ಮಂಡ್ಯ ಜಿಲ್ಲೆಯಲ್ಲಿ, ತಾಯಿ ಗದರಿದ್ದಕ್ಕೆ ಇಬ್ಬರು ಸಹೋದರಿಯರು ಡೆತ್ ನೋಟ್ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾರೆ. ನಾವು ದೂರ ಹೋಗಿ ಸಾಯುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಆತಂಕಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಂದು ಮಕ್ಕಳಿಗೆ ಸ್ವಲ್ಪ ಏನು ಹೇಳುವುದೂ ಕಷ್ಟ ಎನ್ನುವ ಸ್ಥಿತಿ ಇದೆ. ಮನೆಯಲ್ಲಿ ಅಪ್ಪ- ಅಮ್ಮ ಏನಾದ್ರೂ ಹೇಳಿದ್ರೆ, ಶಾಲೆಯಲ್ಲಿ ಶಿಕ್ಷಕರು ಏನಾದರೂ ಗದರಿಸಿದರೆ ಸೀದಾ ಸಾವಿನ ಹಾದಿ ತುಳಿಯುವ ಮನಸ್ಥಿತಿ ಇಂದಿನ ಮಕ್ಕಳದ್ದು. ಅಂಥದ್ದೇ ಒಂದು ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಯಾರದ್ದೋ ಬಳಿ ಮಾತನಾಡಲು ಪಕ್ಕದವರ ಮೊಬೈಲ್​ ಕೇಳಿದ್ದಾರೆ ಇಬ್ಬರು ಬಾಲಕಿಯರು. ಹೀಗೆ ಏಕೆ ಮಾಡಿದ್ದಿ ಎಂದು ಗದರಿದ್ದಾರೆ ಅಮ್ಮ. ಇದೇ ಕಾರಣಕ್ಕೆ ಡೆತ್​ನೋಟ್​ ಬರೆದಿಟ್ಟು ಬಾಲಕಿಯರು ಕಾಣೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪ-ಅಮ್ಮ ಸಾರಿ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಅಕ್ಕ-ತಂಗಿಯಾಗಿದ್ದಾರೆ. ಮನೆ ಬಿಟ್ಟು ಹೋಗುವ ಮುನ್ನ ಪತ್ರವೊಂದು ಬರೆದಿಟ್ಟಿದ್ದಾರೆ. ಅದರಲ್ಲಿ ಅವರು, ಅಮ್ಮ-ಅಪ್ಪ ಸಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ನಮಗೆ ಆಗುವುದಿಲ್ಲ. ಹೀಗಾಗಿ ನಾವು ದೂರ ಹೋಗಿ ಸಾಯುತ್ತಿದ್ದೇವೆ ಎಂದು ಪತ್ರ ಬರೆದಿಟ್ಟಿದ್ದಾರೆ.

ಪೊಲೀಸರಲ್ಲಿ ದೂರು

ಇದನ್ನು ನೋಡಿ ಆತಂಕಗೊಂಡ ಅಪ್ಪ-ಅಮ್ಮ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಮಕ್ಕಳು ಏನಾದರೂ ಪ್ರಾಣಕ್ಕೆ ಅಪಾಯ ಮಾಡಿಕೊಂಡಿರಬಹುದೇ ಎಂದು ಕುಟುಂಬಸ್ಥರು ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾರೆ.