ಮತ್ತೆ ಸುಪ್ರೀಂ- ಕೇಂದ್ರ ಜಟಾಪಟಿ : ಕೇಂದ್ರ ತಿರಸ್ಕರಿಸಿದ್ದ 2 ಹೆಸರು ಮತ್ತೆ ಶಿಫಾರಸು ಮಾಡಿದ ಕೊಲಿಜಿಯಂ

ನ್ಯಾಯಾಧೀಶರ ನೇಮಕ ಸಂಬಂಧ ಕಳೆದ ಕೆಲ ಸಮಯದಿಂದ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರ ನಡುವೆ ನಡೆಯುತ್ತಿರುವ ಸಮರ, ಪುನಾರಂಭವಾಗಿದೆ.

Again Supreme court Centre clash Collegium again recommended 2 names which were rejected by the Union Govt akb

ನವದೆಹಲಿ: ನ್ಯಾಯಾಧೀಶರ ನೇಮಕ ಸಂಬಂಧ ಕಳೆದ ಕೆಲ ಸಮಯದಿಂದ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರ ನಡುವೆ ನಡೆಯುತ್ತಿರುವ ಸಮರ, ಪುನಾರಂಭವಾಗಿದೆ. ಈ ಹಿಂದೆ ಕೇಂದ್ರ ಸರ್ಕಾರ ತಿರಸ್ಕರಿಸಿದ್ದ ಇಬ್ಬರು ಇಬ್ಬರು ಹಿರಿಯ ವಕೀಲರನ್ನು ದೆಹಲಿ ಮತ್ತು ಮದ್ರಾಸ್‌ ಹೈಕೋರ್ಟ್‌ಗೆ ನೇಮಕ ಮಾಡುವಂತೆ ಕೊಲಿಜಿಯಂ ಪುನಃ ಶಿಫಾರಸು ಮಾಡಿದೆ. ಇದು ಪ್ರಜಾಪ್ರಭುತ್ವದ ಎರಡು ಆಧಾರಸ್ತಂಭಗಳ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆಯಾಗಲಿದೆ ಎನ್ನಲಾಗಿದೆ.

ಸೌರಭ್‌ ಕಿರ್ಪಾಲ್‌:

ಹಿರಿಯ ವಕೀಲ ಸೌರಭ್‌ ಕಿರ್ಪಾಲ್‌ (senior advocate Saurabh Kirpal) ಅವರನ್ನು ದೆಹಲಿ ಹೈಕೋರ್ಟ್‌ನ (Delhi High Court)ನ್ಯಾಯಾಧೀಶರಾಗಿ ನೇಮಿಸುವಂತೆ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ‘2017ರಲ್ಲಿ ದೆಹಲಿ ಹೈಕೋರ್ಟ್‌ ನ ಶಿಫಾರಸಿನ ಅನ್ವಯ, 2021ರಲ್ಲಿ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕಿರ್ಪಾಲ್‌ ಅವರನ್ನು ದೆಹಲಿ ಹೈಕೋರ್ಟ್‌ ಜಡ್ಜ್‌ ಆಗಿ ನೇಮಿಸುವಂತೆ ಶಿಫಾರಸು ಮಾಡಿದೆ. ಆದರೆ ಅವರ ದಾಖಲೆಗಳಲ್ಲಿ ಮಾಡಲಾದ ಕೆಲ ಅಂಶಗಳನ್ನು ಗಮನಿಸುವಂತೆ ಹೇಳಿ 2022ರಲ್ಲಿ ಇದನ್ನು ನಮಗೆ ಮರಳಿಸಲಾಗಿದೆ. ಆದರೆ ತಮ್ಮ ಲೈಂಗಿಕ ಇಚ್ಛೆಯ ಕುರಿತು ಅವರು ಯಾವುದೇ ಸಂಗತಿಗಳನ್ನು ಮುಚ್ಚಿಡದೇ ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿರುವುದನ್ನು ಕೊಲಿಜಿಯಂ ಪ್ರಶಂಸಿಸುತ್ತದೆ ಮತ್ತು ಅವರನ್ನ ನೇಮಕ ಮಾಡುವಂತೆ ಮರು ಶಿಫಾರಸು ಮಾಡುತ್ತೇವೆ’ ಎಂದು ಕೊಲಿಜಿಯಂ (collegium) ಹೇಳಿದೆ.

ಜಡ್ಜ್‌ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!

ವಿರೋಧ ಏಕೆ?

