ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ.

ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

Add Asianetnews Kannada as a Preferred SourcegooglePreferred

ಚಾಮರಾಜನಗರ (ಮಾ.16): ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರ ಸುರಕ್ಷತೆ ಹಾಗೂ ರಕ್ಷಣೆ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಆಸರೆ ಕಾರ್ಯಕ್ರಮ ಅನುಷ್ಠಾನಗೊಳಿದೆ. ಈ ಕಾರ್ಯಕ್ರಮಕ್ಕೆ ಮಾಹಿತಿ ಕಲೆ ಹಾಕಲು ಹೋದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕತ್ತಲೆಯಲ್ಲಿ ಬದುಕು ದೂಡುತ್ತಿದ್ದ ಇಬ್ಬರು ಒಂಟಿ ವೃದ್ಧೆಯರಿಗೆ ಬೆಳಕಿನ ಆಸರೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆ ಪೊಲೀಸ್ ಕಾನ್ಸ್ಟೇಬಲ್ ಮಾಡಿದ ಕೆಲಸವಾದರು ಏನು ಈ ಸ್ಟೋರಿ ನೋಡಿ..

ಹಿರಿಯ ನಾಗರಿಕರು ಹಾಗು ಒಂಟಿಯಾಗಿ ಬದುಕುತ್ತಿರುವರಿಗೆ ರಕ್ಷಣೆ, ಕಾಳಜಿ ಹಾಗು ಅಗತ್ಯ ಕಾನೂನು ನೆರವು ನೀಡುವ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ ‘ಆಸರೆ’ ಯೋಜನೆ ಜಾರಿಗೆ ತಂದಿದೆ. ಇದರ ಅನ್ವಯ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸವಾಗಿರುವ ಹಿರಿಯ ನಾಗರಿಕರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಹೀಗೆ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲು ಹೋದ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಅವರಿಗೆ ಆಲೂರು ಗ್ರಾಮದಲ್ಲಿ ಕಂಡಿದ್ದು ಇಬ್ಬರು ವೃದ್ಧೆಯರ ಅಂಧಕಾರದ ಬದುಕು.

ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ. ಕಳೆದ ಐವತ್ತು ಆರವತ್ತು ವರ್ಷಗಳಿಂದಲು ರಾತ್ರಿ ವೇಳೆ ಸೀಮೆಎಣ್ಣೆ ದೀಪ ಹಾಗು ಮೇಣದ ಬತ್ತಿಯ ಬೆಳಕಿನಲ್ಲೇ ಕಾಲ ಕಳೆಯತ್ತಿದ್ದ ಈ ಇಬ್ಬರು ವೃದ್ಧೆಯರ ಮನೆಗಳಿಗೆ ತಕ್ಷಣವೇ ತಮ್ಮ ಸ್ವಂತ ಹಣದಿಂದ ಈ ವೃದ್ಧೆಯರ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ..

ಹಿರಿಯ ಜೀವಗಳಿಗೆ ಕಾನೂನು ನೆರವು

ಕೂಲಿ ನಾಲಿ ಮಾಡಿಕೊಂಡು ತಗಡಿನ ಶೆಡ್ಗಳಲ್ಲಿ ರಾತ್ರಿ ವೇಳೆ ಸೀಮೆಎಣ್ಣೆ ಹಾಗು ಮೇಣದ ಬತ್ತಿಯ ಬೆಳಕಿನಲ್ಲೇ ಬದುಕು ಸವೆಸುತ್ತಿದ್ದ ಮಹದೇವಮ್ಮ ಹಾಗು ರಾಜಮ್ಮ ಅವರ ಬದುಕಿಗೆ ವಿದ್ಯುತ್ ಬೆಳಕು ಹರಿಸುವ ಮೂಲಕ ಪೊಲೀಸ್ ಕಾನ್ಸ್ಟೇಬಲ್ ಕುಮಾರಾಸ್ವಾಮಿ ಮಾನವೀಯತೆ ಮೆರೆದಿದ್ದಾರೆ. ಈ ಒಂಟಿ ವೃದ್ಧೆಯರ ಮೊಗದಲ್ಲಿ ಬೆಳಕಿನ ಮಂದಹಾಸ ಮೂಡಿದೆ. ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ ಎಂಬುದಕ್ಕೆ ಅನ್ವರ್ಥವಾಗಿ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಈ ಹಿರಿಯ ಜೀವಗಳಿಗೆ ಕಾನೂನು ನೆರವು ಮಾತ್ರವಲ್ಲದೆ ಮಾನವೀಯತೆ ಸಹಾಯಹಸ್ತ ಚಾಚಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.