ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಅವರು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಯಾವುದೇ ಭತ್ಯೆ ಪಡೆಯದೆ ಸ್ವಂತ ಖರ್ಚಿನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ, ತೆರಿಗೆ ಹಣ ಪೋಲಾಗುತ್ತಿರುವುದರ ವಿರುದ್ಧ ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಬೆಂಗಳೂರು / ಯಾದಗಿರಿ (ನ.18): ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೂ ಸರ್ಕಾರದಿಂದ ನೀಡಲಾಗುವ ವಸತಿ, ಊಟೋಪಚಾರ ಹಾಗೂ ಯಾವುದೇ ರೀತಿಯ ಭತ್ಯೆಗಳನ್ನು ಸ್ವೀಕರಿಸದೆ, ಸ್ವಂತ ಖರ್ಚಿನಲ್ಲಿ ಪಾಲ್ಗೊಳ್ಳುವ ತಮ್ಮ ನಿರ್ಧಾರವನ್ನು ಮುಂದುವರಿಸುವುದಾಗಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಘೋಷಿಸಿದ್ದಾರೆ. ಈ ಕುರಿತು ನವೆಂಬರ್ 18, 2026 ರಂದು ವಿಧಾನಸೌಧದಲ್ಲಿರುವ ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಿಗೆ ಅಧಿಕೃತ ಪತ್ರ ಬರೆದಿರುವ ಅವರು, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

'ಅಧಿವೇಶನ ಕೇವಲ ಕಣ್ಣೊರೆಸುವ ತಂತ್ರ, ತೆರಿಗೆ ಹಣ ಪೋಲಾಗುತ್ತಿದೆ'

ಸ್ಪೀಕರ್ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ (ಸಂಖ್ಯೆ: ಶಾಭ/224/2026-27) ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಶರಣಗೌಡ ಕಂದಕೂರ್ ಅವರು, "ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸೂಕ್ತ ಸೌಕರ್ಯಗಳನ್ನು ಕಲ್ಪಿಸಿ ಪ್ರಾದೇಶಿಕ ಸಮತೋಲನ ಕಾಪಾಡುವ ದೃಷ್ಟಿಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಪರಂಪರೆಯ ಉದ್ದೇಶ ಚೆನ್ನಾಗಿದೆ. ಆದರೆ, ಅಧಿವೇಶನ ಕೇವಲ ಹೆಸರಿಗೆ ಮಾತ್ರ ನಡೆದು, ಚರ್ಚಿತ ವಿಷಯಗಳು ಜಾರಿಯಾಗದೆ ಈ ಭಾಗದ ಜನತೆಗೆ ಕಣ್ಣೊರೆಸುವ ತಂತ್ರವಾಗಿದೆ" ಎಂದು ಕಿಡಿಕಾರಿದ್ದಾರೆ.

"ಕಳೆದ ಸಾಲಿನ ಅಧಿವೇಶನ ಮುಗಿದು ಮತ್ತೊಂದು ಅಧಿವೇಶನ ಬಂದಿದ್ದರೂ ಈ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ನಡೆಸುವ ಅಧಿವೇಶನದಿಂದ ನಯಾ ಪೈಸೆಯೂ ಪ್ರಯೋಜನವಾಗದಿದ್ದರೆ, ಜನತೆಯ ತೆರಿಗೆ ಹಣವನ್ನು ಪೋಲು ಮಾಡಿದ ಪಾಪ ಸರ್ಕಾರಕ್ಕೆ ಖಂಡಿತವಾಗಿಯೂ ಸುತ್ತಿಕೊಳ್ಳುತ್ತದೆ" ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಜನತೆಯ ಕರಾಳ ಸ್ಥಿತಿ ಅನಾವರಣ

ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ದುಸ್ಥಿತಿಯನ್ನು ಪತ್ರದಲ್ಲಿ ಭಾವುಕವಾಗಿ ವಿವರಿಸಿರುವ ಶಾಸಕರು, ಪ್ರಮುಖ ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ:

ಅತಿವೃಷ್ಟಿ-ಅನಾವೃಷ್ಟಿಯ ಹೊಡೆತ: ಈ ಭಾಗದ ಜನತೆಗೆ ಬರಗಾಲ ಬದುಕಿನ ಭಾಗವಾಗಿ ಬಿಟ್ಟಿದೆ. ಒಮ್ಮೆ ಅತಿವೃಷ್ಟಿಯಿಂದ ರೈತ ಬಿತ್ತಿದ ಬೆಳೆ ಕೊಚ್ಚಿ ಹೋದರೆ, ಮತ್ತೊಮ್ಮೆ ಅನಾವೃಷ್ಟಿಯಿಂದ ಬೀಜ ಭೂಮಿಯಲ್ಲಿಯೇ ಬತ್ತಿ ಹೋಗುತ್ತಿದೆ. ಇದರಿಂದ ಕಿತ್ತು ತಿನ್ನುವ ಬಡತನ ತಾಂಡವವಾಡುತ್ತಿದೆ.

