ಬೆಂಗಳೂರು ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ಗೆದ್ದಲಹಳ್ಳಿ ರೈಲ್ವೆ ಸೇತುವೆ ಸಂಖ್ಯೆ 535ರ ಅಗಲೀಕರಣ ಕಾಮಗಾರಿಗಾಗಿ ನವೆಂಬರ್ 28ರಿಂದ ಡಿಸೆಂಬರ್ 30ರವರೆಗೆ 33 ದಿನ ರಸ್ತೆ ಸಂಚಾರ ಬಂದ್ ಮಾಡಲು ನೈಋತ್ಯ ರೈಲ್ವೆ ಬೆಂಗಳೂರು ಟ್ರಾಫಿಕ್ ಪೊಲೀಸ್ ರ ಮುಂದೆ ಪ್ರಸ್ತಾಪಿಸಿದೆ.

ಬೆಂಗಳೂರು: ಉತ್ತರ ಬೆಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ವಾಹನ ಸವಾರರಿಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣುತ್ತಿದೆ. ಗೆದ್ದಲಹಳ್ಳಿಯಲ್ಲಿರುವ ರೈಲ್ವೆ ಸೇತುವೆ ಸಂಖ್ಯೆ 535ರ ಅಗಲೀಕರಣ ಕಾಮಗಾರಿ ಕೈಗೊಳ್ಳುವ ಸಲುವಾಗಿ, ನವೆಂಬರ್ 28ರಿಂದ ಡಿಸೆಂಬರ್ 30ರವರೆಗೆ ಒಟ್ಟು 33 ದಿನಗಳ ಕಾಲ ಈ ರಸ್ತೆಯನ್ನು ಬಂದ್ ಮಾಡಿ ವಾಹನ ಸಂಚಾರ ಮಾರ್ಗ ಬದಲಾಯಿಸಲು ನೈಋತ್ಯ ರೈಲ್ವೆ ಬೆಂಗಳೂರು ಸಂಚಾರ ಪೊಲೀಸರ ಅನುಮತಿ ಕೋರಿದೆ.

9.5 ಮೀಟರ್‌ನಿಂದ 18 ಮೀಟರ್‌ಗೆ ಸೇತುವೆ ವಿಸ್ತರಣೆ

ಈ ಸಂಬಂಧ ನವೆಂಬರ್ 11ರಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ಎಂಜಿನಿಯರ್ ಹರ್ಷಿತ್ ಗುಪ್ತಾ ಅವರು ಕಾಮಗಾರಿಯ ಸಂಪೂರ್ಣ ವಿವರಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಸೇತುವೆಯ ಬಳಿ ಇರುವ 9.5 ಮೀಟರ್ ಅಗಲದ ರಸ್ತೆಯನ್ನು 18 ಮೀಟರ್‌ಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಎರಡು ದ್ವಾರಗಳನ್ನು ಹೊಂದಿರುವ 9 ಮೀಟರ್‌ನ ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ಬಾಕ್ಸ್ ರಚನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು ಮೂಲದ 'ಗೌಂಡರ್ ಇನ್‌ಫ್ರಾಟೆಕ್' ಸಂಸ್ಥೆಯು ಈ ಕಾಮಗಾರಿಯ ಗುತ್ತಿಗೆ ಪಡೆದಿದೆ. ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, ಡಿಸೆಂಬರ್ 2ರಂದು ತಾತ್ಕಾಲಿಕ ಗರ್ಡರ್‌ಗಳ ಅಳವಡಿಕೆ ಕಾರ್ಯ ಆರಂಭವಾಗಲಿದ್ದು, ಡಿಸೆಂಬರ್ 10ರಂದು ಆರ್‌ಸಿಸಿ ಬಾಕ್ಸ್ ರಚನೆಗಳನ್ನು ಅಳವಡಿಸಲಾಗುತ್ತದೆ. ಈ ಕಾರಣಕ್ಕೆ ಡಿಸೆಂಬರ್ 12ರಂದು ರೈಲ್ವೆ ಮಾರ್ಗದಲ್ಲಿ ಲೈನ್ ಮತ್ತು ಪವರ್ ಬ್ಲಾಕ್ ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಆ ಅವಧಿಯಲ್ಲಿ ರೈಲು ಸೇವೆಗಳು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ. ಆದರೆ, ರಸ್ತೆ ಬಂದ್ ಮಾಡುವ ಕುರಿತು ಬೆಂಗಳೂರು ಸಂಚಾರ ಪೊಲೀಸರಿಂದ ಇನ್ನೂ ಅಧಿಕೃತ ಅನುಮೋದನೆ ನೀಡಲಾಗಿಲ್ಲ.

