Asianet Suvarna News Asianet Suvarna News

ಬೆಂಗ್ಳೂರಿನ ರಸ್ತೆಗಳು ಈಗ ಮೃತ್ಯಗುಂಡಿಗಳು..!

*   ಬೆಂಗಳೂರು ನಗರದ ತುಂಬೆಲ್ಲಾ ದಡ-ಬಡ ರಸ್ತೆಗಳು!
*  ನಿರಂತರ ಮಳೆ, ಅಭಿವೃದ್ಧಿ ಕಾಮಗಾರಿಗಳು
*  ವಾಹನ ಸವಾರರ ಜೀವಗಳು ಬಲಿಯಾಗುತ್ತಿದ್ದರೂ ಸರ್ಕಾರ ಮೌನ 
 

Biggest Potholes in Bengaluru Due to Poor Work grg
Author
Bengaluru, First Published Oct 24, 2021, 11:58 AM IST

ಬೆಂಗಳೂರು(ಅ.24):  ನಗರದಲ್ಲಿ(Bengaluru) ನಿರಂತರ ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳು ಜನರ ಪಾಲಿಗೆ ಮೃತ್ಯು ಗುಂಡಿಗಳಾಗಿ ಪರಿವರ್ತನೆಗೊಂಡಿವೆ. ಕಳಪೆ ಡಾಂಬರೀಕರಣದಿಂದ ಸಣ್ಣ ಮಳೆಗೇ ರಸ್ತೆಗಳು(Road) ಗುಂಡಿ ಬಿದ್ದು ಹಾಳಾಗುತ್ತಿವೆ. ಮತ್ತೆ ಕೆಲವು ಕಡೆ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ರಸ್ತೆಗಳನ್ನು ಪದೇ ಪದೇ ಅಗೆಯಲಾಗುತ್ತಿದೆ. ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಮಾರ್ಟ್‌ಸಿಟಿ(SmartCity), ವೈಟ್‌ಟಾಪಿಂಗ್‌, ಟೆಂಡರ್‌ಶ್ಯೂರ್‌, ರಸ್ತೆ ಅಗಲೀಕರಣ, ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಕೆ, ಪುಟ್‌ಪಾತ್‌ ಅಭಿವೃದ್ಧಿ, ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಹೀಗೆ ನಾನಾ ನೆಪದಲ್ಲಿ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಅದ್ವಾನ ಮಾಡಲಾಗುತ್ತಿದೆ. ಕಾಮಗಾರಿ(Works) ಪೂರ್ಣಗೊಂಡ ಬಳಿಕ ಮರು ಡಾಂಬರೀಕರಣ ಮಾಡದೆ ಹಾಗೆಯೇ ಬಿಡಲಾಗುತ್ತಿದ್ದು ವಾಹನ ಸವಾರರು ಪ್ರಾಣವನ್ನು ಬಿಗಿಯಾಗಿ ಹಿಡಿದುಕೊಂಡು ಸಂಚರಿಸುವಂತ ದುಸ್ಥಿತಿ ಬಂದಿದೆ.

ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಿಂದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಂಪರ್ಕಿಸುವ ಅಂಜನಾಪುರ ಮುಖ್ಯರಸ್ತೆಯಲ್ಲಿ ಗುಂಡಿಗಳೇ(Hole) ತುಂಬಿಕೊಂಡಿದ್ದು ರಸ್ತೆ ಎಲ್ಲಿದೆ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ಎಲೆಕ್ಟ್ರಾನಿಕ್‌ ಸಿಟಿ(Electronic City), ಬೊಮ್ಮಸಂದ್ರ ಕಡೆಗೆ ಹೋಗಲು ಇರುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಆದರೆ, ರಸ್ತೆ ತುಂಬೆಲ್ಲಾ ಗುಂಡಿಗಳೇ ತುಂಬಿಕೊಂಡಿದೆ. ಇನ್ನೂ ಮಳೆ ನೀರು ಗುಂಡಿಗಳಲ್ಲಿ ತುಂಬಿಕೊಂಡರೆ ವಾಹನ ಚಾಲಕರನ್ನು ಆ ದೇವರೇ ಕಾಪಾಡಬೇಕಾದ ಪರಿಸ್ಥಿತಿ ಇದೆ.

ರಸ್ತೆ ಗುಂಡಿಗೆ ಯುವತಿ ಬಲಿ, ಸುವರ್ಣ ನ್ಯೂಸ್ ವರದಿ ಬಳಿಕ FIR ದಾಖಲು

ನಿತ್ಯ ನರಕ ದರ್ಶನ:

ಕೆಂಗೇರಿ ಉಪ ನಗರದಿಂದ ಉಲ್ಲಾಳು ಉಪನಗರ ಮಾರ್ಗದಲ್ಲಿ ಮುದ್ದಯ್ಯನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ 100 ಅಡಿ ರಸ್ತೆಯ ಗುಂಡಿಮಯವಾಗಿದೆ. ಕೊಮ್ಮಘಟ್ಟರಸ್ತೆಯ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಮುದ್ದಯ್ಯನಪಾಳ್ಯದ ತನಕ 6 ಕಿ.ಮೀ. ನಾಲ್ಕು ಪಥದ ರಸ್ತೆಯಲ್ಲಿ ಒಂದೆಡೆ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಚಾಲ್ತಿಯಲ್ಲಿದ್ದರೆ, ಮತ್ತೊಂದೆಡೆ ರಸ್ತೆ ಗುಂಡಿಗಳು ವಾಹನ ಸವಾರರನ್ನು ಸ್ವಾಗತಿಸುತ್ತವೆ. ಹಲವು ಬಾರಿ ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ(BBMP) ಸ್ಥಳೀಯರು ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಮಳೆ ಸುರಿಯುತ್ತಿದ್ದು, ಈ ರಸ್ತೆ ಸಂಚಾರ ಸವಾರರಿಗೆ ನರಕದ ದರ್ಶನ ಮಾಡಿಸುವಂತಿದೆ.

ಶ್ರೀಗಂಧದ ಕಾವಲು ಒಕ್ಕಲಿಗರ ಸಂಘದ ಶಾಲೆ ಸಮೀಪದ ರಸ್ತೆ ಹದಗೆಟ್ಟಿದ್ದರೆ, ಇಂದಿರಾನಗರ 100 ಅಡಿ ವರ್ತುಲ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಈ ಪ್ರದೇಶದಲ್ಲಿ ಐಟಿ ಕಂಪನಿಗಳು ಸಾಕಷ್ಟಿದ್ದರೂ ರಸ್ತೆ ಗುಂಡಿ ಮುಚ್ಚಿ ಅಭಿವೃದ್ಧಿ ಮಾಡುವ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿಲ್ಲ. ಹಾಗೆಯೇ ವಿಜಿನಾಪುರದಿಂದ ಟಿನ್‌ಫ್ಯಾಕ್ಟರಿ ಕಡೆಗೆ ಸಂಪರ್ಕ ಕಲ್ಪಿಸುವ ಎಫ್‌ಐಸಿ ಗೋದಾಮು ಬಳಿಯ ರೈಲ್ವೆ ಕೆಳಸೇತುವೆಯು ಪ್ರತಿ ಬಾರಿ ಮಳೆಯಾದಾಗಲು(Rain)ಕೆರೆಯಂತಾಗುತ್ತದೆ. ಈ ಪರಿಣಾಮ ನೀರು ರಸ್ತೆಗಳಲ್ಲಿ ತುಂಬಿಕೊಂಡು ವಾಹನಗಳ ಸಂಚಾರದಿಂದ(Traffic) ಗುಂಡಿ ಬಿದ್ದಿದೆ.

ಮಾಗಡಿ ರಸ್ತೆ, ಯಶವಂತಪುರ ಮೆಟ್ರೋ ನಿಲ್ದಾಣದಿಂದ(Metro Station) ಗೊರಗುಂಟೆ ಪಾಳ್ಯದವರೆಗೆ, ಹೆಬ್ಬಾಳ- ಗೊರಗುಂಟೆ ಪಾಳ್ಯ ವರ್ತುಲ ರಸ್ತೆಯಲ್ಲಿರುವ ಭದ್ರಪ್ಪ ಲೇಔಟ್‌ ಮೇಲ್ಸೇತುವೆ ಕೆಳಭಾಗ. ಕೊಡಿಗೆಹಳ್ಳಿ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಪೀಣ್ಯ 2ನೇ ಹಂತದಿಂದ ಸುಂಕದಕಟ್ಟೆರಸ್ತೆ, ಮಡಿವಾಳ ಮಾರುಕಟ್ಟೆರಸ್ತೆ, ಬೊಮ್ಮನಹಳ್ಳಿ ಬಸ್‌ನಿಲ್ದಾಣದಿಂದ ಮಂಗಮ್ಮನಪಾಳ್ಯದ ರಸ್ತೆ. ಬೊಮ್ಮನಹಳ್ಳಿ-ಬೇಗೂರು ರಸ್ತೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ರಸ್ತೆ ಗುಂಡಿಗಳು ಬಿದ್ದಿದ್ದು ಸವಾರರು ಪರದಾಡುವಂತ ಪರಿಸ್ಥಿತಿ ಇದೆ. ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಸುತ್ತಮುತ್ತ ಒಳಚರಂಡಿ ಕೊಳವೆ ಅಳವಡಿಸುವ ಕೆಲಸ ನಡೆಯುತ್ತಿದ್ದು ಮಂಗನಹಳ್ಳಿ ಮುಖ್ಯರಸ್ತೆಯಲ್ಲೂ ಇತ್ತೀಚೆಗೆ ಡಾಂಬರ್‌ ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಸಲಾಗಿತ್ತು. ಹಾಗಾಗಿ ಈ ರಸ್ತೆಯು ಹದಗೆಟ್ಟುಹೋಗಿದೆ.

