ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಣಗಳ್ಳಿದೊಡ್ಡಿ ಗ್ರಾಮದಲ್ಲಿ, ತಂದೆಯ ಅಂತ್ಯಕ್ರಿಯೆ ಮುಗಿಸಿದ ಮರುದಿನವೇ ಶಿಕ್ಷಕ ಮಗ ಸಾವನ್ನಪ್ಪಿದ್ದಾರೆ. ತಂದೆ ದೊಡ್ಡಲಿಂಗಯ್ಯ ಅವರ ನಿಧನದ ದುಃಖದಲ್ಲಿದ್ದ ಮಗ ಮಲ್ಲಣ್ಣ ಅವರೂ ಸಾವನ್ನಪ್ಪಿದ್ದು, ಈ ಹೃದಯವಿದ್ರಾವಕ ಘಟನೆಯಿಂದ ಇಡೀ ಗ್ರಾಮ ಮರುಗಿದೆ.

ಚಾಮರಾಜನಗರ(ನ.30): ತಂದೆಯ ನಿಧನದ ಬೆನ್ನಲ್ಲೇ ಅವರ ಪುತ್ರ ಕೂಡ ಕೊನೆಯುಸಿರೆಳೆದ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅಣಗಳ್ಳಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ತಂದೆಯ ಶವಸಂಸ್ಕಾರದ ಆಘಾತದಲ್ಲಿದ್ದ ಮಗ ಮರುದಿನವೇ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ಮಲ್ಲಣ್ಣ (54) ಮೃತ ದುರ್ದೈವಿ, ವೃತ್ತಿಯಲ್ಲಿ ಶಿಕ್ಷಕರು. ಅಣಗಳ್ಳಿದೊಡ್ಡಿ ಗ್ರಾಮದ ನಿವಾಸಿ ದೊಡ್ಡಲಿಂಗಯ್ಯ ಅವರು ವಯೋಸಹಜವಾಗಿ ಇತ್ತೀಚೆಗೆ ಮೃತಪಟ್ಟಿದ್ದರು. ಮಲ್ಲಣ್ಣ ಅವರು ತಮ್ಮ ತಂದೆಯ ಅಂತ್ಯಕ್ರಿಯೆಗಳನ್ನು ಶನಿವಾರ ಪೂರ್ಣಗೊಳಿಸಿದ್ದರು.

ತಂದೆಯ ಅಂತ್ಯಕ್ರಿಯೆ ಮುಗಿಸಿ ಮಗನೂ ಸಾವು:

ತಂದೆಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಮಲಗಿದ್ದ ಪುತ್ರ ಮಲ್ಲಣ್ಣ ಅವರು ಇಂದು (ಭಾನುವಾರ) ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ತಂದೆ ನಿಧನರಾದ ದುಃಖ ಮಾಸುವ ಮುನ್ನವೇ ಪುತ್ರನೂ ಇಲ್ಲವಾಗಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಅಪ್ಪ ಮತ್ತು ಮಗನ ಸಾವಿನಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಧಾರುಣ ಘಟನೆಗೆ ಸಹಸ್ರಾರು ಮಂದಿ ಮರುಗಿದರು. ಶಿಕ್ಷಕ ಮಲ್ಲಣ್ಣ ಅವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ಅವರ ಸ್ವಗ್ರಾಮ ಅಣಗಳ್ಳಿದೊಡ್ಡಿಯಲ್ಲಿ ನೆರವೇರಿತು.