ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ತುಮಕೂರಿನಲ್ಲಿ ಸಮಾವೇಶ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ..
ಬೆಂಗಳೂರು (ಮೇ.20): ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ತುಮಕೂರಿನಲ್ಲಿ ಸಮಾವೇಶ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಕಾಳಗ ನಡೆಯುತ್ತಿದೆ. ಇವರ ಸಾಧನೆ ಏನೂ ಇಲ್ಲ. ಕುರ್ಚಿ ಪೈಪೋಟಿಯಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರವು ಸಾಧನಾ ಸಮಾವೇಶ ಆಯೋಜಿಸಿರುವುದು ಯಾವ ಪುರುಷಾರ್ಥಕ್ಕೆ? ಈ ಮೂರು ವರ್ಷದಲ್ಲಿ ಸರ್ಕಾರ ಕಡಿದು ಕಟ್ಟೆ ಹಾಕಿರುವುದು ಏನು? ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂಬಂತೆ ಕಾಂಗ್ರೆಸ್ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮವೂ ಬಿಜೆಪಿ ಸರ್ಕಾರದ ನಿರ್ಧಾರ. ಬಿಜೆಪಿ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸ ಎಂದು ಜನರಿಗೆ ತೋರಿಸುತ್ತಿದ್ದಾರೆ. ತುಮಕೂರು ಸಮಾವೇಶ ನಗೆಪಾಟಲಿಗೆ ಈಡಾಗಿದೆ ಎಂದರು.
ರಾಜ್ಯ ಸಭೆಗೆ ಆಯ್ಕೆ ಬಗ್ಗೆ ಚರ್ಚೆ ಆಗಿಲ್ಲ: ರಾಜ್ಯ ಸಭೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಈ ಬಗ್ಗೆ ದೆಹಲಿಯಿಂದ ತಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಎನ್‌ಡಿಎಗೆ ಬೆಂಬಲ ನೀಡಿರುವುದು ಬಹಿರಂಗ ಸತ್ಯ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನಿಸುತ್ತಾರೆ. ಅವರ ತೀರ್ಮಾಕ್ಕೆ ನಾವು ಬದ್ಧರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಯಾವ ಕಾರಣಕ್ಕೆ ಭೇಟಿಯಾಗಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಬಿ.ವೈ.ವಿಜಯೇಂದ್ರ ಹೇಳಿದರು.
ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್: ಇವರು ಏನಾದರೂ ಸಾಧನೆ ಮಾಡಿದ್ದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಲವು ದಿನ ಬೀಡು ಬಿಡಬೇಕಾದ ಸ್ಥಿತಿ ಬರುತ್ತಿರಲಿಲ್ಲ. ಮತದಾನಕ್ಕೂ ಮೂರು ದಿನ ಮೊದಲು ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಕಾಂಗ್ರೆಸ್ ಅನ್ನು ಗೆಲ್ಲಿಸದೇ ಹೋದರೆ ಗ್ಯಾರಂಟಿ ನಿಲ್ಲಿಸುವ ಹೇಳಿಕೆಗಳನ್ನೂ ನೀಡಿದ್ದರು. ಜಾಹೀರಾತು ಮುಖಾಂತರ ಆರ್ಥಿಕ ಮತ್ತು ಕಾನೂನು ಸ್ಥಿತಿ ಚೆನ್ನಾಗಿದೆ ಎಂದು ಜನರಿಗೆ ತೋರಿಸುತ್ತಿದ್ದಾರೆ. ಈ ಸಮಾವೇಶದ ಮುಖಾಂತರ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನಾಯಕರ ಮಕ್ಕಳೇ ತ್ರಿಭಾಷೆ ಕಲಿಕೆ
ಪ್ರಧಾನಿಯವರನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‍ನವರು ವಿರೋಧಿಸುತ್ತಿದ್ದಾರೆ. ತ್ರಿಭಾಷಾ ವಿರೋಧ ಮಾಡುವ ಕಾಂಗ್ರೆಸ್ ನಾಯಕರ ಮಕ್ಕಳು ಸಿಬಿಎಸ್‍ಇ ಶಾಲೆಯಲ್ಲಿ ತ್ರಿಭಾಷೆ ಕಲಿಯುತ್ತಿದ್ದಾರೆ. ಮದರಸಾದಲ್ಲಿ ಹಿಜಾಬ್ ಧರಿಸಲಿ. ಶಾಲೆಗಳಲ್ಲಿ ಹಿಜಾಬ್‍ಗೆ ಅವಕಾಶ ನೀಡಿ ರಾಜ್ಯ ಸರ್ಕಾರವೇ ಮಕ್ಕಳ ಮನಸ್ಸು ಕದಡುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಇಂತಹ ತೀರ್ಮಾನ ಕೈಗೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಬಿ.ವೈ.ವಿಜಯೇದ್ರ ಪ್ರತಿಕ್ರಿಯಿಸಿದರು.