ಮೈಸೂರು ರಸ್ತೆಗೆ ತೇಪೆ

ಇನ್ನೂ ಮೈಸೂರು(Mysuru) ರಸ್ತೆಯ ಬಹುತೇಕ ಕಡೆ ರಸ್ತೆ ಗುಂಡಿ ಸುಗಮ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದ್ದು ತೇಪೆ ಹಚ್ಚುವ ಕೆಲಸ ಸಾಗಿದೆ. ಮೈಸೂರು-ಬೆಂಗಳೂರು ರಸ್ತೆ ಎಂದರೆ ಮೊದಲೇ ವಾಹನ ದಟ್ಟಣೆಯ ರಸ್ತೆ. ಮೈಸೂರು- ಬೆಂಗಳೂರು ಕಡೆಗೆ ಹೋಗಿ ಬರುವ ಮಾರ್ಗ ಒಂದೇ ಆಗಿದ್ದು ಸದಾ ವಾಹನ ದಟ್ಟಣೆ ಹೆಚ್ಚು. ಹಾಗಾಗಿ ವಾಹನಗಳು ಗಂಟೆಗಟ್ಟಲೆ ನಿಲ್ಲಬೇಕಾದ ಸ್ಥಿತಿ ಇದೆ. ಈ ನಡುವೆ ಕೆಲವೆಡೆ ಸಿಮೆಂಟ್‌ ರಸ್ತೆ ಇದ್ದರೆ, ಇನ್ನು ಕೆಲವೆಡೆ ಡಾಂಬರ್‌ ರಸ್ತೆ ಇದ್ದು, ಮಳೆ ಬಂದಾಗ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ಅಡಚಣೆ ಮಾಡುತ್ತಿದೆ. ಮಳೆ ಇಲ್ಲದ ಸಂದರ್ಭದಲ್ಲಿ ಈ ಗುಂಡಿಗಳ ದೆಸೆಯಿಂದ ಧೂಳು ಸುತ್ತಮುತ್ತಲ ಪ್ರದೇಶವನ್ನು ತುಂಬಿಕೊಳ್ಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಬೆಂಗ್ಳೂರು ರಸ್ತೆ ಗುಂಡಿಗೆ ಮತ್ತೊಂದು ಸಾವು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿ ಬೇಕು?

ಸಿಎಂಗೆ ಸಾರ್ವಜನಿಕರ ಸವಾಲು!

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹೋಣೆಗಾರಿಕೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai)  ಅವರು, ಕೇವಲ ಬೊಮ್ಮನಹಳ್ಳಿಗೆ ಭೇಟಿ ಕೊಟ್ಟು ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರೆ ಸಾಲದು. ಬೆಂಗಳೂರಿನಲ್ಲಿ ಲಕ್ಷಾಂತರ ಅಪಾಯಕಾರಿ ಗುಂಡಿಗಳಿವೆ. ತಕ್ಷಣವೇ ಇವುಗಳನ್ನು ಮುಚ್ಚುವ ಕೆಲಸ ಮಾಡದಿದ್ದರೆ ಜೀವ ಹಾನಿ ಸಂಭವಿಸುವ ಅಪಾಯವಿದೆ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳು(Chief Minister) ನಗರ ಪ್ರದಕ್ಷಿಣೆ ಬಂದರೆ ಹಾಳಾಗಿರುವ ರಸ್ತೆ, ಬೀದಿ ದೀಪ ಇಲ್ಲದ ರಸ್ತೆ, ಗುಂಡಿಬಿದ್ದಿರುವ ರಸ್ತೆಗಳನ್ನು ನಾವು ತೋರಿಸುತ್ತೇವೆ. ನಾವು ಹೇಳುವ ಜಾಗಕ್ಕೆ ಬನ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ(Social Media) ಮುಖ್ಯಮಂತ್ರಿಗಳಿಗೆ ಸವಾಲು ಹಾಕುತ್ತಿದ್ದಾರೆ.
 

Follow Us:
Download App:
  • android
  • ios