ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಮಂಗಳೂರಿಗೆ ಆಗಮಿಸಿದೆ. ತನಿಖಾಧಿಕಾರಿಗಳು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ.
ಬೆಂಗಳೂರು (ಜು.26): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT), ಶುಕ್ರವಾರ ಮಂಗಳೂರು ತಲುಪಿದೆ. SIT ಸದಸ್ಯರಾದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ನೇಮಕಾತಿ) MN ಅನುಚೇತ್ ಅವರು ಐಜಿಪಿ (ಪಶ್ಚಿಮ ವಲಯ) ಮತ್ತು ದಕ್ಷಿಣ ಕನ್ನಡ ಎಸ್‌ಪಿ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಧರ್ಮಸ್ಥಳದಲ್ಲಿ ಸಾಮೂಹಿಕ ಶವ ಹೂತಿಟ್ಟ ಆರೋಪಗಳಿಗೆ ಸಂಬಂಧಿಸಿದ ಪ್ರಕರಣವನ್ನು ಜುಲೈ 19 ರಂದು ಆದೇಶದಂತೆ SIT ಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ.
ಅದರ ಪ್ರಕಾರ, ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ SIT ರಚಿಸಲಾಗಿದೆ. ಸಾಕ್ಷಿಯ ರಕ್ಷಣೆ ಕೋರಿ ದೂರುದಾರರೊಬ್ಬರು ಮುಂದೆ ಬಂದಿದ್ದಾರೆ. ಅಪರಾಧಿಗಳು, ಶವಗಳನ್ನು ವಿಲೇವಾರಿ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಮೂಲಕ ತನಿಖೆಗೆ ಸಹಕರಿಸಲು ಅವಕಾಶ ನೀಡಲಾಗಿದೆ. ಧರ್ಮಸ್ಥಳ ಪೊಲೀಸರು ಜುಲೈ 4 ರಂದು ಈ ಸಂಬಂಧ ಪ್ರಕರಣ ದಾಖಲಿಸಿದರು. ದೂರುದಾರರು ಜುಲೈ 11 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ದಾಖಲಿಸಿದರು.
ಇನ್ನು ಧರ್ಮಸ್ಥಳ ಶವ ಹೂತ ಪ್ರಕರಣ ಎಸ್ಐಟಿ ಹಸ್ತಾಂತರ ಬೆನ್ನಲ್ಲೇ ತನಿಖಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಮುಂದೆ ಎಸ್ಐಟಿ ತನಿಖೆ ಹೇಗಿರುತ್ತದೆ ಎನ್ನುವ ಮಾಹಿತಿಗಳೂ ಲಭ್ಯವಾಗಿದೆ. ಸದ್ಯ ಫೀಲ್ಡಿಗಿಳಿಯುವ ಮೊದಲೇ ಪ್ಲಾನ್ ಆಫ್ ಆಕ್ಷನ್ ಅನ್ನು ಎಸ್ಐಟಿ ಸಿದ್ದಪಡಿಸುತ್ತಿದೆ. ಮೃತದೇಹ ಇದೆ ಎಂದು ಹೇಳಿರುವ ವ್ಯಕ್ತಿಯ ವಿವರವಾದ ಹೇಳಿಕೆ ದಾಖಲು ಮಾಡಲಾಗಲಿದ್ದು, ಬಳಿಕ ಮಹಜರು ಪ್ರಕ್ರಿಯೆ ನಡೆಯಲಿದೆ.
ಧರ್ಮಸ್ಥಳ ಗ್ರಾಮದ ಎಲ್ಲಿ ಬೇಕಾದರೂ ದೂರುದಾರ ಶವ ಹೂತಿರಬಹುದು. ಆ ನಿರ್ದಿಷ್ಟ ಜಾಗವನ್ನು ಪತ್ತೆಹಚ್ಚಿ ಮೃತದೇಹದ ಕಳೇಬರ ಹೊರತೆಗೆಯುವುದು ಮುಂದಿರುವ ಸವಾಲು. ಕೋರ್ಟ್ ಆದೇಶದಂತೆ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲೇ ಈ ಎಲ್ಲಾ ಪ್ರಕ್ರಿಯೆ ನಡೆಯಬೇಕಿದೆ. ಎಸಿ ಅಥವಾ ತಹಶಿಲ್ದಾರ್ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
ಜೊತೆಗೆ FSL ಸಿಬ್ಬಂದಿ(Forensic Science Laborataroy), SOCO (Scene of crime officers) ಮತ್ತು ಫಾರೆನ್ಸಿಕ್ ವೈದ್ಯರ ತಂಡ ಕೂಡ ಇವರ ಜೊತೆ ಇರಬೇಕು. ಮೃತದೇಹ ಸಿಕ್ಕಿದ ಬಳಿಕ ಅದರ ವೈದ್ಯರು ಅಸ್ಥಿಪಂಜರ ಸಂರಕ್ಷಣೆ ಮಾಡಬೇಕು. ನಂತರ ಸ್ಥಳದಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷ್ಯ ಕಲೆ ಹಾಕಿ FSL ಸಿಬ್ಬಂದಿ ಸಂರಕ್ಷಣೆ ಮಾಡಲಿದ್ದಾರೆ. FSLಗೆ ಸ್ಯಾಂಪಲ್ಸ್ ಹೋದ ಬಳಿಕ DNA profiling ಆಗಲಿದೆ. ಪತ್ತೆಯಾದ ಮೃತದೇಹದ ಕಳೇಬರದ DNA ಸಂಗ್ರಹ ಮಾಡಲಾಗುತ್ತದೆ. ಪತ್ತೆಯಾದ ಮೃತದೇಹದ ಡಿಎನ್ಎ ಹಿಂದೆ ದಾಖಲಾಗಿರುವ ಮಿಸ್ಸಿಂಗ್ ಕೇಸ್ ಜೊತೆ ಮ್ಯಾಚಿಂಗ್ ಮಾಡಲಾಗುತ್ತದೆ.
ಮೃತ ಕಳೇಬರದ ಎತ್ತರ, ವಯಸ್ಸು ಹಾಗೂ ಲಿಂಗದ ಆಧಾರದಲ್ಲಿ ಮೊದಲು ಮ್ಯಾಚಿಂಗ್ ಮಾಡಲಾಗುತ್ತದೆ. ಒಂದು ವೇಳೆ ಯಾವುದಾದರೂ ಮಿಸ್ಸಿಂಗ್ ಕೇಸ್ ಜೊತೆ ಹೋಲಿಕೆ ಆದಲ್ಲಿ ಕುಟುಂಬದ ಹುಡುಕಾಟ ನಡೆಯಲಿದೆ. ದೂರುದಾರರ ಕುಟುಂಬಸ್ಥರನ್ನು ಕರೆಸಿ ಅವರ DNA ಸಂಗ್ರಹಿಸಿ ಮ್ಯಾಚಿಂಗ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಪತ್ತೆಯಾದ ಮೃತದೇಹದ ತಲೆಬುರುಡೆ ಆಧರಿಸಿ ಅದರ ವಯಸ್ಸು ಪತ್ತೆಹಚ್ಚಲಾಗುತ್ತದೆ. ಮೃತದೇಹ ಗಂಡು ಅಥವಾ ಹೆಣ್ಣಿನದ್ದಾ ಅಂತ ಪತ್ತೆಹಚ್ಚಲಾಗುತ್ತದೆ.
ಹಲ್ಲು ಪರಿಶೀಲನೆ ಮೂಲಕ ಅಂದಾಜು ವಯಸ್ಸು ಕಂಡುಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ Face Reconstruction ಕೂಡ ಮಾಡಲಾಗುತ್ತದೆ. ಅಂದರೆ ತಲೆಬುರುಡೆ ಆಧರಿಸಿ ಮುಖದ ಚಹರೆ ಸಿದ್ಧಪಡಿಸುವ ಕೆಲಸ ಮೂಡ ನಡೆಯಬಹುದು.