ವಿಳಂಬವಾಗಿದ್ದ ವೈಟ್-ಟಾಪಿಂಗ್ ಕಾಮಗಾರಿ ಚುರುಕು

ಹೆಣ್ಣೂರು ಮುಖ್ಯ ರಸ್ತೆಯಲ್ಲಿ 2024ರಲ್ಲಿ ಆರಂಭವಾಗಿದ್ದ ವೈಟ್-ಟಾಪಿಂಗ್ ಕಾಮಗಾರಿಯು ಈಗಾಗಲೇ ಜೂನ್ ಮತ್ತು ಅಕ್ಟೋಬರ್ ತಿಂಗಳ ಗಡುವನ್ನು ಮೀರಿ ವಿಳಂಬವಾಗಿತ್ತು. ಅಕ್ಟೋಬರ್ ಅಂತ್ಯದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ, ಹೆಣ್ಣೂರು ಜಂಕ್ಷನ್ ಮತ್ತು ಗೆದ್ದಲಹಳ್ಳಿ ನಡುವಿನ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಅಲ್ಲದೆ, ಕಾಮಗಾರಿಗೆ ವೇಗ ನೀಡಲು ವಿರುದ್ಧ ದಿಕ್ಕಿನಿಂದ ಕೆಲಸ ನಿರ್ವಹಿಸಲು ಮತ್ತೊಬ್ಬ ಗುತ್ತಿಗೆದಾರರನ್ನು ನೇಮಿಸುವ ಭರವಸೆಯನ್ನೂ ನೀಡಿದ್ದರು.

ಸಚಿವರ ಮಧ್ಯಪ್ರವೇಶದ ಬಳಿಕ ಕಾಮಗಾರಿ ಚುರುಕುಗೊಂಡಿದೆಯಾದರೂ, ಹೊಸದಾಗಿ ವೈಟ್-ಟಾಪಿಂಗ್ ಮಾಡಲಾದ ರಸ್ತೆಯ ಕೆಲವು ಭಾಗಗಳಲ್ಲಿ ಈಗಾಗಲೇ ಬಿರುಕುಗಳು ಕಾಣಿಸಿಕೊಂಡಿದೆ. ಮೇಲ್ಮೈ ಅಸಮರ್ಪಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಬೆಂಗಳೂರು ಪೂರ್ವ ನಗರ ನಿಗಮ, ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಹಾಗೂ ಲೋಕೋಪಯೋಗಿ ಇಲಾಖೆ ಹೀಗೆ ಮೂರು ಸಂಸ್ಥೆಗಳ ವ್ಯಾಪ್ತಿಗೆ ಈ ಪ್ರದೇಶ ಒಳಪಟ್ಟಿದ್ದು, ಸಮನ್ವಯದ ಕೊರತೆಯಿಂದಾಗಿ ಕ್ರಾಸಿಂಗ್‌ಗಳು, ಒಳಚರಂಡಿ ಮತ್ತು ಪಾದಚಾರಿ ಮಾರ್ಗಗಳ ಕೆಲಸಗಳು ಇನ್ನೂ ನಿಧಾನಗತಿಯಲ್ಲಿದೆ.

2-3 ಕಿ.ಮೀ. ದಾಟಲು ಒಂದೂವರೆ ಗಂಟೆ ಪರದಾಟ!

ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದ್ದರೂ, ಸಂಚಾರ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ ಎಂಬುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಹೆಣ್ಣೂರು ನಿವಾಸಿಗಳು, ಹಲವು ತಿಂಗಳ ಸ್ಥಗಿತದ ಬಳಿಕ ಈಗ ಕೆಲಸ ನಡೆಯುತ್ತಿದೆ. ಆದರೆ ಸಂಚಾರ ಮಾರ್ಗ ಬದಲಾವಣೆಯನ್ನು ನಿರ್ವಹಿಸಲು ಸ್ಥಳದಲ್ಲಿ ಯಾರೂ ಇಲ್ಲದಿರುವುದರಿಂದ ದಿನವಿಡೀ ಎರಡೂ ಬದಿಗಳಲ್ಲಿ ಕನಿಷ್ಠ 30 ನಿಮಿಷಗಳ ಟ್ರಾಫಿಕ್ ಇರುತ್ತದೆ. ನಾಲ್ಕು ಪಥದ ರಸ್ತೆಯು ದಿಢೀರನೆ ದ್ವಿಪಥಕ್ಕೆ ಇಳಿಯುವುದರಿಂದ ವಾಹನ ಸವಾರರು ತೀವ್ರ ಒತ್ತಡದಲ್ಲಿ ಸಂಚರಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ನಿವಾಸಿ ತನ್ನ ಅನುಭವ ಹೇಳಿಕೊಂಡು, ಪೀಕ್ ಅವರ್ ನಲ್ಲಿ ಕೇವಲ 2 ರಿಂದ 3 ಕಿಲೋಮೀಟರ್ ದೂರ ಕ್ರಮಿಸಲು 45 ನಿಮಿಷಗಳಿಂದ ಒಂದೂವರೆ ಗಂಟೆ ಬೇಕಾಗುತ್ತಿದೆ. ಶಾಲಾ ಬಸ್‌ಗಳು ಪ್ರತಿದಿನ ವಿಳಂಬವಾಗುತ್ತಿದ್ದು, ಉದ್ಯೋಗಿಗಳು ಕಚೇರಿ ತಲುಪುವ ಮೊದಲೇ ಸುಸ್ತಾಗುತ್ತಿದ್ದಾರೆ. ಪರ್ಯಾಯವಾಗಿ ಹೊರಮಾವು ಇಲ್ಲವೇ ಮಾನ್ಯತಾ ಟೆಕ್ ಪಾರ್ಕ್ ಮಾರ್ಗವಾಗಿ ಸುತ್ತುವರಿದು ಹೋದರೆ 6 ರಿಂದ 8 ಕಿ.ಮೀ. ಹೆಚ್ಚು ಸುತ್ತಿಕೊಂಡು ಸಾಗಬೇಕು. ಆ ರಸ್ತೆಗಳಲ್ಲೂ ಭಾರೀ ವಾಹನಗಳು, ಕಾಂಕ್ರೀಟ್ ಮಿಕ್ಸರ್ ಲಾರಿಗಳು ಹಾಗೂ ವಿಮಾನ ನಿಲ್ದಾಣದ ಟ್ಯಾಕ್ಸಿಗಳಿಂದ ತುಂಬಿ ತುಳುಕುತ್ತಿರುತ್ತವೆ ಎಂದರು.

