ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ಉನ್ನತ ಹಂತದ ನ್ಯಾಯಾಧೀಶರ ಆಯ್ಕೆಗೆ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗೂ ಅವಕಾಶ ಇರಬೇಕು. ಇದು ನ್ಯಾಯಾಂಗ ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

Include government representative in Collegium Union Law Minister Kiren Rijijus letter to CJI akb

ನವದೆಹಲಿ: ಉನ್ನತ ಹಂತದ ನ್ಯಾಯಾಧೀಶರ ಆಯ್ಕೆಗೆ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗೂ ಅವಕಾಶ ಇರಬೇಕು. ಇದು ನ್ಯಾಯಾಂಗ ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ಈ ಕುರಿತು ಅವರು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (DY Chandrachud) ಅವರಿಗೆ ಪತ್ರ ಬರೆದಿದ್ದಾರೆ.

ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಬಹಿರಂಗ ಸಂಘರ್ಷ ನಡೆಯುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ನೀಡಿರುವ ಈ ಸಲಹೆ, ಪ್ರಜಾಪ್ರಭುತ್ವ ಎರಡು ಆಧಾರಸ್ತಂಭಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಈ ನಡುವೆ ಈ ಸಲಹೆ ‘ನ್ಯಾಯಾಂಗವನ್ನು ತನ್ನ ಹಿಡಿತಕ್ಕೆ ಪಡೆಯಲು ಕೇಂದ್ರ ಸರ್ಕಾರ ಹಾಕುತ್ತಿರುವ ಬೆದರಿಕೆಯ ಕ್ರಮ ಎಂದು ಕಾಂಗ್ರೆಸ್‌ ಟೀಕಿಸಿದ್ದರೆ, ಮತ್ತೊಂದೆಡೆ ‘ಇದು ಅತ್ಯಂತ ಅಪಾಯಕಾರಿ ನಡೆ’ ಎಂದು ಆಮ್‌ಆದ್ಮಿ ಪಕ್ಷ ಕಿಡಿಕಾರಿದೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ರದ್ದು ಮಾಡಿದ ವೇಳೆ ಸುಪ್ರೀಂಕೋರ್ಟ್‌ ನೀಡಿದ ಸೂಚನೆ ಅನ್ವಯವೇ ನಾವು ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿಗೂ ಅವಕಾಶ ಕೋರಿದ್ದೇವೆ’ ಎಂದು ಹೇಳಿದ್ದಾರೆ.

ಕೇಂದ್ರದ ಪತ್ರ:

ಸುಪ್ರೀಂಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಇತ್ತೀಚೆಗೆ ಪತ್ರ ಬರೆದಿರುವ ಕೇಂದ್ರ ಕಾನೂನು ಖಾತೆ ಸಚಿವ (Law Minister) ಕಿರಣ್‌ ರಿಜಿಜು ‘ನ್ಯಾಯಾಧೀಶರ ಆಯ್ಕೆಗೆ ಇರುವ ಎರಡು ಹಂತದ ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಗೂ ಅವಕಾಶ ನೀಡಬೇಕು. ಇದು ಕೊಲಿಜಿಯಂ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವಕ್ಕೆ ಅವಕಾಶ ಮಾಡಿಕೊಡಲಿದೆ’ ಎಂದು ಸಲಹೆ ನೀಡಿದ್ದಾರೆ.

ಜಡ್ಜ್‌ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!

ಕೊಲಿಜಿಯಂ ಬಗ್ಗೆ ರಿಜಿಜು ಇಂಥ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ಕಳೆದ ನವೆಂಬರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು ‘ನ್ಯಾಯಾಂಗ ನೇಮಕಕ್ಕೆ ಇರುವ ಕೊಲಿಜಿಯಂ ಸಂವಿಧಾನಕ್ಕೆ ಏಲಿಯನ್ಸ್‌ ರೀತಿಯಲ್ಲಿದೆ’ ಎಂದಿದ್ದರು. ಜೊತೆಗೆ ಜಡ್ಜ್‌ಗಳ ನೇಮಕದಲ್ಲಿ ಸರ್ಕಾರದ ಯಾವುದೇ ಪಾತ್ರ ಇರದ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಅಲ್ಲದೆ ನ್ಯಾಯಾಧೀಶರ ನೇಮಕ ಮಾಡಲು 2014ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೇವಲ ಕಾನೂನು ಸಚಿವರು ಮಾತ್ರವಲ್ಲದೇ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಕೂಡಾ ಇತ್ತೀಚೆಗೆ ಹಲವು ಬಾರಿ ಕೊಲಿಜಿಯಂ (Collegium) ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಕಿಡಿಕಾರಿದ್ದರು. ಅದರ ಬೆನ್ನಲ್ಲೇ ಈ ಪತ್ರ ರವಾನಿಸಲಾಗಿದೆ.

ವಿಪಕ್ಷಗಳ ಆಕ್ಷೇಪ:

ಸರ್ಕಾರದ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jai Ram Ramesh) ‘ಇತ್ತೀಚಿನ ದಿನಗಳಲ್ಲಿ ಉಪರಾಷ್ಟ್ರಪತಿಗಳು ಮತ್ತು ಕಾನೂನು ಸಚಿವರ ದಾಳಿ, ಇವೆಲ್ಲವೂ ನ್ಯಾಯಾಂಗವನ್ನು ತನ್ನ ಹಿಡಿತಕ್ಕೆ ಪಡೆಯಲು ಬೆದರಿಕೆ ಮೂಲಕ ನಡೆಸುತ್ತಿರುವ ಸಂಘಟಿತ ದಾಳಿಯ ಭಾಗ. ಕೊಲಿಜಿಯಂ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಿರುವುದು ನಿಜ. ಆದರೆ ಇಲ್ಲಿ ಸರ್ಕಾರದ ಉದ್ದೇಶ ಅದನ್ನು ಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆಯುವಂತಿದೆ. ಈ ಪರಿಹಾರವು ನ್ಯಾಯಾಂಗದ ಪಾಲಿಗೆ ವಿಷ ಗುಳಿಗೆ’ ಎಂದಿದ್ದಾರೆ. ಮತ್ತೊಂದೆಡೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ‘ಇದೊಂದು ಅಪಾಯಕಾರಿ ಬೆಳವಣಿಗೆ. ನ್ಯಾಯಾಧೀಶರ ನೇಮಕದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರದ ಪಾತ್ರ ಇರಬಾರದು’ ಎಂದು ಹೇಳಿದ್ದಾರೆ.

ಕೊಲಿಜಿಯಂ ಚರ್ಚೆ ವಿವರ ಬಹಿರಂಗ ಅಸಾಧ್ಯ ಎಂದ ಸುಪ್ರೀಂಕೋರ್ಟ್‌: ಜಡ್ಜ್‌ ಆಯ್ಕೆಗೆ ಪ್ರತ್ಯೇಕ ಆಯೋಗ..?

ಏನಿದು ಕೊಲಿಜಿಯಂ ವ್ಯವಸ್ಥೆ?

1. ಇದು ಸುಪ್ರೀಂಕೋರ್ಟ್‌ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್‌ ಗೆ ನ್ಯಾಯಾಧೀಶರ ನೇಮಕಕ್ಕೆ ಇರುವ 2 ಹಂತದ ವ್ಯವಸ್ಥೆ ನೇಮಕಾತಿ ವ್ಯವಸ್ಥೆ.

2. ಸುಪ್ರೀಂಕೋರ್ಟ್, ಹೈಕೋರ್ಟ್ ಜಡ್ಜ್‌ ನೇಮಕಕ್ಕೆ ಇರುವ ಕೊಲಿಜಿಯಂಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವ ಇತರಲಿದ್ದು, ಇತರೆ ನಾಲ್ವರು ಸದಸ್ಯರಾಗಿರುತ್ತಾರೆ.

3. ರಾಜ್ಯಗಳಲ್ಲಿ ಅಧೀನ ಕೋರ್ಟ್‌ಗಳ ಜಡ್ಜ್‌ ನೇಮಕಕ್ಕೆ ಆಯಾ ರಾಜ್ಯಗಳ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಜಡ್ಜ್‌ಗಳ ಸಮಿತಿ ಇರುತ್ತದೆ.

4. ಇದರ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗೆ ಹೊಸ ನ್ಯಾಯಾಧೀಶರ ನೇಮಕ ಮಾಡುತ್ತದೆ.

5. ಈ ವ್ಯವಸ್ಥೆ ಪಾರದರ್ಶಕವಾಗಿಲ್ಲ. ಹೀಗಾಗಿ ಕೊಲಿಜಿಯಂ ವ್ಯವಸ್ಥೆಯಲ್ಲಿ ತನ್ನ ಪ್ರತಿನಿಧಿಗೂ ಅವಕಾಶ ಇರಬೇಕು ಎನ್ನುವುದು ಕೇಂದ್ರ ಸರ್ಕಾರದ ವಾದ.

Latest Videos
Follow Us:
Download App:
  • android
  • ios