Asianet Suvarna News Asianet Suvarna News

ಬೆಂಗ್ಳೂರಿನ ರಸ್ತೆಗುಂಡಿ ಮುಚ್ಚೋರು ಯಾರು?: ಜನರ ಜೀವಕ್ಕೆ ಬೆಲೆನೇ ಇಲ್ವಾ?

*  ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ನಡುವೆ ಸಮನ್ವಯದ ಕೊರತೆ
*  ಕಾಮಗಾರಿ ಮುಗಿದ ಮೇಲೆ ಗುಂಡಿ ಮುಚ್ಚಲು ಕೆಸರೆರಚಾಟ
*  ರಸ್ತೆಗುಂಡಿಗೆ 60 ದಿನದೊಳಗೆ ಐವರು ಬೈಕ್‌ ಸವಾರರು ಬಲಿ
 

Who is Patching to Potholes in Bengaluru grg
Author
Bengaluru, First Published Oct 27, 2021, 9:26 AM IST
  • Facebook
  • Twitter
  • Whatsapp

ಸಂಪತ್‌ ತರೀಕೆರೆ

ಬೆಂಗಳೂರು(ಅ.27):  ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಗೊಂದಲದ ಗೂಡಾಗಿದ್ದು, ಗುಂಡಿ ಮುಚ್ಚುವವರು ಯಾರು ಎನ್ನುವ ದೊಡ್ಡ ಪ್ರಶ್ನೆ ಎದುರಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಜಲಮಂಡಳಿ(BWSSB) ಮತ್ತು ಬೆಸ್ಕಾಂ(BESCOM) ಜವಾಬ್ದಾರಿ ನಿರ್ವಹಣೆ ವೈಫಲ್ಯ ಹಾಗೂ ಸಮನ್ವಯ ಕೊರತೆ ಜನರ ಪ್ರಾಣಕ್ಕೆ ಕಂಟಕವಾಗಿದೆ.

ನಿರಂತರ ಮಳೆಗೆ ಬಿಬಿಎಂಪಿ ವ್ಯಾಪ್ತಿಯ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿ(Potholes) ಬಿದ್ದಿವೆ. ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಕೆಲ ಬೈಕ್‌ ಸವಾರರು ಜೀವ ಕಳೆದು ಕೊಂಡಿದ್ದಾರೆ. ಸಂಚಾರ ಪೊಲೀಸರ(Police) ಮಾಹಿತಿಯಂತೆ ಈ ರಸ್ತೆ ಗುಂಡಿಗಳ ದೆಸೆಯಿಂದ ನೂರಾರು ಅಪಘಾತಗಳು(Accident) ಸಂಭವಿಸಿವೆ. ಕಳೆದ 60 ದಿನಗಳಲ್ಲಿ ಲಗ್ಗೆರೆಯ ಡಾ. ರಾಜಕುಮಾರ್‌ ಸಮಾಧಿ ರಸ್ತೆ, ಕೆಂಗೇರಿ- ಉಲ್ಲಾಳು ರಸ್ತೆ, ಮಾಗಡಿ ರಸ್ತೆಯ ನೈಸ್‌ ರೋಡ್‌ ಜಂಕ್ಷನ್‌, ಲಿಂಗರಾಜಪುರ ಮುಖ್ಯರಸ್ತೆ, ಚಿಕ್ಕಗೊಲ್ಲಹಳ್ಳಿ ಮತ್ತು ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ರಸ್ತೆಗುಂಡಿ ತಪ್ಪಿಸಲು ಯತ್ನದಲ್ಲಿ ಐದು ಮಂದಿ ಬೈಕ್‌ ಸವಾರರು ಸಾವನ್ನಪ್ಪಿದ್ದಾರೆ(Death).

ಪೀಣ್ಯ 2ನೇ ಹಂತದ ಅಂದ್ರಳ್ಳಿಯ ತಿಗಳರಪಾಳ್ಯದಲ್ಲಿ ಬೆಸ್ಕಾಂ ಮತ್ತು ಜಲಮಂಡಳಿ ಕಾಮಗಾರಿ ಅವ್ಯವಸ್ಥೆ ವಾಹನ ಸವಾರರಿಗೆ ನಿತ್ಯ ನರಕದ ದರ್ಶನ ಮಾಡಿಸುತ್ತಿದೆ. ಬೆಸ್ಕಾಂನವರು ಅನೇಕ ಕಡೆಗಳಲ್ಲಿ ಕೇಬಲ್‌ ಅಳವಡಿಸಲು ತೆಗೆದ ಗುಂಡಿಗಳನ್ನು ಮುಚ್ಚಿಲ್ಲ. ಹಾಗೆಯೇ ಜಲಮಂಡಳಿ ಕಾವೇರಿ ನೀರು ಪೂರೈಕೆಗೆಂದು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಆರಂಭಿಸಿದ್ದು ಮಣ್ಣನ್ನು ರಸ್ತೆ ಸುರಿದಿದೆ. ಹಾಗಾಗಿ ಕೆಸರು ಗದ್ದೆಯಂತಾಗಿರುವ ತಿಗಳರಪಾಳ್ಯದ ರಸ್ತೆಗಳಲ್ಲಿ ಕೆಲವಡೆ ಒಂದು ಅಡಿಗಿಂತ ದೊಡ್ಡ ಗುಂಡಿಗಳು ಬಿದ್ದಿವೆ.

ಬೆಂಗ್ಳೂರಿನ ರಸ್ತೆಗಳು ಈಗ ಮೃತ್ಯಗುಂಡಿಗಳು..!

40 ಅಡಿಗೆ ಕುಸಿದ 100 ಅಡಿ ರಸ್ತೆ ಅಗಲ:

ಹಾಗೆಯೇ ವಿಶ್ವೇಶ್ವರಯ್ಯ ಲೇಔಟ್‌ನ 100 ಅಡಿ ರಸ್ತೆಯಲ್ಲಿ ಜಲಮಂಡಳಿ ಕಳೆದ ಎಂಟು ತಿಂಗಳಿನಿಂದ ಕಾವೇರಿ ನೀರು ಸರಬರಾಜಿಗೆ ಹೊಸ ಪೈಪ್‌ಲೈನ್‌ ಅಳವಡಿಸುತ್ತಿದೆ. ಹಾಗಾಗಿ ಕೆಲವೆಡೆ ರಸ್ತೆ ಅಗೆದು ಗುಂಡಿ ಮಾಡಿದ್ದು, ಮಣ್ಣನ್ನು ರಸ್ತೆಗೆ ಸುರಿದ ಪರಿಣಾಮ 100 ಅಡಿ ರಸ್ತೆ ಕೇವಲ 40 ಅಡಿ ರಸ್ತೆಯಂತಾಗಿದೆ. ವಾಹನಗಳು ಏಕಮುಖ ಸಂಚಾರ ಮಾಡುತ್ತಿದ್ದು, ಮುದ್ದಿನಪಾಳ್ಯದ ರಸ್ತೆ ಗುಂಡಿಮಯವಾಗಿದೆ ಎಂದು ಸ್ಥಳೀಯ ನಿವಾಸಿ ಎಚ್‌.ಕೆ.ಗೌಡಯ್ಯ ಆರೋಪಿಸಿದ್ದಾರೆ.

ಅಂಜನಾಪುರ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಗೋಳು ಕೇಳುವವರೇ ಇಲ್ಲವಾಗಿದೆ. ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣ ಸಮೀಪದಿಂದ ಗೊಟ್ಟಿಗೆರೆ ತನಕವಿರುವ ರಸ್ತೆ ಗುಂಡಿಬಿದ್ದಿದ್ದು ಮಳೆಬಂದರೆ ಕೆರೆಯಂತಾಗುತ್ತದೆ. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ ಜಲಮಂಡಳಿಯಿಂದ ಅಗೆದು ಮಣ್ಣು ಮುಚ್ಚಲಾಗಿದೆ. ಆದರೆ, ರಸ್ತೆ ಮರು ನಿರ್ಮಾಣ ಮಾತ್ರ ಆಗಿಲ್ಲ. ಜಲಮಂಡಳಿ ಅಧಿಕಾರಿಗಳು ಬಿಡಿಎ ಅಥವಾ ಬಿಬಿಎಂಪಿ ರಸ್ತೆ ನಿರ್ಮಾಣ ಮಾಡಲಿ ಎಂದು ಜವಾಬ್ದಾರಿಯಿಂದ ನುಣುಚಿಕೊಂಡಿದ್ದು ವಾಹನ ಸವಾರರಿಗೆ ಸಂಕಷ್ಟತಂದೊಡ್ಡಿದೆ.

