ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯನ್ನು ನಟ ಪ್ರಕಾಶ್ ರಾಜ್ ತೀವ್ರವಾಗಿ ಖಂಡಿಸಿದ್ದಾರೆ. ವಲಸೆ ಕಾರ್ಮಿಕರು ಮತ್ತು ಮನೆ ಸ್ಥಳಾಂತರಿಸಿದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕುವುದನ್ನು ವಿರೋಧಿಸಿ, ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು (ಆ.15): ಚುನಾವಣಾ ಆಯೋಗದ ಅಧಿಕಾರಿಗಳೇ ಮತ ಚಲಾಯಿಸುವ ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ. ಮನೆಯಲ್ಲಿ ಇಲ್ಲದವರ ಹೆಸರುಗಳನ್ನು ತಕ್ಷಣವೇ ಡಿಲೀಟ್ ಮಾಡದೆ ಮೂರು ತಿಂಗಳ ಕಾಲಾವಕಾಶ ಕೊಡಿ ಎಂದು ನಟ ಪ್ರಕಾಶ್ ರಾಜ್ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಆಯೋಗ ಇಡೀ ದೇಶದ ಜನರಿಂದ ಪರೀಕ್ಷೆ ಬರೆಸುತ್ತಿದೆಯೇ? ರಾಜ್ಯದಲ್ಲಿರುವ 5.54 ಕೋಟಿ ಮತದಾರರ ಮಾಹಿತಿ ಕೇವಲ ಒಂದು ತಿಂಗಳಿನಲ್ಲಿ ಪಡೆದುಕೊಳ್ಳಲು ಸಾಧ್ಯವೇ? ಯಾಕೆ ಬಿಎಲ್‌ಒಗಳ ಮೇಲೆ ಒತ್ತಡ ಹೇರುತ್ತೀರಿ? ನಮ್ಮ ಮತ ಹಕ್ಕು ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ಹಿಂದೆ ಯಾಕೆ ಅಲೆದಾಡುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಲಸೆ ಹೋಗುತ್ತಾರೆ
ನಾಗರಹೊಳೆ, ಬಂಡೀಪುರದ ಗಡಿ ಭಾಗಗಳಲ್ಲಿ ಆರು ತಿಂಗಳುಗಳ ಕಾಲ ಕೇರಳ ಕಡೆಗೆ ವಲಸೆ ಹೋಗುತ್ತಾರೆ. ಉತ್ತರ ಕರ್ನಾಟಕದ ರೈತರು, ದಿನಗೂಲಿ ನೌಕರರು ಕೆಲಸ ಹುಡುಕಿಕೊಂಡು ಗೋವಾ, ಮಹಾರಾಷ್ಟ್ರ ಸೇರಿ ಇನ್ನಿತರೆ ರಾಜ್ಯಗಳಿಗೆ ಗುಳೇ ತೆರಳುತ್ತಾರೆ. ಈ ಜನಗಳಿಗೆ ಎಸ್‌ಐಆರ್ ಕುರಿತು ಯಾವುದೇ ಮಾಹಿತಿ ನೀಡದೇ, ಮನೆಗೆ ಭೇಟಿ ನೀಡಿದಾಗ ಅವರು ಲಭ್ಯವಿಲ್ಲ ಎಂಬ ಕಾರಣಕ್ಕೆ ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡುವುದು ಸರಿಯೇ? ಮನೆ ಸ್ಥಳಾಂತರಿಸಿದವರು ದೋಷಿಗಳಲ್ಲ ಎಂದರು.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಆರು ತಿಂಗಳ ಮುಂಚೆಯೇ ಎಲ್ಲ ಮತದಾರರಿಗೂ ಯಾಕೆ ಮಾಹಿತಿ ನೀಡಿಲ್ಲ. ಕೇಂದ್ರ ಚುನಾವಣಾ ಆಯೋಗ ಏಕಾಏಕಿ ಎಸ್‌ಐಆರ್ ತಂದು ಜನರ ಮತಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದಾರೆಯೇ ಹೊರತು ಅವರ‍್ಯಾರು ಗುರು ಅಥವಾ ಮಂಗಳ ಗ್ರಹಗಳಿಗೆ ಹೋಗಿಲ್ಲ. ಮತಹಕ್ಕನ್ನು ಡಿಲೀಟ್ ಮಾಡುವುದಕ್ಕಿಂತ ಮೊದಲು ಮತದಾರರಿಗೆ ನೊಟೀಸ್ ನೀಡಬೇಕು. ಸ್ಥಳಾಂತರಗೊಂಡವರಿಗೆ ನಮೂನೆ-8 ಕೊಡಬೇಕೇ ಹೊರತು, ನಮೂನೆ-6 ಅಲ್ಲ ಎಂದು ಅವರು ತರಾಟೆ ತೆಗೆದುಕೊಂಡರು.