ಇನ್ನು ಸ್ಪರ್ಶ್ ಆಸ್ಪತ್ರೆ ಸಮೀಪದ ಹೊರಮಾವು ಅಗ್ರಹಾರ ಕ್ರಾಸಿಂಗ್ ಬಳಿಯ ತಗ್ಗು ಪ್ರದೇಶದಲ್ಲಿ ಕೇವಲ 15 ನಿಮಿಷ ಮಳೆ ಸುರಿದರೂ ಗಂಟೆಗಟ್ಟಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ವಿಮಾನ ನಿಲ್ದಾಣದ ಎರಡೂ ಮಾರ್ಗಗಳಿಗೆ ಸಂಚಕಾರ

ಭವಿಷ್ಯದ ದೃಷ್ಟಿಯಿಂದ ರೈಲ್ವೆ ಸೇತುವೆ ಅಗಲೀಕರಣ ಒಳ್ಳೆಯದೇ ಆಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ 33 ದಿನ ರಸ್ತೆ ಬಂದ್ ಮಾಡುವುದು ಅಪಾಯಕಾರಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಏಕೆಂದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬಳ್ಳಾರಿ ರಸ್ತೆಯಲ್ಲಿ ಬಿಡಿಎ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 6ರಿಂದ ಬಂದ್‌ ಆಗಿದ್ದು, ಒಂದೂವರೆ ವರ್ಷ ಸಂಚಾರ ನಿರ್ಬಂಧ ಹೇರಲಾಗಿದೆ.

ಹೆಬ್ಬಾಳ ಮತ್ತು ಬಳ್ಳಾರಿ ರಸ್ತೆಯ ದಟ್ಟಣೆ ತಪ್ಪಿಸಲು ವಿಮಾನ ನಿಲ್ದಾಣದ ಪ್ರಯಾಣಿಕರು ಹೆಣ್ಣೂರು-ಬಾಗಲೂರು ರಸ್ತೆಯನ್ನೇ ಪರ್ಯಾಯ ಮಾರ್ಗವಾಗಿ ಅವಲಂಬಿಸಿದ್ದರು. ಇದೀಗ ಏಕಕಾಲದಲ್ಲಿ ಹೆಣ್ಣೂರು ಮುಖ್ಯ ರಸ್ತೆಯನ್ನೂ ಒಂದು ತಿಂಗಳ ಕಾಲ ಬಂದ್ ಮಾಡಿದರೆ, ಥಣಿಸಂದ್ರ ರಸ್ತೆಯೊಂದೇ ಸಂಚಾರಕ್ಕೆ ಉಳಿದಿರುವ ದಾರಿ. ಈಗಾಗಲೇ ಇದು ವಾಹನ ದಟ್ಟಣೆಯಿಂದ ತುಂಬಿ ಹೋಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡೂ ಪ್ರಮುಖ ಮಾರ್ಗಗಳು ಒಂದೇ ಸಮಯದಲ್ಲಿ ಬಂದ್ ಆದರೆ ಉತ್ತರ ಬೆಂಗಳೂರಿನ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಲಿದೆ ಎಂಬುದು ನಿವಾಸಿಗಳ ಆತಂಕ.