ಕಾಮಗಾರಿ ಮುಗಿದ ಮೇಲೆ ತಿರುಗಿಯೂ ನೋಡಲ್ಲ

ಜಲಮಂಡಳಿಯವರು(Water Board) ನೀರಿನ ಕೊಳವೆ ದುರಸ್ತಿ ಮಾಡಿದ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ಬೆಸ್ಕಾಂನವರು ನೆಲದಡಿ ಕೇಬಲ್‌ ಅಳವಡಿಸಲು ರಸ್ತೆ ಅಗೆಯುತ್ತಿದ್ದಾರೆ. ನಂದಿನಿ ಲೇಔಟ್‌ನ ಶ್ರೀನಿವಾಸ ನಗರ ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಬೆಸ್ಕಾಂನವರು ಅಗೆದಿದ್ದಾರೆ. ನರಸಿಂಹಲೇಔಟ್‌ 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ಹಾಳಾಗಿದೆ. ಶಂಕರನಗರ ಮುಖ್ಯರಸ್ತೆಯಲ್ಲಿ ಬೆಸ್ಕಾಂ ಮತ್ತು ಜಲಮಂಡಳಿ ಕಾಮಗಾರಿಯಿಂದ ರಸ್ತೆಗಳು ಗುಂಡಿಬಿದ್ದಿವೆ. ಆದರೆ ಕಾಮಗಾರಿ ಮುಗಿದ ಬಳಿಕ ಗುಂಡಿ ಮುಚ್ಚುವುದಕ್ಕೆ ಮಾತ್ರ ಯಾರು ಮುಂದಾಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಬೆಂಗಳೂರು: ಜೀವಕ್ಕೆ ಮಾರಕವಾದ ರಸ್ತೆಗುಂಡಿ ತೇಪೆ ಕಾರ್ಯ..!

ಅಧಿಕಾರಿಗಳ ನಡುವೆ ಜಟಾಪಟಿ

ಪಾಲಿಕೆ ವ್ಯಾಪ್ತಿಯಲ್ಲಿ 13,874 ಕಿ.ಮೀ. ರಸ್ತೆಯಿದ್ದು, ಈ ಪೈಕಿ 1,344 ಕಿ.ಮೀ. ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿದೆ. 320 ಕಿ.ಮೀ. ರಸ್ತೆ ಸುಸ್ಥಿತಿಯಲ್ಲಿದ್ದು 449 ಕಿ.ಮೀ ರಸ್ತೆ ಹಾಳಾಗಿದೆ. 256 ಕಿ.ಮೀ ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದ್ದು ಬಾಕಿ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಬಹುತೇಕ ಮುಖ್ಯರಸ್ತೆಗಳು, ಉಪ ಮುಖ್ಯರಸ್ತೆಗಳಲ್ಲಿ ಬಹುತೇಕ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ ವಾರ್ಡ್‌ಗಳ ಜನವಸತಿ ಪ್ರದೇಶಗಳಲ್ಲಿ ಜಲಮಂಡಳಿಯಿಂದ ಪೈಪ್‌ಲೈನ್‌ ಹಾಗೂ ಬೆಸ್ಕಾಂ ಕೇಬಲ್‌ ಅಳವಡಿಕೆ ಕಾರ್ಯಗಳು ಆಗಾಗ ನಡೆಯುತ್ತಿದ್ದು ಸಂಪೂರ್ಣವಾಗಿ ಗುಂಡಿಗಳನ್ನು ಮುಚ್ಚಲಾಗಿಲ್ಲ. ನಿಯಮದ ಪ್ರಕಾರ ಗುಂಡಿ ತೆಗೆದವರೇ ಅದನ್ನು ಮುಚ್ಚಬೇಕಿದ್ದು, ಈ ವಿಚಾರದಲ್ಲಿ ಆಗಾಗ ಅಧಿಕಾರಿಗಳ ನಡುವೆ ಗಲಾಟೆ ಸಾಮಾನ್ಯ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಸ್ಕಾಂ, ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳಲ್ಲಿ ಸಮನ್ವಯ ಕೊರತೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಮೂರು ಸಂಸ್ಥೆಗಳ ಅಧಿಕಾರಿಗಳೊಂದಿಗೆ ಒಂದೇ ವೇದಿಕೆಯಡಿ ತಂದು ರಸ್ತೆ ಗುಂಡಿ ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gourav Gupta) ತಿಳಿಸಿದ್ದಾರೆ.  
 

Follow Us:
Download App:
  • android
  • ios