ಗುಂಡ್ಲುಪೇಟೆಯ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಗೋಮಾಂಸದ ತುಂಡು ಪತ್ತೆಯಾಗಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಸಿಸಿಟಿವಿ ಪರಿಶೀಲಿಸಿದಾಗ, ಮಾಂಸವನ್ನು ತಂದು ಹಾಕಿದ್ದು ಮನುಷ್ಯರಲ್ಲ, ನಾಯಿ ಎಂಬ ಸತ್ಯ ಬಹಿರಂಗವಾಗಿದೆ. ಇದರಿಂದ ಸಂಭವನೀಯ ಕೋಮು ಗಲಭೆ ತಪ್ಪಿದೆ.

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಎದುರು ದನದ ಮಾಂಸದ ತುಂಡೊಂದು ಕಾಣಿಸಿಕೊಂಡಿದ್ದು, ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಕಳೆದ ಸೋಮವಾರ ನಡೆದ ಈ ಘಟನೆಯಿಂದ ಹಿಂದೂ ಕಾರ್ಯಕರ್ತರು ಗದ್ದಲ ಸೃಷ್ಟಿಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಇಲ್ಲಿ ಸುತ್ತಮುತ್ತಲೂ ಗೋಮಾಂಸ ಮಾರಾಟ ಹೇರಳವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಗಿತ್ತು. ಇದು ಕೋಮು ಗಲಭೆಗೆ ಕಾರಣವಾಗುವ ಮುನ್ನವೇ ಪೊಲೀಸರು ಬಿಗಿ ಬಂದೋಬಸ್ತ್​ ಏರ್ಪಡಿಸಿದ್ದರು. ಕೊನೆಗೆ ಈ ದುಷ್ಕೃತ್ಯ ಎಸಗಿದವರು ಯಾರು ಎನ್ನುವ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ದೇವಾಲಯದ ಸಮೀಪದ ಎಲ್ಲಾ ಸಿಸಿಟಿವಿ ಫುಟೇಜ್​ಗಳನ್ನು ನೋಡಿದಾಗ ಅಲ್ಲಿ ಯಾರೂ ಊಹಿಸದ ಅನಿರೀಕ್ಷಿತ ಸತ್ಯ ಕಂಡುಬಂದಿದೆ.

ಅದೇನೆಂದರೆ, ದೇವಸ್ಥಾನದ ಎದುರು ಮಾಂಸದ ತುಂಡು ತಂದು ಹಾಕಿದವರು ಯಾರೋ ಮನುಷ್ಯರಲ್ಲ, ಬದಲಿಗೆ ನಾಯಿ ಎನ್ನುವುದು! ಸಿಸಿಟಿವಿಯಲ್ಲಿ ಈ ದೃಶ್ಯ ಬಯಲಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ನಾಯಿಯೊಂದು ಮಾಂಸವನ್ನು ಹೊತ್ತು ತಂದು ಬಿಟ್ಟಿರುವುದು ಸಿಸಿಟಿವಿ (CCTV) ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಇದು ಬೀದಿ ನಾಯಿಯ ಕೃತ್ಯವೆಂದು ಸಾಬೀತಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದ ಗದ್ದಲವಾಗಬೇಕಿದ್ದ ವಾತಾವರಣ ಈಗ ತಿಳಿಗೊಂಡಿದೆ.

ಕಂಡಿದ್ದು ಹೇಗೆ?

ಗುಂಡ್ಲುಪೇಟೆ ಪಟ್ಟಣದ ಗುಂಡ್ಲುಪೇಟೆ-ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ಬೆಳಗಿನ ಪೂಜಾ ವಿಧಿವಿಧಾನಗಳಿಗಾಗಿ ದೇವಸ್ಥಾನಕ್ಕೆ ಆಗಮಿಸಿದ ಅರ್ಚಕರು ಪ್ರವೇಶದ್ವಾರದ ಮುಂದೆ ಮಾಂಸದ ತುಂಡು ಬಿದ್ದಿರುವುದನ್ನು ಗಮನಿಸಿದ್ದರು. ಇದರಿಂದ ಆಕ್ರೋಶಗೊಂಡ ದೇವಸ್ಥಾನದ ಭಕ್ತರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕಿಡಿಗೇಡಿಗಳು ದೇವಸ್ಥಾನದ ಬಳಿ ಗೋಮಾಂಸ ಎಸೆದಿದ್ದಾರೆ ಎಂದು ಆರೋಪಿಸಿದ್ದರು.

ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದವು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ಹರಡಿದ್ದು, ಉದ್ದೇಶಪೂರ್ವಕವಾಗಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಲಾಗಿದೆ ಎಂಬಂತಹ ಕಾಮೆಂಟ್‌ಗಳು ಹರಿದಾಡಿದ್ದವು. ಪ್ರಕರಣ ಕೋಮು ಸಂಘರ್ಷದ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ವಿಷಯ ತಿಳಿದುಬಂದಿದೆ.

ಕಠಿಣ ಕ್ರಮದ ಎಚ್ಚರಿಕೆ

ಈ ಕುರಿತು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಎಂ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತನಿಖೆಯಲ್ಲಿ ಘಟನೆಗೆ ನಾಯಿಯೇ ಕಾರಣ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಅಥವಾ ಪರಿಶೀಲಿಸದ ಮಾಹಿತಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಸುಳ್ಳು ಹಾಗೂ ಪ್ರಚೋದನಕಾರಿ ಸುದ್ದಿಗಳನ್ನು ಹಂಚುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.