗುಂಪಿನಿಂದಲೂ ಇದನ್ನು ದೃಢೀಕರಿಸಲಾಗಿದೆ. 

ಚೀನಾದಲ್ಲಿ (china) ಈಗಾಗಲೇ ಅಡಕೆ ಬಳಸಿ 30ಕ್ಕೂ ಹೆಚ್ಚು ಔಷಧಗಳನ್ನು ತಯಾರಿಸಲಾಗಿದೆ ಮತ್ತು ‘ಮೆಟೀರಿಯಾ ಮೆಡಿಕಾ’ದಲ್ಲಿ ವರದಿ ಮಾಡಿದಂತೆ ಈಗಲೂ ಅಭ್ಯಾಸ ಮಾಡಲಾಗುತ್ತಿದೆ. ಆ ಮಟ್ಟಿಗೆ ಕ್ಯಾಂಪ್ಕೊ ಈಗಾಗಲೇ ಸಂಶೋಧನೆಯ ಕಾರ್ಯಗಳಿಗೆ ಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿರುವ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಗೆ ಅದನ್ನು ಮಂಜೂರು ಮಾಡಿದೆ. ಆಹಾರ ಕಲಬೆರಕೆ ತಡೆ ಕಾಯ್ದೆಯ ಸೆಕ್ಷನ್‌-2(ವಿ) ರ ಅರ್ಥದಲ್ಲಿ ಅಡಕೆ ಆಹಾರ ಎಂದು ಸುಪ್ರೀಂ ಕೋರ್ಟ್‌ ಕೂಡ ತೀರ್ಪು ನೀಡಿದೆ ಎಂದು ವಿವರಿಸಿದೆ.

ಸಂಸದನ ಪತ್ರದಲ್ಲೇನಿದೆ: ಅಡಕೆ (Betel Nut) ಸೇವನೆಯಿಂದ ಮಾರಕ ಕ್ಯಾನ್ಸರ್‌ನಂಥ (Cancer) ರೋಗಗಳು ಉಂಟಾಗುತ್ತಿದೆ. ಹೀಗಾಗಿ ಜನರು ಅಡಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಜಾರ್ಖಂಡ್‌ನ (Jharkhand) ಬಿಜೆಪಿ ಸಂಸದ ನಿಶಿಕಾಂತ್‌ ದುಬೆ (Nishikant Dubey) ಮೋದಿ ಅವರಿಗೆ ಪತ್ರ ಬರೆದಿದ್ದರು.

‘ಜಾರ್ಖಂಡ್‌ನ ಸಂಸದನಾಗಿ ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುತ್ತಿದ್ದೇನೆ. ಪಾನ್‌ ಮಸಾಲದ (Pan masala) ಪ್ರಮುಖ ಭಾಗವಾದ ಅಡಕೆ (Areca Nut) ಸೇವಿಸುವ ಮೂಲಕ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗಿ ತೊಂದರೆ ಅನುಭವಿಸುವುದನ್ನು ಸ್ವತಃ ನಾನೇ ನೋಡಿದ್ದೇನೆ. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಬೇಕು ಎಂದು ನಾನು ಪ್ರಧಾನಿ ನರೇಂದ್ರ ಮೋದಿ (prime Minister Narendra Modi) ಅವರಲ್ಲಿ ಮನವಿ ಮಾಡುತ್ತೇನೆ’ ಎಂದಿದ್ದಾರೆ.

‘ಅಡಕೆ ಸೇವನೆಯಿಂದ ಆಸ್ತಮಾ ರೋಗ (Asthama) ಉಲ್ಬಣವಾಗುತ್ತದೆ. ಹೃದಯದ ರಕ್ತನಾಳ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಉಸಿರಾಟ ಸಮಸ್ಯೆ, ಉಸಿರಾಟದ ಏರಿಳಿತದಂಥ ಸಮಸ್ಯೆಗಳು ಉಂಟಾಗುತ್ತವೆ. ಇದೇ ಕಾರಣಗಳಿಗಾಗಿಯೇ 2018ರಲ್ಲಿ ಮಹಾರಾಷ್ಟ್ರ ಸರ್ಕಾರ ಅಡಕೆ ಮಾರಾಟ ಮತ್ತು ಬಳಕೆಯ ನಿಷೇಧಿಸಿತ್ತು. ಹೀಗಾಗಿ ಮಾನವರ ಬಳಕೆಗೆ ಅಡಕೆ ನಿಷೇಧಿಸಬೇಕು. ಆದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಬಳಸಲು ಅನುಮತಿ ಮುಂದುವರೆಸಬೇಕು’ ಎಂದು ದುಬೆ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

Follow Us:
Download App:
  • android
  • ios