Asianet Suvarna News Asianet Suvarna News

ಕನ್ನಡಪ್ರಭ ವರದಿ ಫಲಶ್ರುತಿ: ಬೆಂಗ್ಳೂರಿನ ರಸ್ತೆ ಗುಂಡಿಗೆ ಶೀಘ್ರವೇ ಮುಕ್ತಿ

*   ಮಳೆಯಿಂದ ಮಣ್ಣಲ್ಲಿ ತೇವಾಂಶ ಹೆಚ್ಚಳ
*   ಕಾಮಗಾರಿ ನಿತ್ಯವೂ ಪರಿಶೀಲನೆ
*  ‘ಗುಂಡಿ ಗಂಡಾಂತರ’ ಹೆಸರಿನಲ್ಲಿ ಸಮಸ್ಯೆ ಬಗ್ಗೆ ಕನ್ನಡಪ್ರಭ ಅಭಿಯಾನ
 

BBMP Chief Commissioner Gaurav Gupta React on Potholes in Bengaluru Road grg
Author
Bengaluru, First Published Oct 28, 2021, 9:26 AM IST

ಸಂಪತ್‌ ತರೀಕೆರೆ

ಬೆಂಗಳೂರು(ಅ.28):  ಪಾಲಿಕೆ ವ್ಯಾಪ್ತಿಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಮಳೆ ಸ್ವಲ್ಪ ಜಾಸ್ತಿಯಾಗಿದ್ದು, ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದೆ. ಹೀಗಾಗಿ ರಸ್ತೆ ಗುಂಡಿ ಕಾಮಗಾರಿ ವಿಳಂಬವಾಗಿದ್ದು, ಶೀಘ್ರವೇ ಗುಂಡಿ ಮುಚ್ಚುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವುದಾಗಿ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದ್ದಾರೆ. 

‘ಕನ್ನಡಪ್ರಭ’ದಲ್ಲಿ (Kannada Prabha) ಪ್ರಕಟವಾಗುತ್ತಿರುವ ‘ಗುಂಡಿ ಗಂಡಾಂತರ’ ಸುದ್ದಿಗಳ(News) ಸರಣಿ ಹಿನ್ನೆಲೆಯಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ನಿರಂತರ ಮಳೆಯ ಪರಿಣಾಮ ಮಣ್ಣಿನಲ್ಲಿ ತೇವಾಂಶ ಹೆಚ್ಚು ಇದೆ. ಈ ಕಾರಣದಿಂದ ಡಾಂಬರೀಕರಣ ಮಾಡಲು ಸಾಧ್ಯವಾಗಿರಲಿಲ್ಲ. ಕೆಲವು ಕಡೆ ರಸ್ತೆ ಗುಂಡಿಗಳಿಗೆ ಸಿಮೆಂಟ್‌ ಮಿಶ್ರಣವನ್ನು ತುಂಬಿ ಮುಚ್ಚಲಾಗಿದೆ. ಪ್ರತಿ ದಿನವೂ ರಸ್ತೆ ಗುಂಡಿ(Potholes), ತ್ಯಾಜ್ಯ ವಿಲೇವಾರಿ ಮತ್ತು ನಗರದ(Bengaluru) ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದರು.

ಬೆಂಗ್ಳೂರಿನ ರಸ್ತೆಗುಂಡಿ ಮುಚ್ಚೋರು ಯಾರು?: ಜನರ ಜೀವಕ್ಕೆ ಬೆಲೆನೇ ಇಲ್ವಾ?

ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಸಂಬಂಧ ಬೆಸ್ಕಾ(BESCOM), ಬೆಂಗಳೂರು ಜಲಮಂಡಳಿ (BWSSB) ಹಾಗೂ ಸ್ಮಾರ್ಟ್‌ಸಿಟಿ(Smartcity) ಎಂಜಿನಿಯರ್‌ಗಳೊಂದಿಗೆ ಸಮನ್ವಯತೆ ಸಾಧಿಸಿ ತ್ವರಿತಗತಿಯಲ್ಲಿ ಸಮಸ್ಯೆ ಇತ್ಯರ್ಥ ಮಾಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲು ಬಿಬಿಎಂಪಿ ಸಿದ್ಧವಿದೆ. ಜಲಮಂಡಳಿ ಮತ್ತು ಬೆಸ್ಕಾಂ ಸಂಸ್ಥೆಗಳು ತಮ್ಮ ಕಾರ್ಯ ಮುಗಿದಿರುವ ಬಗ್ಗೆ ಪ್ರಮಾಣ ಪತ್ರವನ್ನು ನಿಗದಿತ ಅವಧಿಯಲ್ಲಿ ಕೊಟ್ಟರೆ, ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸಲಿದೆ. ಕೆಲವೆಡೆ ಜಲಮಂಡಳಿಯವರು ಕಳೆದ ಎರಡು ವರ್ಷದ ಹಿಂದೆ ಕೆಲಸ ಶುರು ಮಾಡಿದ್ದು, ಈಗಲೂ ಕೆಲಸ ಮುಗಿಸಿಲ್ಲ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬೊಮ್ಮನಹಳ್ಳಿ ವಲಯದಲ್ಲಿ ಕೇಬಲ್‌(Cable) ಅಳವಡಿಸುವ ಕಾಮಗಾರಿಗಾಗಿ ಹತ್ತಾರು ಅಡಿಗಳಷ್ಟು ಆಳದ ಗುಂಡಿಗಳನ್ನು ತೆಗೆಯಲಾಗಿದೆ. ಜಲಮಂಡಳಿ(Water Board) 110 ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ಸ್ಯಾನಿಟರಿ ಪೈಪ್‌ ಅಳವಡಿಕೆ ಸೇರಿದಂತೆ ಇತ್ಯಾದಿ ಉದ್ದೇಶಗಳಿಗಾಗಿ 2500 ಕಿ.ಮೀ. ಅಗೆದಿದೆ. 974 ಕಿ.ಮೀ.ಗಳಲ್ಲಿ ಮಾತ್ರ ಕಾಮಗಾರಿ ಮುಗಿದಿದೆ. ಉಳಿದ ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ರಸ್ತೆಗಳು(Road) ಹದಗೆಟ್ಟಿದೆ. 110 ಹಳ್ಳಿಗಳ ಪ್ರದೇಶದಲ್ಲಿ ಕೂಡಲೇ ಈ ಕಾಮಗಾರಿ(Work) ಮುಕ್ತಾಯಗೊಳಿಸಬೇಕಿದೆ ಎಂದರು.

ಈಗಾಗಲೇ ರಸ್ತೆ ಅವ್ಯವಸ್ಥೆ ಕುರಿತು ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಆಯಾ ವಲಯ ಮಟ್ಟದ ಬೆಸ್ಕಾಂ, ಮೆಟ್ರೋ, ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು, ಮುಖ್ಯ ಎಂಜಿನಿಯರ್‌ ಸೇರಿದಂತೆ ಇತರೆ ಸಹಾಯಕ ಎಂಜಿನಿಯರ್‌ಗಳನ್ನು ಕರೆದು ಸಭೆ ನಡೆಸಲಿದ್ದೇವೆ. ಇದೆಲ್ಲಾ ವ್ಯವಸ್ಥಿತವಾಗಿ ನಡೆದರೆ ತಳಮಟ್ಟದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರೊಂದಿಗೆ ಸಮನ್ವಯತೆ ಮಾಡಿಕೊಂಡು ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಬೆಂಗಳೂರು: ಜೀವಕ್ಕೆ ಮಾರಕವಾದ ರಸ್ತೆಗುಂಡಿ ತೇಪೆ ಕಾರ್ಯ..!

ತಿಂಗಳಲ್ಲಿ ಸಮಸ್ಯೆ ಇತ್ಯರ್ಥ

ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಉಪ ಮುಖ್ಯ ರಸ್ತೆಗಳು ಮತ್ತು ಜನದಟ್ಟಣೆ ಇರುವ ಜಾಗದಲ್ಲಿ ಕೂಡಲೇ ಸುಧಾರಣೆ ಮಾಡಬೇಕಿದೆ. ಮುಖ್ಯ ರಸ್ತೆಯಲ್ಲಿ ಕೆಲವು ಕಾಮಗಾರಿ ಬಾಕಿ ಇದೆ. ಇದುವರೆಗೂ ನಿರಂತರವಾಗಿ ಮಳೆ ಸುರಿಯುತ್ತಿದ್ದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಈಗ ಮಳೆ ನಿಂತುಹೋಗಿದ್ದು ದುರಸ್ತಿ ಕಾರ್ಯಕ್ಕೆ ಚಾಲನೆ ಕೊಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ, ಸಮರ್ಪಕ ನಿರ್ವಹಣೆ ಮಾಡಲಾಗುವುದು. ಈ ರಸ್ತೆಯಲ್ಲಿ ಸಮಸ್ಯೆ ಇತ್ತು ಎಂಬುದು ಪತ್ತೆಯಾಗದಂತೆ ಗುಣಮಟ್ಟದ ಕಾಮಗಾರಿ ಕೈಗೊಂಡು ಹಂತ ಹಂತವಾಗಿ ಕಾಮಕಾರಿ ಪೂರ್ಣಗೊಳಿಸಲಾಗುವುದು ಎಂದು ಗೌರವ್‌ ಗುಪ್ತಾ ಭರವಸೆ ನೀಡಿದರು.

ಸಮರ್ಪಕ ನಿರ್ವಹಣೆ

ನಗರದಲ್ಲಿ ಯಾವುದೇ ವಿಪತ್ತು ಬಂದರೂ ಕೂಡ ಎದುರಿಸಲು ಬಿಬಿಎಂಪಿ ಶಕ್ತವಾಗಿದೆ. ಕೋವಿಡ್‌(Covid19), ತ್ಯಾಜ್ಯ ವಿಲೇವಾರಿ, ರಸ್ತೆ ಗುಂಡಿಗಳು ನಿರ್ವಹಣೆ, ಶಿಥಿಲ ಕಟ್ಟಡಗಳು, ಪ್ರವಾಹ ಯಾವುದೇ ಸಮಸ್ಯೆ ಬಂದರೂ ಪರಿಹರಿಸಲು ಬಿಬಿಎಂಪಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಆಯಾ ವಲಯ ಮಟ್ಟದ ಅಧಿಕಾರಿಗಳು ಪಾಲಿಕೆಯ ಸೇನಾನಿಯಂತಿದ್ದು ಜವಾಬ್ದಾರಿ ನಿಭಾಯಿಸಲಿದ್ದಾರೆ. ಕೆಲವರು ಸ್ವಲ್ಪ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದೇವೆ. ಜಲಮಂಡಳಿಯವರು ಅಗೆಯುತ್ತಿರುವ ರಸ್ತೆಗಳನ್ನು ವ್ಯವಸ್ಥಿತವಾಗಿ ದುರಸ್ತಿ ಪಡಿಸಲು ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಕ್ಕಿದೆ ಎಂದು ಗೌರವ್‌ ಗುಪ್ತಾ ಹೇಳಿದರು.

ಇದೇ ವೇಳೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಲ್ಲಿ ಮತ್ತು ಗುಣಮಟ್ಟದ ಕಾಮಗಾರಿ ನಡೆಸದೇ ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
 

Follow Us:
Download App:
  • android
  • ios