ಕನ್ನಡಪ್ರಭ ವರದಿಯ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, 59 ದಿನಗಳ ನಂತರ ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಹಾಗೂ ಶ್ಯಾನಡ್ರಹಳ್ಳಿ ಕೆರೆಗಳಿಗೆ ನೀರು ಹರಿಸಿದೆ. ಈ ಬೆಳವಣಿಗೆಯಿಂದಾಗಿ ಹೋರಾಟವಿಲ್ಲದೆಯೇ ಕೆರೆಗೆ ನೀರು ಬಂದಿದ್ದಕ್ಕೆ ರೈತರಲ್ಲಿ ಸಂತಸ ಮೂಡಿದೆ.

ಚಾಮರಾಜನಗರ: ಜಿಲ್ಲಾಡಳಿತ ಭರವಸೆ ವಿಫಲ, ಕೆರೆಗೆ ಹರಿದು ಬಾರದ ನೀರು ಎಂದು ಕನ್ನಡಪ್ರಭ ಜ.30 ರಂದು ವರದಿ ಮಾಡಿದ ಬೆನ್ನಲ್ಲೇ ತಾಲೂಕಿನ ಹುತ್ತೂರು ಹಾಗೂ ಶ್ಯಾನಡ್ರಹಳ್ಳಿ ಕೆರೆಗೆ 59 ದಿನಗಳ ಬಳಿಕ ನೀರು ಹರಿಯಲು ಶುರುವಾಗಿದೆ.

Add Asianetnews Kannada as a Preferred SourcegooglePreferred

ಜ.30 ರಂದು ಕನ್ನಡಪ್ರಭ ವರದಿ

ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ ಹಾಗೂ ಬಿಜೆಪಿ ಪ್ರತಿಭಟನೆ ಬಳಿಕ ಕಳೆದ ವರ್ಷದ ಡಿ.5 ರಂದು ತಾಲೂಕಿನ ಹುತ್ತೂರು ಕೆರೆಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನೀರು ಬಿಡಿಸಿದ್ದರು. ಆದರೆ ಡಿ.೯ ರ ಬಳಿಕ ಹುತ್ತೂರು ಕೆರೆಗೆ ನೀರು ಮತ್ತೆ ಸ್ಥಗಿತಗೊಂಡಿತ್ತು. ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಜ.30 ರಂದು ಕನ್ನಡಪ್ರಭ ಮೊದಲ ಭಾರಿಗೆ ಧ್ವನಿ ಎತ್ತಿ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿತ್ತು.

3 ನೇ ಹಂತದ ಹುತ್ತೂರು ಹಾಗೂ ಶ್ಯಾನಡ್ರಹಳ್ಳಿ ಕೆರೆಗೆ ನೀರು

ಇದಾದ ಬಳಿಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತು ಚಾಮರಾಜನಗರ ತಾಲೂಕಿನ ಕೆರೆಗಳಿಗೆ ಆಲಂಬೂರು 2 ನೇ ಹಂತದ ಕೆರೆಗಳಿಗೆ ನೀರು ತುಂಬಿಸಿದ ಬಳಿಕ ಶುಕ್ರವಾರ 3 ನೇ ಹಂತದ ಹುತ್ತೂರು ಹಾಗೂ ಶ್ಯಾನಡ್ರಹಳ್ಳಿ ಕೆರೆಗೆ ನೀರು ಬಿಟ್ಟಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಗಡಿ ಗ್ರಾಮಕ್ಕೆ ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ

ಸ್ಥಳೀಯ ಶಾಸಕರ ಹಾಗೂ ಜಿಲ್ಲಾಡಳಿತದ ವಿರುದ್ಧ ಮಂಡಲ ಬಿಜೆಪಿ ಕಾರ್ಯಕರ್ತರು ಜ.7ರ ಶನಿವಾರ ತಮಟೆ ಚಳುವಳಿಗೆ ನಿರ್ಧರಿಸಿದ್ದ ಬೆನ್ನಲ್ಲೇ ಶುಕ್ರವಾರವೇ ಹುತ್ತೂರು ಕೆರೆ ಹಾಗೂ ಶ್ಯಾನಡ್ರಹಳ್ಳಿ ಕೆರೆಗೆ ನೀರು ಹರಿದಿದೆ. ಅಂತು,ಇಂತು 59 ದಿನಗಳ ಬಳಿಕವಾದರೂ ಹೋರಾಟ ಇಲ್ಲದೆಯೂ ತಾಲೂಕಿನ ಕೆರೆಗೆ ನೀರು ಬಂತಲ್ಲ ಖುಷಿ ರೈತರಲ್ಲಿದೆ.

2 ನೇ ಹಂತದ ಕೆರೆಗಳಿಗೂ ನೀರು

ಕಾವೇರಿ ನೀರಾವರಿ ನಿಗಮದ ಎಇಇ ಮಹೇಶ್‌ ಮಾತನಾಡಿ, ಆಲಂಬೂರು 2 ನೇ ಹಂತದ ಕೆರೆಗಳಿಗೆ ನೀರು ತುಂಬಿಸಲಾಗಿದೆ. 2 ನೇ ಹಂತದ ಹುತ್ತೂರು ಕೆರೆ ಹಾಗೂ ಶ್ಯಾನಡ್ರಹಳ್ಳಿ ಕೆರೆಗೂ ನೀರು ಬಿಡಲು ಶುರುವಾಗಿದೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕಿನ ಅಪಹರಣ; 9 ಜನರ ವಿರುದ್ಧ FIR ದಾಖಲು! ಇಂಥ ಘಟನೆಗೆ ಕಾರಣ ಏನು?

----------