ಹಾಸನ ತಾಲೂಕಿನ ವೇದಾವತಿ ಗ್ರಾಮದ ರೈತ ರಂಗಸ್ವಾಮಿ ಅವರು ಸಾಲ ಮಾಡಿ ಸಂಗ್ರಹಿಸಿದ್ದ 80 ಸಾವಿರಕ್ಕೂ ಹೆಚ್ಚು ಮೌಲ್ಯದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ದುರ್ಘಟನೆಯಿಂದ ಸಂಪೂರ್ಣ ಮೇವು ನಾಶವಾಗಿದ್ದು, ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ದನಕರುಗಳಿಗೆ ಮೇವು ಒದಗಿಸಲು ಪರದಾಟ.

ಹಾಸನ (ಮಾ.17): ರೈತನು ಸಾಲ ಮಾಡಿ ತಂದು ಸಂಗ್ರಹಿಸಿ ಇಡಲಾಗಿದ್ದ ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಆಹುತಿಯಾದ ಘಟನೆ ತಾಲೂಕಿನ ದುದ್ದ ಹೋಬಳಿ ವೇದಾವತಿ ಗ್ರಾಮದಲ್ಲಿ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೇದಾವತಿ ಗ್ರಾಮದ ರೈತ ರಂಗಸ್ವಾಮಿಗೆ ಸೇರಿದ ಸುಮಾರು ಐದಾರು ಲೋಡ್‌ಗಿಂತ ಹೆಚ್ಚು ಮೇವಿನ ಸಂಗ್ರಹಣೆ ಮಾಡಲಾಗಿದ್ದ ಬಣವೆಗೆ ಬೆಂಕಿ ತಗುಲಿದ್ದು, ಅಂದಾಜು ೮೦ ಸಾವಿರಕ್ಕೂ ಹೆಚ್ಚಿನ ಬೆಲೆಬಾಳುವ ಗೋವುಗಳ ಮೇವು ಪೂರ್ಣ ಬೆಂಕಿಯಲ್ಲಿ ಬೆಂದು ಕರಕಲು ಆಗಿದೆ ಎಂದು ತಿಳಿದು ಬಂದಿದೆ. 

ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ಕೆಲವೇ ಕ್ಷಣಗಳಲ್ಲಿ ಮೇವಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ದುರ್ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಹಾಸನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ತೀವ್ರತೆಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿದರು. 

ಗ್ರಾಮಸ್ಥರು ಕೂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿಗೆ ಸಹಕಾರ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ಪಾಲ್ಗೊಂಡರು. ಇದೇ ವೇಳೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರ್‌ ನಾರಾಯಣಗೌಡ ಅವರು ಸಹ ನೆರವು ನೀಡಿದರು.

ಇದೇ ವೇಳೆ ರೈತ ರಂಗಸ್ವಾಮಿ ಮಾಧ್ಯಮದೊಂದಿಗೆ ಮಾತನಾಡಿ, ತಮ್ಮ ದನಕರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಸಾಲ ಮಾಡಿಕೊಂಡು ಮೇವು ಖರೀದಿಸಿ ಸಂಗ್ರಹಿಸಿ ಇಡಲಾಗಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಮೇವು ನಾಶವಾಗಿದ್ದು, ಇದೀಗ ದನಕರುಗಳಿಗೆ ಮೇವು ಒದಗಿಸುವುದೇ ಕಷ್ಟಕರವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಈ ಅಗ್ನಿ ಅವಘಡದಿಂದ ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ತಕ್ಷಣ ಪರಿಹಾರ ಮತ್ತು ನೆರವು ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.