Asianet Suvarna News Asianet Suvarna News

ನ್ಯಾಯಾಂಗವನ್ನು ಸ್ವಾಧೀನಕ್ಕೆ ಪಡೆಯಲು ಕೇಂದ್ರ ಸರ್ಕಾರ ಯತ್ನ: ನ್ಯಾ. ಸಂತೋಷ್‌ ಹೆಗ್ಡೆ

ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಿಸುವ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗವನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ. ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

Central Governments attempt to take over the Judiciary says junstic santosh hegde rav
Author
First Published Jan 25, 2023, 1:33 AM IST

ಮೈಸೂರು (ಜ.25) : ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಿಸುವ ಮೂಲಕ ಕೇಂದ್ರ ಸರ್ಕಾರ ನ್ಯಾಯಾಂಗವನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ. ಇದು ಯಾವುದೇ ಕಾರಣಕ್ಕೂ ಆಗಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಒಬ್ಬ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ ಕೊಲಿಜಿಯಂಗೆ ಬಿಟ್ಟರೆ ಹೊರಗಿನವರಿಗೆ ಗೊತ್ತಿರುವುದಿಲ್ಲ. ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದರು.

ಮತ್ತೆ ಸುಪ್ರೀಂ- ಕೇಂದ್ರ ಜಟಾಪಟಿ : ಕೇಂದ್ರ ತಿರಸ್ಕರಿಸಿದ್ದ 2 ಹೆಸರು ಮತ್ತೆ ಶಿಫಾರಸು ಮಾಡಿದ ಕೊಲಿಜಿಯಂ

ಒಂದು ಸಚಿವ ಸಂಪುಟಕ್ಕೆ ಯಾರನ್ನು ನೇಮಕ ಮಾಡಿಕೊಳ್ಳಬೇಕು ಬೇಡ ಎಂಬ ಅಧಿಕಾರ ಮುಖ್ಯಮಂತ್ರಿಗಳಿಗೆ ಇರುತ್ತದೆ. ಅದೇ ರೀತಿ ಯಾರನ್ನು ಹೈಕೋರ್ಚ್‌, ಸುಪ್ರೀಂಕೋರ್ಚ್‌ ನ್ಯಾಯಾಧೀೕಶರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಕೊಲಿಜಿಯಂ ವಿವೇಚನೆಗೆ ಬಿಟ್ಟಿದ್ದು. ಕೊಲಿಜಿಯಂನಲ್ಲಿ ಮುಖ್ಯ ನ್ಯಾಯಾಧೀಶರ ತೀರ್ಮಾನವೇ ಅಂತಿಮವಾಗುವುದಿಲ್ಲ. ಅಲ್ಲಿಯೂ ಮೂರು ಪೀಠ, ಐವರ ಪೀಠ ಎಂಬುದಿರುತ್ತದೆ. ಅವರ ಶಿಫಾರಸಿನ ಮೇಲೆ ನೇಮಕ ಮಾಡಲಾಗುತ್ತದೆ. ಹೀಗಾಗಿ, ಸರ್ಕಾರದ ಮಧ್ಯಪ್ರವೇಶ ಇರಬಾರದು ಎಂದು ಅವರು ಹೇಳಿದರು.

ಶಾಸಕಾಂಗ ಈಗಾಗಲೇ ಕಾರ್ಯಾಂಗದ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ನ್ಯಾಯಾಂಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಹಿಂದೆ ಇದ್ದಂತಹ ಸರ್ಕಾರಗಳಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ಆದರೆ, ಈಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲು ಹೊರಟಿರುವುದು ಅತ್ಯಂತ ದುರಂತ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಒಂದು ಸರ್ಕಾರಕ್ಕೆ ಸ್ಪಷ್ಟಬಹುಮತ ಇದೆ ಎಂದ ಕಾರಣಕ್ಕೆ ತನಗಿಷ್ಟಬಂದಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ. ಸಂಸತ್‌ನಲ್ಲಿ ತಾನು ತೆಗೆದುಕೊಂಡ ನಿರ್ಣಯವನ್ನು ಯಾರೂ ಪ್ರಶ್ನಿಸಬಾರದು ಎಂದರೆ ಏನರ್ಥ? ಇಂದು ಶಾಸಕಾಂಗ, ಕಾರ್ಯಾಂಗ ಭ್ರಷ್ಟಾಚಾರದಿಂದ ಕೂಡಿದೆ. ನ್ಯಾಯಾಂಗದಲ್ಲಿ ಎಲ್ಲಾ ಸರಿ ಇದೆ ಎಂದು ಹೇಳುವುದಿಲ್ಲ. ಆದರೆ, ಈ ಎರಡು ರಂಗಗಳಿಗಿಂತ ಕಡಿಮೆ ಭ್ರಷ್ಟಾಚಾರ ನ್ಯಾಯಾಂಗ ವ್ಯವಸ್ಥೆಯಲ್ಲಿದೆ. ಅದನ್ನು ತನ್ನ ಹಿಡಿತಕ್ಕೆ ಕೇಂದ್ರ ಸರ್ಕಾರ ಪಡೆಯಬೇಕು ಎಂದರೆ ಪ್ರಜೆಗಳು ಎಲ್ಲಿಗೆ ಹೋಗಬೇಕು? ಇದು ಸಂವಿಧಾನ ವಿರೋಧಿ ನಡೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ನ್ಯಾಯಾಧೀಶರಾಗಿ ನೇಮಕವಾಗುವವರು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣಗಳನ್ನು ಮಾಡಿದ್ದಾರೆ, ಇವರ ಅನುಭವ ಏನು? ಮತ್ತು ಇವರು ನ್ಯಾಯಾಧೀಶರ ಹುದ್ದೆಗೆ ಅರ್ಹರೆ ಎಂಬುದು ಕೊಲಿಜಿಯಂಗೆ ಮಾತ್ರ ಗೊತ್ತಿರುತ್ತದೆ. ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ವೈಯಕ್ತಿಕ ಕಾರಣ ಕೊಟ್ಟು ಕೇಂದ್ರ ಸರ್ಕಾರ ನಿರಾಕರಿಸಿರುವ ಕ್ರಮ ಸರಿಯಲ್ಲ. ಒಬ್ಬ ಮನುಷ್ಯ ಎಂದ ಮೇಲೆ ಅವನಿಗೆ ಆದ ವೈಯಕ್ತಿಕ ಜೀವನಗಳಿರುತ್ತದೆ. ಅದನ್ನು ಆಡಳಿತ ದೃಷ್ಟಿಯಲ್ಲಿ ನೋಡಬಾರದು ಎಂದರು.

Follow Us:
Download App:
  • android
  • ios