ಎಸ್‌ಐಆರ್ ಬಗ್ಗೆ ಅರಿವು ಮೂಡಿಸಬೇಕು
ಚುನಾವಣಾ ಆಯೋಗವು ರಾಜ್ಯದ ಪ್ರತಿಯೊಬ್ಬ ಅಂಚಿನಲ್ಲಿರುವ ಮತದಾರನಿಗೂ ಎಸ್‌ಐಆರ್ ಕುರಿತು ಅರಿವು ಮೂಡಿಸಬೇಕು. ಈಗಾಗಲೇ ಸ್ಥಳಾಂತರ, ಗೈರು ಎಂದು ನಮೂಧಿಸಿ ಡಿಲೀಟ್ ಮಾಡಿರುವ ಮತದಾರರೆಲ್ಲರನ್ನೂ ಮತಪಟ್ಟಿಗೆ ಸೇರ್ಪಡೆಗೊಳಿಸಿಕೊಳ್ಳಬೇಕು. ಚುನಾವಣಾ ಆಯೋಗ ನಮಗೆ ಸರಿಯಾದ ಉತ್ತರ ಕೊಡದಿದ್ದರೆ, ರಾಜ್ಯಾದ್ಯಂತ ಹೋರಾಟಗಳನ್ನು ತೀವ್ರಗೊಳಿಸುವುದರ ಜೊತೆಗೆ ನ್ಯಾಯಾಂಗ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಸ್‌ಐಆರ್ ಅನ್ನು ದುಡಿಕಿನಿಂದ ಮಾಡದೆ ಒಂದು ವರ್ಷ ಕಾಲಾವಕಾಶ ನೀಡಬೇಕು. ಬಿಎಲ್‌ಒಗಳು ಹೋದಾಗ ಮನೆಯಲ್ಲಿ ಇಲ್ಲದವರ ಹೆಸರುಗಳನ್ನು ತಕ್ಷಣವೇ ಡಿಲೀಟ್ ಮಾಡಬಾರದು. ದುಡಿಮೆಗಾಗಿ ಅಲೆಯುವ ಜನರ ಜೊತೆ ಮಾನವೀಯತೆಯಿಂದ ನಡೆದುಕೊಂಡು, ಅವರಿಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು. ಹೊಸ ಮತದಾರರಿಗೆ ನಮೂನೆ-6 ಹಾಗೂ ಸ್ಥಳಾಂತರಗೊಂಡವರಿಗೆ ನಮೂನೆ-8 ನೀಡಿ ಪ್ರತಿಯೊಬ್ಬರನ್ನೂ ಪಟ್ಟಿಯಲ್ಲಿ ಒಳಗೊಳ್ಳಲು ಮತ್ತೆ ಮನೆಮನೆ ಗಣತಿ ನಡೆಸಬೇಕು ಎಂಬುದು ಸೇರಿ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ನೂರ್ ಶ್ರೀಧರ್, ತಾರಾ ರಾವ್, ನನ್ನ ಮತ ನನ್ನ ಹಕ್ಕು ತಂಡದ ಐಶ್ವರ್ಯ, ಮಧು ಭೂಷಣ್, ಮುಹಮ್ಮದ್ ಯೂಸುಫ್ ಕನ್ನಿ, ಸ್‌ಐಆರ್‌ನಲ್ಲಿ ತೊಂದರೆಗೊಳಗಾದ ರಾಧಾ, ರಂಜಿತ್, ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.


