ಧರ್ಮಸ್ಥಳದ ಶವ ಹೂತ ಪ್ರಕರಣದ ತನಿಖೆಗೆ ವಿಜ್ಞಾನಿಗಳು, ಇಂಜಿನಿಯರ್‌ಗಳು ಸ್ವಯಂಪ್ರೇರಿತ ಸಹಾಯ ನೀಡಲು ಮುಂದಾಗಿದ್ದಾರೆ. ಸುಜಾತ ಭಟ್ ಅವರನ್ನು ಸಂಪರ್ಕಿಸಿ ನ್ಯಾಯಾಲಯದ ಅನುಮತಿ ಪಡೆದು, ವೈಜ್ಞಾನಿಕ ತಂತ್ರಜ್ಞಾನ ಬಳಸಿ ಸಮಾಧಿ ತೆರವು ಮತ್ತು DNA ಪರೀಕ್ಷೆ ನಡೆಸಲು ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ (ಜು.24): ಧರ್ಮಸ್ಥಳ ಗ್ರಾಮದಲ್ಲಿ ನಿಗೂಢವಾಗಿ ಶವ ಹೂತಿಟ್ಟ ಪ್ರಕರಣ ಸಂಬಂಧ ಹೊಸ ಬೆಳವಣಿಗೆ ನಡೆದಿದೆ. ಶವ ಹೂತ ಪ್ರಕರಣದ ತನಿಖೆಗೆ ಹಲವು ವಿಜ್ಞಾನಿಗಳು, ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ತಜ್ಞರು ತಮ್ಮ ಸೇವೆಗಳನ್ನು ಸ್ವಯಂಪ್ರೇರಿತವಾಗಿ ನೀಡಲು ಮುಂದೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ 2003ರಲ್ಲಿ ನಾಪತ್ತೆಯಾಗಿದ್ದ ಯುವತಿಯ ತಾಯಿ ಸುಜಾತಾ ಭಟ್ ಅವರನ್ನು ಸಂಪರ್ಕಿಸಿ ನ್ಯಾಯಾಲಯದ ಮುಂದಿಟ್ಟು ಅನುಮತಿ ಪಡೆಯುವಂತೆ ಮನವಿ ಮಾಡಿದ್ದಾರೆ.

ಸುಜಾತ ಭಟ್ ಪರ ವಕೀಲ ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ, 'ಈ ತಜ್ಞರು ತಮ್ಮ ವೈಜ್ಞಾನಿಕ ಜ್ಞಾನ ಹಾಗೂ ಅನುಭವವನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತಿರುವ ಸ್ಥಳವನ್ನು ಅನಾವರಣಗೊಳಿಸಲು ಮತ್ತು ಡಿಎನ್ಎ ಮ್ಯಾಚಿಂಗ್ ಪ್ರಕ್ರಿಯೆಗಾಗಿ ಅಗತ್ಯವಿರುವ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಅವರು ಸಲಹೆ ನೀಡಲು ಸಿದ್ಧರಾಗಿದ್ದಾರೆ' ಎಂದು ಹೇಳಿದ್ದಾರೆ.

ಇನ್ನು ತಜ್ಞರು ಉಲ್ಲೇಖಿಸಿದಂತೆ, ಸಮಾಧಿ ತೆರೆಯುವ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆ ಮಾಡುವುದು, ಶವದ ಗುರುತು ಪತ್ತೆಗೆ ವೈದ್ಯಕೀಯ ಮತ್ತು ಪೋಲಿಸ್ ಅಧಿಕಾರಿಗಳಿಗೆ ಪೂರಕವಾಗಿ ಕೆಲಸ ಮಾಡುವುದಾಗಿ ಮುಂದೆ ಬಂದಿದ್ದಾರೆ. ಎಲ್ಲರ ಸಹಕಾರದಿಂದ ಈ ತನಿಖೆಯನ್ನು ಮಾಡಿದಲ್ಲಿ ಪ್ರಕರಣವನ್ನು ಸತ್ಯದ ಹಾದಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ ಬೆಳವಣಿಗೆಯ ಮಧ್ಯೆ, ವಕೀಲ ಮಂಜುನಾಥ್ ಅವರು ವಿಶೇಷ ತನಿಖಾ ತಂಡ (SIT) ತನಿಖಾ ಪ್ರಕ್ರಿಯೆ ಪ್ರಾಮಾಣಿಕವಾಗಿರಲಿ ಎಂಬ ದೃಷ್ಟಿಯಿಂದ, ಈ ತಜ್ಞರ ಸಂಪರ್ಕ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸುಜಾತ ಭಟ್ ಮತ್ತು ಪ್ರಕರಣದ ಹಿನ್ನೆಲೆ:

