ಕೆಎಸ್‌ಆರ್‌ಟಿಸಿ ಬಸ್‌ನ ವೇಳಾಪಟ್ಟಿಯನ್ನು ಏಕಾಏಕಿ ಬದಲಿಸಿದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 25 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಅನುಕೂಲಕರವಾಗಿದ್ದ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಚಾಮರಾಜನಗರ: ಹನೂರು ತಾಲೂಕಿನ ಮರೂರು, ಅಸ್ತೂರು ಹಾಗೂ ಪೊನ್ನಾಚಿ ಗ್ರಾಮಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ (KSRTC Bus) ವೇಳಾಪಟ್ಟಿಯನ್ನು ಏಕಾಏಕಿ ಬದಲಾಯಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
25 ವರ್ಷಗಳ ಬಳಿಕ ಸಮಯ ಬದಲಾವಣೆ
ಇಲ್ಲಿಯ ಗ್ರಾಮಸ್ಥರು ಹೇಳುವ ಪ್ರಕಾರ, ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಸುಮಾರು 25 ವರ್ಷಗಳಿಂದ ಬೆಳಗ್ಗೆ 11ಕ್ಕೆ ಪೊನ್ನಾಚಿಗೆ ಆಗಮಿಸಿ ಸಂಜೆ 3.30ಕ್ಕೆ ಹನೂರಿಗೆ ಹಿಂದಿರುಗುತ್ತಿತ್ತು. ಈ ವೇಳಾಪಟ್ಟಿಯು ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ನಿತ್ಯದ ಕೆಲಸಗಳಿಗೆ ಪಟ್ಟಣಕ್ಕೆ ತೆರಳುವ ಜನರಿಗೆ ಅತ್ಯಂತ ಅನುಕೂಲವಾಗಿತ್ತು.
ಸಮಯ ಬದಲಾವಣೆಯಿಂದ ಪ್ರಯಾಣಿಕರಿಗೆ ತೊಂದರೆ
ಆದರೆ ಇತ್ತೀಚೆಗೆ ಬಸ್ ಸಂಚಾರದ ಸಮಯವನ್ನು ಏಕಾಏಕಿ ಬೆಳಗ್ಗೆ 9.30ಕ್ಕೆ ಬದಲಾಯಿಸಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದನ್ನೂ ಓದಿ : 59 ದಿನಗಳ ಬಳಿಕ ಕೊನೆಗೂ ಹುತ್ತೂರು, ಶ್ಯಾನಡ್ರಹಳ್ಳಿ ಕೆರೆಗೆ ನೀರು ಬಂತು; ರೈತರಲ್ಲಿ ಸಂತಸ
ಹಳೆಯ ವೇಳಾಪಟ್ಟಿಯೇ ಮುಂದುವರೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡದಿದ್ದರೆ ಮುಂದೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಗಡಿ ಗ್ರಾಮಕ್ಕೆ ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ


