Asianet Suvarna News Asianet Suvarna News

ಅಧಿಕಾರ ಕೊಡಿ ಬೆಂಗ್ಳೂರಿನ ಗುಂಡಿಗಳನ್ನ ನಾವೇ ಮುಚ್ತೇವೆ: ಕಾಂಗ್ರೆಸ್‌

*   ಗುಂಡಿ ಮುಚ್ಚಲು ಆಗದಿದ್ರೆ ನಮ್ಗೆ ಅವಕಾಶ ಕೊಡಿ
*   ಬಿಜೆಪಿ ಅವರಿಗೆ ಆಡಳಿತ ನಡೆಸಲು ಬರಲ್ಲ
*  ನಾವು ಅಭಿವೃದ್ಧಿ ಮಾಡಿ ತೋರಿಸುತ್ತೇವೆ: ರಾಮಲಿಂಗಾ ರೆಡ್ಡಿ 

Congress Leader Ramalinga Reddy Slams on BJP Government grg
Author
Bengaluru, First Published Oct 29, 2021, 7:10 AM IST

ಬೆಂಗಳೂರು(ಅ.29):  ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗದೆ ಬಿಜೆಪಿ ಸರ್ಕಾರ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವುದು ನೋಡಿದರೆ ಇವರಿಗೆ ಆಡಳಿತ ನಡೆಸೋಕೆ ಬರುವುದಿಲ್ಲ ಎಂಬುದು ತಿಳಿಯುತ್ತದೆ. ಈ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇಲ್ಲದಿದ್ದರೆ ನಮಗೆ ಬಿಟ್ಟುಕೊಡಿ ನಾವು ಆಡಳಿತ ನಡೆಸಿ ತೋರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ(Ramalinga Reddy) ಹೇಳಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ(Bengaluru) ಪ್ರತಿಯೊಂದು ರಸ್ತೆಗಳೂ ಗುಂಡಿಮಯವಾಗಿದ್ದು(Potholes) ವಾಹನಗಳು ಸಂಚರಿಸಲಾಗದಷ್ಟುಅಧೋಗತಿ ತಲುಪಿದ್ದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ. ಬೆಂಗಳೂರು ಉಸ್ತುವಾರಿ ಸ್ವತಃ ಮುಖ್ಯಮಂತ್ರಿಗಳ ಬಳಿ ಇದೆ. ಜತೆಗೆ ನಗರದಲ್ಲಿ ಆರು ಜನ ಸಚಿವರಿದ್ದರೂ ನಗರಕ್ಕೆ ಯಾವ ಪ್ರಯೋಜನವಿಲ್ಲ. ನಿಮ್ಮ ಕೈಯಲ್ಲಿ ಆಗದಿದ್ದರೆ ನಮಗೆ ಒಂದು ಅವಕಾಶ ಕೊಟ್ಟು ನೋಡಿ ನಗರದ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ ಎಂದು ಸರ್ಕಾರಕ್ಕೆ(Government) ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವರದಿ ಫಲಶ್ರುತಿ: ಬೆಂಗ್ಳೂರಿನ ರಸ್ತೆ ಗುಂಡಿಗೆ ಶೀಘ್ರವೇ ಮುಕ್ತಿ

ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ಒಂದೇ ಒಂದು ರಸ್ತೆಯೂ(Road) ಸಿಗುವುದಿಲ್ಲ. ವಾಹನ ಸವಾರರು ಕೊಂಚ ಯಾಮಾರಿದರೂ ಪ್ರಾಣಕ್ಕೇ ಸಂಚಕಾರ ತಂದೊಡ್ಡುವ ರಸ್ತೆಗುಂಡಿಗಳು ನಗರದ ಅನೇಕ ರಸ್ತೆಗಳಲ್ಲಿ ನಿರ್ಮಾಣವಾಗಿವೆ. ಇದರಿಂದ ನಿತ್ಯ ಅಪಘಾತ, ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ನಗರದ ರಸ್ತೆಗಳ ಸ್ಥಿತಿ ಇದೇ ರೀತಿ ಆಗುತ್ತದೆ. 2008ರಿಂದ 2013ರ ವರೆಗೆ ಬಿಜೆಪಿ ಅಧಿಕಾರದಲ್ಲೂ ನಗರದ ರಸ್ತೆಗಳ ಸ್ಥಿತಿ ಇದೇ ಆಗಿತ್ತು. ಈಗ ಮತ್ತೆ ಅಧಿಕಾರದಲ್ಲಿರುವ ಬಿಜೆಪಿ(BJP) ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಮುಖ್ಯಮಂತ್ರಿಗಳು, ಸಚಿವರು ನಗರ ವೀಕ್ಷಣೆ ಮಾಡಿ ರಸ್ತೆಗುಂಡಿ ಮುಚ್ಚಲು ಗಡುವು ನೀಡಿದರೂ ಪ್ರಯೋಜನವಾಗಿಲ್ಲ. ಇವರು ಯಾವ ರೀತಿಯ ಆಡಳಿತ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಯಾಪೈಸೆ ನೀಡಿಲ್ಲ:

ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ(Development) ಪ್ರತೀ ವರ್ಷ ಸಾವಿರಾರು ಕೋಟಿ ರು. ಅನುದಾನ ನೀಡಿ ಬಳಕೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನಯಾಪೈಸೆ ನೀಡಿಲ್ಲ ಎಂದು ದೂರಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಕಾಲ ಕಾಲಕ್ಕೆ ಗುಂಡಿ ಮುಚ್ಚಲಾಗ್ತಿತ್ತು

ಕಾಂಗ್ರೆಸ್‌(Congress) ಅಧಿಕಾರಾವಧಿಯಲ್ಲೂ ರಸ್ತೆಗುಂಡಿಗಳಾಗಿದ್ದವು. ಆದರೆ, ನಾವು ಕಾಲ ಕಾಲಕ್ಕೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೆವು. ಬಿಜೆಪಿ ಸರ್ಕಾರದ ರೀತಿ ಹೈಕೋರ್ಟ್‌ನಿಂದ(Highcourt) ಛೀಮಾರಿ ಹಾಕಿಸಿಕೊಂಡು ಗುಂಡಿ ಮುಚ್ಚುವ ಕೆಲಸ ಮಾಡಿದವರಲ್ಲ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ಬೆಂಗ್ಳೂರಿನ ರಸ್ತೆಗುಂಡಿ ಮುಚ್ಚೋರು ಯಾರು?: ಜನರ ಜೀವಕ್ಕೆ ಬೆಲೆನೇ ಇಲ್ವಾ?

ನ್ಯಾಯಾಲಯ ಛೀಮಾರಿ ಹಾಕಿದರೂ ರಸ್ತೆಗುಂಡಿ ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ಆಗುತ್ತಿಲ್ಲ. ಬಿಜೆಪಿಯವರಿಗೆ ಅಧಿಕಾರ ನಡೆಸಲು ಬರುವುದಿಲ್ಲ. ತಮ್ಮ ತಪ್ಪು, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬೇರೆಯವರ ಬಗ್ಗೆ ಟೀಕೆ ಮಾಡುತ್ತಾರೆ. ಕಾಂಗ್ರೆಸ್‌ ಅವಧಿಯಲ್ಲಿ ಆದ ವೈಟ್‌ಟಾಪಿಂಗ್‌ ರಸ್ತೆ ಬಗ್ಗೆ ಅಕ್ರಮದ ಆರೋಪ ಮಾಡಿದರು. ಆದರೆ, ತನಿಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿ ಬಂದಿದೆ ಎಂದು ಹೇಳಿದರು.

ಸುಸ್ಥಿತಿಯಲ್ಲಿದ್ದ ರಸ್ತೆಗಳ ಪಟ್ಟಿ ಮಾಡಿ ಶೀಘ್ರ ದುರಸ್ತಿ ಪಡಿಸಿ: ಗೌರವ್‌ ಗುಪ್ತಾ

ಪ್ರತಿ ವಾರ್ಡ್‌ಗಳಲ್ಲಿ ಸುಸ್ಥಿತಿಯಲ್ಲಿ ಇಲ್ಲದ ರಸ್ತೆಗಳ ಪಟ್ಟಿಮಾಡಿ ಗುತ್ತಿಗೆದಾರರಿಂದ ಕೂಡಲೇ ರಸ್ತೆಗಳನ್ನು ದುರಸ್ತಿಪಡಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ(BBMP) ಮುಖ್ಯ ಅಯುಕ್ತ ಗೌರವ್‌ ಗುಪ್ತಾ(Gaurav Gupta) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುಪ್ತಾ, ವಾರ್ಡ್‌ಗಳಲ್ಲಿ ಜಲಮಂಡಳಿ, ಬೆಸ್ಕಾಂ ರಸ್ತೆಗಳನ್ನು ಅಗೆದು ಪರಿಣಾಮ ಹಾಳಾಗಿರುವ ರಸ್ತೆಗಳನ್ನು ತ್ವರಿತವಾಗಿ ದುರಸ್ತಿ ಪಡಿಸಬೇಕು. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 5 ವಾರ್ಡ್‌ಗಳಿದ್ದು 110 ಹಳ್ಳಿಗಳ ಪೈಕಿ 19 ಹಳ್ಳಿಗಳು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಲಿವೆ. ಈ ಸಂಬಂಧ ಜಲಮಂಡಳಿ ವತಿಯಿಂದ ನಡೆಯುತ್ತಿರುವ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಕಾಮಗಾರಿ ಮತ್ತು ಬೆಸ್ಕಾಂ ಅಳವಡಿಸುತ್ತಿರುವ ನೆಲದಡಿ ಕೇಬಲ್‌ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಬೆಂಗ್ಳೂರಿನ ರಸ್ತೆಗಳು ಈಗ ಮೃತ್ಯಗುಂಡಿಗಳು..!

ಕೆರೆ ಬಂಡ್‌ ಸರಿಪಡಿಸಿ:

ಹೇರೋಹಳ್ಳಿ ವಾರ್ಡ್‌ ವ್ಯಾಪ್ತಿಯ ಗಾಂಧಿನಗರ ಹೊಸಕೆರೆಯು 43.3 ಎಕರೆ ಪ್ರದೇಶದಲ್ಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2019ರಲ್ಲಿ ಪಾಲಿಕೆಗೆ ಹಸ್ತಾಂತರವಾಗಿದೆ. ಪ್ರಸ್ತುತ ಕೆರೆಯ ಬಂಡ್‌ನಲ್ಲಿ ನೀರು ಸೋರಿಕೆಯಾಗುತ್ತಿದೆ. ಹಾಗಾಗಿ ಕೆರೆಯಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಜೊತೆಗೆ ಜಲಮಂಡಳಿಯ ಪೈಪ್‌ಲೈನ್‌ನಿಂದ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಈ ಸಂಬಂಧ ಬಿಡಿಎ ಹಾಗೂ ಜಲಮಂಡಳಿಯಿಂದ ಇರುವ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದರು.

ಬೆಸ್ಕಾಂ ವತಿಯಿಂದ ನೆಲದಡಿ 11 ಕೆ.ವಿ ಕೇಬಲ… ಅಳವಡಿಸುವ ಕಾರ್ಯ ನಡೆಯುತ್ತಿದ್ದು, ರಸ್ತೆ ಭಾಗದ ಪ್ರತಿ 100 ಅಡಿ ದೂರದಲ್ಲಿ ಅಗೆದು ಕೇಬಲ್‌ ಅಳವಡಿಸುತ್ತಿದ್ದಾರೆ. ರಸ್ತೆ ಅಗೆದ ಬಳಿಕ ಅದನ್ನು ಮುಚ್ಚುವ ಕಾರ್ಯವಾಗುತ್ತಿಲ್ಲ. ಜೊತೆಗೆ ಕೇಬಲ್‌ಗಳು ರಸ್ತೆ ಮೇಲೆಯೇ ಬಿಡಲಾಗುತ್ತಿದೆ. ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿ ಚರಂಡಿ ಕೆಲಸ ನಡೆಯುತ್ತಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಬಿಡಿಎ ಆಯುಕ್ತ ರಾಜೇಶ್‌ಗೌಡ, ವಲಯ ಆಯುಕ್ತ ರೆಡ್ಡಿ ಶಂಕರ್‌ಬಾಬು, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿರ್‌ ಪ್ರಹ್ಲಾದ್‌, ಜಂಟಿ ಆಯುಕ್ತ ನಾಗರಾಜು, ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಸುಗುಣಾ, ಮುಖ್ಯ ಎಂಜಿನಿಯರ್‌ ನರಸರಾಂರಾವ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಸಚಿವರ ಆಕ್ರೋಶ

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, 110 ಹಳ್ಳಿಗಳಿಗೆ ಕಾವೇರಿ ನೀರು ಕೊಡಲು ಸಂಪೂರ್ಣ ವಿಫಲರಾಗಿದ್ದೀರಿ. ಈಗ 2023ಕ್ಕೆ ಕಾವೇರಿ ನೀರು ಸಂಪರ್ಕ ಕೊಡುತ್ತೇವೆ ಎಂದು ಉತ್ತರ ನೀಡುತ್ತಿದ್ದು ನನ್ನ ರಾಜಕೀಯ ಭವಿಷ್ಯವನ್ನು ಸಮಾಧಿ ಮಾಡಲು ಹೊರಟ್ಟಿದ್ದಾರೆ. ಕಾವೇರಿ ನೀರು ಸಮಪರ್ಕ ಹಾಗೂ ಒಳಚರಂಡಿ ಕಾಮಗಾರಿ ಬರುವ ಡಿಸೆಂಬರ್‌ ವೇಳಗೆ ಪೂರ್ಣಗೊಳಿಸಲು ಎಲ್ಲಾ ಸೂಕ್ತ ಕ್ರಮ ಜರುಗಿಸಬೇಕು. ಪೂರ್ಣಗೊಳಿಸದಿದ್ದರೆ ವರ್ಗಾವಣೆಯಾದರೂ ನಿಮ್ಮನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
 

Follow Us:
Download App:
  • android
  • ios