2003ರಲ್ಲಿ ನಾಪತ್ತೆಯಾಗಿದ್ದ ಅನನ್ಯ ಭಟ್ ಎಂಬ ಯುವತಿಯ ತಾಯಿ ಸುಜಾತ ಭಟ್ ಆಗಿದ್ದಾರೆ. ಧರ್ಮಸ್ಥಳ ಸಮೀಪದ ಒಂದು ಸ್ಥಳದಲ್ಲಿ ಶವ ಹೂತಿಟ್ಟಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಸ್ಥಳದಲ್ಲಿ ಅಸ್ಥಿಪಂಜರವು ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಅನುಮಾನವಿದೆ. ಒಂದು ವೇಳೆ ಅಸ್ತಿಪಂಜರಗಳು ಸಿಕ್ಕಿದಲ್ಲಿ ಅಂತಹ ಶವದ ಡಿಎನ್ಎ ಪರೀಕ್ಷೆ ಮಾಡಿಸಿ, ತಮ್ಮ ಮಗಳೆಂದು ಸಾಬೀತಾದಲ್ಲಿ ತಮಗೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಲು ತಮಗೆ ಅಸ್ತಿಪಂಜರ ನೀಡುವಂತೆಯೂ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಇದೀಗ ಈ ಕಾನೂನು ಹೋರಾಟಕ್ಕೆ ವೈಜ್ಞಾನಿಕವಾಗಿ ತಜ್ಞರಿಂದ ಬೆಂಬಲ ಸಿಕ್ಕಿರುವುದು ತನಿಖೆಗೆ ಮತ್ತಷ್ಟು ವೇಗ ನೀಡುವ ಸಾಧ್ಯತೆ ಇದೆ.

ತಜ್ಞರ ಸಹಕಾರ ಪಡೆದರೆ ಲಾಭವೇನು?

  • ಇನ್ನು ಎಸ್‌ಐಟಿ ತನಿಖಾ ತಂಡದ ಜೊತೆಗೆ ಈ ತಜ್ಞರು ಶವ ಹೂತಿಟ್ಟ ಪ್ರಕರಣದ ನಿಖರ ಮತ್ತು ವೇಗವಾದ ತನಿಖೆಗೆ ನೆರವಾಗಲಿದೆ.
  • ಈ ತಜ್ಞರು ತನಿಖಾ ತಂಡದೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ತಮ್ಮ ಸೇವೆಗಳನ್ನು ಸ್ವಯಂ ಪ್ರೇರಿತರಾಗಿ ನೀಡಲು ಸಾಧ್ಯವಾಗುತ್ತದೆ.
  • ಈ ರೀತಿಯ ಸಹಯೋಗವು ಸಮಾಧಿ ತೆಗೆಯುವ ಕಾರ್ಯವೈಖರಿಯನ್ನು ಉತ್ತಮಗೊಳಿಸುತ್ತದೆ.
  • ಈ ತಂತ್ರಜ್ಞರು ಸಮಾಧಿ ತೆಗೆಯುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಲಿದ್ದಾರೆ.
  • ಶವ ಹೊರ ತೆಗೆಯುವ ಪ್ರಕ್ರಿಯೆಯಲ್ಲಿ ಹೊಸ ತಂತ್ರಜ್ಞಾನ ಮತ್ತು ವಿಧಾನಗಳನ್ನು ಬಳಕೆ ಮಾಡಲಿದ್ದಾರೆ.

ಈ ಪ್ರಕರಣದ ಮುಖ್ಯ ಅಂಶಗಳು:

  • ಧರ್ಮಸ್ಥಳದಲ್ಲಿ ಶವ ಹೂತಿರುವ ಘಟನೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆ
  • ತಂತ್ರಜ್ಞ, ವಿಜ್ಞಾನಿಗಳು, ಇಂಜಿನಿಯರ್‌ಗಳು ತನಿಖೆಗೆ ಸ್ವಯಂಪ್ರೇರಿತ ನೆರವಿಗೆ ಬಂದಿದ್ದಾರೆ.
  • ಸಮಾಧಿ ತೆಗೆಯುವ ಕಾರ್ಯವೈಖರಿ ಸುಧಾರಿಸಲು ಹೊಸ ತಂತ್ರಜ್ಞಾನ ಬಳಸುವ ಸಲಹೆ
  • ಡಿಎನ್ಎ ಪರೀಕ್ಷೆಗೆ ಸುಜಾತ ಭಟ್ ಮನವಿ
  • SIT ತನಿಖೆಗೆ ಪರೋಕ್ಷವಾಗಿ ತಜ್ಞರ ಮಾಹಿತಿ ಸಹಕಾರ ನೀಡುವ ಅಗತ್ಯವಿದೆ