ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದ್ದಾರೆ. ಇದು ಆತ್ಮರಕ್ಷಣೆಗಾಗಿ ನಡೆಸಿದ ದಾಳಿ ಎಂದು ಅರಣ್ಯ ಇಲಾಖೆ ಹೇಳಿದರೆ, ಇದು ನಕಲಿ ಎನ್‌ಕೌಂಟರ್ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮಕ್ಕೆ ಒಳಪಡುವ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗಿನ ಜಾವ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ಶಂಕಿತ ಬೇಟೆಗಾರರನ್ನು ಅರಣ್ಯ ಸಿಬ್ಬಂದಿಯ ಎನ್‌ಕೌಂಟರ್ ಮಾಡಿದ್ದಾರೆ. ಬಲಿಯಾದವರನ್ನು ಅಂತೊಣಿಸ್ವಾಮಿ, ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ.
ನಡೆದಿದ್ದೇನು?
ಲಭ್ಯವಿರುವ ಮಾಹಿತಿಯ ಪ್ರಕಾರ, ವನ್ಯಜೀವಿಗಳ ಬೇಟೆಗೆ ಕಾಡಿಗೆ ಎಂಟ್ರಿ ಕೊಟ್ಟಿದ್ದ ಬೇಟೆಗಾರರ ಕುರಿತು ಅರಣ್ಯ ಸಿಬ್ಬಂದಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಯನ್ನು ಕಂಡ ಬೇಟೆಗಾರರು ಏಕಾಏಕಿ ಅವರ ಮೇಲೆಯೇ ಗುಂಡು ಹಾರಿಸಲು ಮುಂದಾಗಿದ್ದಾರೆನ್ನಲಾಗಿದೆ.
ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಪ್ರತ್ಯುತ್ತರದ ಗುಂಡಿನ ದಾಳಿಯಲ್ಲಿ ಮೂವರು ಬೇಟೆಗಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯ ವೇಳೆ ಮತ್ತೊಬ್ಬ ಬೇಟೆಗಾರ ಪರಾರಿಯಾಗಿದ್ದು, ಘಟನಾ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಒಂದು ಜಿಂಕೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಗುಂಡಿನ ಕಾಳಗದಲ್ಲಿ ಅರಣ್ಯ ಸಿಬ್ಬಂದಿಯೊಬ್ಬರಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಆಕ್ರೋಶ – ಕಚೇರಿ ಧ್ವಂಸ
ಈ ಎನ್‌ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆಯೇ ಕಾವೇರಿ ವನ್ಯಧಾಮ ವ್ಯಾಪ್ತಿಯ ಶಾಗ್ಯ ಗ್ರಾಮದ ಸ್ಥಳೀಯರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳು ಸುಳ್ಳು ಕಥೆ ಸೃಷ್ಟಿಸುತ್ತಿದ್ದಾರೆ, ಇವರನ್ನು ಜೀವಂತವಾಗಿ ಸೆರೆಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಕ್ರೋಶಗೊಂಡ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳ ಕಚೇರಿ (DRFO Office) ಮೇಲೆ ದಾಳಿ ನಡೆಸಿ, ಕಚೇರಿಯಲ್ಲಿದ್ದ ಪೀಠೋಪಕರಣಗಳು, ಬೈಕ್ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸಗೊಳಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಮಗೆ ನ್ಯಾಯ ಬೇಕು, ಮೃತರ ಸಂಬಂಧಿಕರ ಕಣ್ಣೀರು
ಇತ್ತ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಆಸ್ಪತ್ರೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿದ ಮೃತರ ಸಂಬಂಧಿಕರು ಮೈಸೂರಿನ ಕೆ.ಆರ್. ಆಸ್ಪತ್ರೆಯ ಬಳಿ ಜಮಾಯಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಸಂಬಂಧಿ ವಿಜಯ ಎಂಬುವವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
"ಮೃತಪಟ್ಟ ಮೂವರೂ ನಮ್ಮ ಹತ್ತಿರದ ಸಂಬಂಧಿಗಳು. ಬೆಳಗ್ಗೆಯಷ್ಟೇ ನಮಗೆ ಈ ವಿಚಾರ ತಿಳಿದು ಮೈಸೂರಿಗೆ ಬಂದಿದ್ದೇವೆ. ಅವರು ದನ ಮೇಯಿಸಲು ಹೋದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ಅವರನ್ನು ನೇರವಾಗಿ ಎನ್‌ಕೌಂಟರ್ ಮಾಡುವ ಅಗತ್ಯವೇನಿತ್ತು? ಮೂವರಿಗೂ ಮದುವೆಯಾಗಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಇವರನ್ನು ಕೊಲ್ಲಲು ಅರಣ್ಯ ಸಿಬ್ಬಂದಿಗೆ ಹಕ್ಕು ಕೊಟ್ಟವರು ಯಾರು? ನಮ್ಮವರಿಂದ ಯಾವ ಅರಣ್ಯ ಅಧಿಕಾರಿಗೆ ಫೈರ್ ಆಗಿದೆ ಎಂಬುದನ್ನು ಇಲಾಖೆ ತೋರಿಸಲಿ. ಅವರ ಮೇಲೆ ಹಳೆಯ ಪ್ರಕರಣಗಳಿದ್ದವು ಅಥವಾ ಅವರು ಬೇಟೆಗೆ ಹೋಗಿದ್ದರು ಎಂಬ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ಪ್ರಕರಣದಲ್ಲಿ ನಮಗೆ ಸಂಪೂರ್ಣ ನ್ಯಾಯ ಸಿಗಬೇಕು." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಶಾಗ್ಯ ಅರಣ್ಯ ಕಚೇರಿ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.