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಎನ್‌.ಕಿರ್ಪಾಲ್‌ ಅವರ ಪುತ್ರರಾಗಿರುವ ಸೌರಭ್‌ ಕಿರ್ಪಾಲ್‌ ತಾವು ಸಲಿಂಗಿ ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡಿದ್ದಾರೆ. ಜೊತೆಗೆ ಸಲಿಂಗಕಾಮವನ್ನು ಕ್ರಿಮಿನಲ್‌ ಅಪರಾಧವಲ್ಲ ಎಂದು ಘೋಷಿಸಬೇಕೆಂದು ಸುಪ್ರೀಂಕೋರ್ಟ್‌ ಗೆ ಮೊರೆ ಹೋಗಿದ್ದ ಕೆಲ ಅರ್ಜಿದಾರರ ಪರವಾಗಿ ಸೌರಭ್‌ ವಾದಿಸಿದ್ದರು. ಬಳಿಕ ಸಲಿಂಗಕಾಮ ಕ್ರಿಮಿನಲ್‌ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸಲಿಂಗಕಾಮ ತಪ್ಪು ಎಂಬ ಅಭಿಪ್ರಾಯ ಹೊಂದಿರುವ ಕೇಂದ್ರ ಸರ್ಕಾರ, ಇದೇ ಕಾರಣಕ್ಕಾಗಿ ಅವರನ್ನು ದಿಲ್ಲಿ ಹೈಕೋರ್ಟ್‌ ಗೆ ನೇಮಿಸಲು ಹಿಂಜರಿಯುತ್ತಿದೆ ಎನ್ನಲಾಗಿದೆ. ಒಂದು ವೇಳೆ ಈ ಬಾರಿ ಶಿಫಾರಸು ಒಪ್ಪಿಕೊಂಡರೆ, ಸೌರಭ್‌ ನ್ಯಾಯಾಂಗದಲ್ಲಿ ಉನ್ನತ ಹುದ್ದೆ ಏರಿದ ಮೊದಲ ಸಲಿಂಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಕೊಲಿಜಿಯಂ ಚರ್ಚೆ ವಿವರ ಬಹಿರಂಗ ಅಸಾಧ್ಯ ಎಂದ ಸುಪ್ರೀಂಕೋರ್ಟ್‌: ಜಡ್ಜ್‌ ಆಯ್ಕೆಗೆ ಪ್ರತ್ಯೇಕ ಆಯೋಗ..?


ಜಾನ್‌ ಸತ್ಯಂ

ಹಿರಿಯ ವಕೀಲ ಸತ್ಯಂ ಜಾನ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ (Madras High Court) ನ್ಯಾಯಾಧೀಶರಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕುರಿತು ಸತ್ಯಂ ಜಾನ್‌ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್‌ಗಳ ಬಗ್ಗೆ ಗುಪ್ತಚರ ಇಲಾಖೆ ವರದಿ (intelligence department) ನೀಡಿರುವ ಹೊರತಾಗಿಯೂ ಅವರ ನೇಮಕಕ್ಕೆ ಕೊಲಿಜಿಯಂ ಪುನಃ ಶಿಫಾರಸು ಮಾಡಿದೆ. ‘ಗುಪ್ತಚರ ಇಲಾಖೆ ತನ್ನ ವರದಿಯಲ್ಲಿ ಸತ್ಯಂ ಜಾನ್‌ ಅವರನ್ನು ಉತ್ತಮ ವ್ಯಕ್ತಿತ್ವದ, ವೃತ್ತಿಪರ ಘನತೆ ಹೊಂದಿರುವ ವ್ಯಕ್ತಿ ಎಂದು ಬಣ್ಣಿಸಿದೆ. ಜೊತೆಗೆ ಅವರ ಪ್ರಾಮಾಣಿಕತೆ ಬಗ್ಗೆ ಯಾವುದೇ ನಕಾರಾತ್ಮಕ ಅಂಶಗಳನ್ನು ಪ್ರಸ್ತಾಪಿಸಿಲ್ಲ. ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು ಮತ್ತು ಯಾವುದೇ ರಾಜಕೀಯ ಸಿದ್ದಾಂತವನ್ನು ಹೊಂದಿಲ್ಲ ಎಂದು ಹೇಳಿದೆ’ ಎಂದು ಕೊಲಿಜಿಯಂ ಹೇಳಿದೆ.

ವಿರೋಧ ಏಕೆ?

ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ವೆಬ್‌ಸೈಟ್‌ವೊಂದರ ವರದಿಯೊಂದನ್ನು ಸತ್ಯಂ ಜಾನ್‌ (Satyam John) ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ 2017ರಲ್ಲಿ ನೀಟ್‌ ಆಕ್ಷಾಂಕ್ಷಿ ತಮಿಳುನಾಡಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ರಾಜಕೀಯ ದ್ರೋಹ ಎಂಬ ವರದಿಯೊಂದನ್ನು ಕೂಡಾ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಅವರ ನೇಮಕಕ್ಕೆ ಕೇಂದ್ರ ಸರ್ಕಾರ ವಿರೋಧ ಹೊಂದಿದೆ ಎನ್ನಲಾಗಿದೆ. ಆದರೆ ಹೀಗೆ ಜಾಲತಾಣದಲ್ಲಿ ಹಂಚಿಕೊಂಡ ವಿಷಯಗಳು ಹೈಕೋರ್ಟ್ ನ್ಯಾಯಾಧೀಶರಾಗುವ ಅವರ ಅರ್ಹತೆ ಮತ್ತು ಅವರ ಗುಣಕ್ಕೆ ಅಡ್ಡಿಯಾಗುವುದಿಲ್ಲ. ಹೀಗಾಗಿ ಅವರನ್ನು ಈ ಹುದ್ದೆಗೆ ನೇಮಕ ಮಾಡಬಹುದು ಎಂಬುದು ಕೊಲಿಜಿಯಂನ ವಾದ.

Latest Videos
Follow Us:
Download App:
  • android
  • ios