ಸಾರಿಗೆ ಬಸ್‌ನಲ್ಲಿ ಮಹಿಳೆಯರ ಜೊತೆ ಪುರುಷ ಪ್ರಯಾಣಿಕರಿಗೂ ಸ್ಮಾರ್ಟ್ ಕಾರ್ಡ್ ಭಾಗ್ಯ!
ಸಾರಿಗೆ ಸಚಿವ ಬೈರತಿ ಸುರೇಶ್ ಅವರು ರಾಜ್ಯದ ಮೂರು ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ಮತ್ತು ಪುರುಷರಿಗೆ ಕಾರ್ಡ್‌ಗಳನ್ನು ನೀಡಲಾಗುವುದು.

ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್
ಮಹಿಳೆಯರೂ ಸೇರಿ ರಾಜ್ಯದ ಮೂರು ಕೋಟಿಗೂ ಅಧಿಕ ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು. ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಾಲ್ಕೂ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವರಾದ ನಂತರ ಮೊದಲ ಬಾರಿ ಸಭೆ ನಡೆಸಲಾಯ್ತು.
ಮಹಿಳೆಯರಿಗೆ ಉಚಿತ ಪ್ರಯಾಣ
ಸಭೆ ಬಳಿಕ ಮಾತನಾಡಿದ ಸಚಿವ ಬೈರತಿ ಸುರೇಶ್ ಅವರು ಶಕ್ತಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ಅದಕ್ಕಾಗಿ ರಾಜ್ಯ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದರು.
ಪುರುಷರು ರೀಚಾರ್ಜ್ ಮಾಡಿಕೊಳ್ಳಬೇಕು
ಅಲ್ಲದೆ, ಶಕ್ತಿ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಪುರುಷರಿಗೂ ರೀಚಾರ್ಜ್ ಮಾಡಬಹುದಾದಂಥ ಸ್ಮಾರ್ಟ್ ನೀಡಲು ಉದ್ದೇಶಿಸಲಾಗಿದೆ. ಒಟ್ಟಾರೆ ರಾಜ್ಯದ 3 ಕೋಟಿ ಜನರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಶಕ್ತಿ ಸ್ಮಾರ್ಟ್‌ಕಾರ್ಡ್ ಉಚಿತ ಪ್ರಯಾಣಕ್ಕೆ ಬಳಸಬಹುದಾಗಿದ್ದು, ಪುರುಷರಿಗೆ ನೀಡುವ ಸ್ಮಾರ್ಟ್‌ಕಾರ್ಡ್‌ಗಳಿಗೆ ಹಣ ತುಂಬಿ ಅದರ ಮೂಲಕ ಟಿಕೆಟ್ ದರ ಪಾವತಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
1 ಸಾವಿರ ಬಸ್ ಖರೀದಿ
ಉತ್ತಮ ಬಸ್ ಸೇವೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಅನುದಾನದಲ್ಲಿ ಒಂದು ಸಾವಿರ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತದೆ. ಜತೆಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ 4 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗುವುದು. ಈ ಬಸ್‌ಗಳನ್ನು ಹಂತಹಂತವಾಗಿ ನಾಲ್ಕೂ ನಿಗಮಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.
ವಿಎಲ್‌ಟಿಎಸ್
ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ವಾಣಿಜ್ಯ ಕಾರು, ಟ್ಯಾಕ್ಸಿ ಸೇರಿ ಇನ್ನಿತರ ಸಾರ್ವಜನಿಕ ಸೇವೆ ನೀಡುವ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ವ್ಯವಸ್ಥೆ (ವಿಎಲ್‌ಟಿಎಸ್) ಅಳವಡಿಕೆಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಈವರೆಗೆ 1 ಲಕ್ಷ ವಾಹನಗಳು ಮಾತ್ರ ವಿಎಲ್‌ಟಿಎಸ್ ಅಳವಡಿಸಿಕೊಂಡಿದ್ದು, ಇನ್ನೂ 5 ಲಕ್ಷಕ್ಕೂ ಹೆಚ್ಚಿನ ವಾಹನಗಳು ವಿಎಲ್‌ಟಿಎಸ್ ಅಳವಡಿಸಿಕೊಳ್ಳಬೇಕಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ವಿಎಲ್‌ಟಿಎಸ್ ಅಳವಡಿಕೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