ಮೂಲಭೂತ ಸೌಕರ್ಯಗಳ ಕೊರತೆ: ಹಸಿವು, ಬಡತನ, ನಿರುದ್ಯೋಗದ ಜೊತೆಗೆ ಶಾಲೆ, ಆಸ್ಪತ್ರೆ ಮತ್ತು ಕುಡಿಯುವ ನೀರಿನಂತಹ ನೂರಾರು ಸಮಸ್ಯೆಗಳ ಸುಳಿಯಲ್ಲಿ ಜನತೆ ಕಂಗಾಲಾಗಿದ್ದಾರೆ.

ಹೊಟ್ಟೆಪಾಡಿಗಾಗಿ ವಲಸೆ: "ಗೇಣುದ್ದದ ಹೊಟ್ಟೆಯನ್ನು ತುಂಬಿಕೊಳ್ಳಲು, ಮಾರುದ್ದದ ಮಕ್ಕಳನ್ನು ಕಟ್ಟಿಕೊಂಡು ಜನತೆ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ನಗರಗಳಿಗೆ ಗುಳೆ ಹೋಗುತ್ತಿರುವ ದೃಶ್ಯವನ್ನು ನೋಡಿದರೆ ಎಂಥವರ ಕರುಳೂ ಕಿತ್ತು ಬರುತ್ತದೆ, ಕಣ್ಣೀರು ಕಡಲಾಗಿ ಹರಿದು ಹೋಗುತ್ತದೆ" ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಶಾಸಕ ಸ್ಥಾನದ ಬಗ್ಗೆ ನಿರಾಶೆ: "ಭರವಸೆಗಳ ಗೋಪುರ ಕಟ್ಟಿ ಜನರಿಂದ ಮತ ಪಡೆದು, ಜನಪ್ರತಿನಿಧಿಗಳಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸಲಾಗದಿದ್ದರೆ ನಾವು ಶಾಸಕರಾಗಿರುವುದು ಯಾವ ಪುರುಷಾರ್ಥಕ್ಕೆ ಎಂಬ ನಿರಾಶಾ ಭಾವ ನನ್ನಲ್ಲಿ ಮೂಡುತ್ತಿದೆ" ಎಂದು ಶರಣಗೌಡ ಕಂದಕೂರ್ ಮನದಾಳದ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಂತ ಖರ್ಚಿನಲ್ಲಿ ಅಧಿವೇಶನದಲ್ಲಿ ಭಾಗಿಗೆ ಅನುಮತಿ ಕೋರಿಕೆ

ಕಳೆದ ಚಳಿಗಾಲದ ಅಧಿವೇಶನದಲ್ಲೂ ಸರ್ಕಾರದಿಂದ ನೀಡುವ ವಸತಿ, ಊಟೋಪಚಾರ ಹಾಗೂ ಇನ್ನಿತರ ಯಾವುದೇ ಭತ್ಯೆಯನ್ನು ಸ್ವೀಕರಿಸದೆ ಪ್ರತಿಭಟಿಸಿದ್ದೆ ಮತ್ತು ಒಂದು ದಿನವೂ ಬಿಡದೆ ಸ್ವಂತ ಖರ್ಚಿನಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದೆ ಎಂದು ಶಾಸಕರು ಸ್ಮರಿಸಿದ್ದಾರೆ. ಅದೇ ರೀತಿ, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿಯೂ ಸರ್ಕಾರದಿಂದ ಏನನ್ನೂ ಪಡೆಯದೆ, ಸ್ವಂತ ಖರ್ಚಿನಲ್ಲಿ ವೈಯಕ್ತಿಕ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಕಲಾಪದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಸಭಾಧ್ಯಕ್ಷರಲ್ಲಿ ಕೋರಿದ್ದಾರೆ.