ಹನೂರು ತಾಲೂಕಿನ ಜಲ್ಲಿಪಾಳ್ಯ ಬಳಿ ಕೂಲಿ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಶಿವಮೂರ್ತಿ ಎಂಬುವವರ ಮೇಲೆ ಕಾಡಾನೆಗಳ ಗುಂಪು ದಾಳಿ ನಡೆಸಿದೆ. ಈ ಭೀಕರ ದಾಳಿಯಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಹನೂರು (ಡಿ.18): ಕೂಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಉಸಿರು ಚೆಲ್ಲಿದ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಬಳಿ ನಡೆದಿದೆ.

ಕಾಡಾನೆ ಗುಂಪಿನಿಂದ ದಾಳಿ:

ತಮಿಳುನಾಡಿನ ಮಾಕಪಾಳ್ಯ ನಿವಾಸಿ ಶಿವಮೂರ್ತಿ ಸಾವನ್ನಪ್ಪಿದ ದುರ್ದೈವಿ. ಜಲ್ಲಿಪಾಳ್ಯ ಭಾಗದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ತಮ್ಮ ಬೈಕ್‌ನಲ್ಲಿ ಅರಣ್ಯ ರಸ್ತೆಯ ಮೂಲಕ ಮರಳುತ್ತಿದ್ದರು. ಈ ವೇಳೆ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವಲಯದ ಜಲ್ಲಿಪಾಳ್ಯದ ಬಳಿ ಕಾಡಾನೆಗಳ ಗುಂಪು ಬೀಡು ಬಿಟ್ಟಿತ್ತು. ರಸ್ತೆಗೆ ಬಂದ ಆನೆಗಳು ಶಿವಮೂರ್ತಿ ಅವರ ಮೇಲೆ ಅಟ್ಯಾಕ್ ಮಾಡಿವೆ.

ಸ್ಥಳದಲ್ಲೇ ಕೊನೆಯುಸಿರೆಳೆದ ಶಿವಮೂರ್ತಿ:

ಕಾಡಾನೆಯ ಭೀಕರ ದಾಳಿಗೆ ಸಿಲುಕಿದ ಶಿವಮೂರ್ತಿ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಿಂಡು ಅದೇ ಜಾಗದಲ್ಲಿ ಬೀಡು ಬಿಟ್ಟಿದ್ದರಿಂದ ಮೃತದೇಹದ ಹತ್ತಿರ ಹೋಗಲು ಸ್ಥಳೀಯರಿಗೆ ಸಾಧ್ಯವಾಗಲಿಲ್ಲ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆ ನಡೆಸಿ ಮೃತದೇಹ ಹಸ್ತಾಂತರ:

ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಓಡಿಸಿ ಬಳಿಕ ಶಿವಮೂರ್ತಿ ಅವರ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅರಣ್ಯ ರಸ್ತೆಯಲ್ಲಿ ಸಂಚರಿಸುವಾಗ ಜನರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.