ವಿಜಯೇಂದ್ರ ಅವರು ಇಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ. ಇವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಟ್ಟಿದ್ದಾರೆ ಎನ್ನುವುದು ಯಾರಾದರೂ ಮರೆಯಲು ಸಾಧ್ಯವೇ? ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ದಾವಣಗೆರೆ (ಏ.07): ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಇಲ್ಲಿ ಕಾಂಗ್ರೆಸ್ ಅನ್ನು ಬೆಳೆಸಿವೆ. ಕಾಂಗ್ರೆಸ್ ಅಂತೂ ಈ ನಗರವನ್ನು ಅದ್ಭುತವಾಗಿ ಬೆಳೆಸಿದೆ. ಇಲ್ಲಿನ ಕಾಂಕ್ರೀಟ್ ರಸ್ತೆಗಳಂತೂ ಬೆಂಗಳೂರಿನಲ್ಲೂ ಇಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯವರು ಇಲ್ಲಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕಾಂಗ್ರೆಸ್ ಕ್ಯಾಂಪ್ ಆಫೀಸ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ. ಇವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಟ್ಟಿದ್ದಾರೆ ಎನ್ನುವುದು ಯಾರಾದರೂ ಮರೆಯಲು ಸಾಧ್ಯವೇ? ದೇಶದಲ್ಲಿರುವ ಇಂಧನ ಸಮಸ್ಯೆ, ವಾಣಿಜ್ಯ ಅನಿಲ ಸಮಸ್ಯೆಗಳು, ಬೆಲೆ ಏರಿಕೆಯ ಬಗ್ಗೆ ಮಾತಾಡೋದು ಬಿಟ್ಟು ನಮ್ಮ ಪ್ರಧಾನಿಯವರು ಚಲನಚಿತ್ರಗಳ ಬಗ್ಗೆ ವಿಮರ್ಶೆ ಮಾಡ್ತಾ ಕೂತಿದ್ದಾರೆ. ಇಂತಹ ದುರ್ಗತಿ ಪ್ರಧಾನಿಯವರಿಗೆ ಬರಬಾರದಿತ್ತು. ಜನರ ಕಷ್ಟಗಳಿಗೆ ಪರಿಹಾರವೇನು ಎಂಬ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ ಕಾಳಜಿಯಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ರಾಜ್ಯವು ಶಾಂತಿ ಸುಭಿಕ್ಷೆಯಿಂದ ಕೂಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ತಂದು ದೇಶದ ಜನರ ಹಸಿವು ತಣಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ, ಭಾಜಪದ ಮಾಸ್ಟರ್ ಸ್ಟ್ರೋಕ್ ಏನು? ಜನರನ್ನು ಸರತಿಯ ಸಾಲಿನಲ್ಲಿ ನಿಲ್ಲಿಸಿ ಅವರನ್ನು ಹೈರಾಣಾಗಿಸುವುದೇ? ನಾವು ಮಾಡಿರುವ ಯೋಜನೆಗಳ ಹೆಸರು ಬದಲಾಯಿಸಿದ್ದು ಮಾತ್ರ ಇವರ ಸಾಧನೆ ಯಾಗಿದೆ ಎಂದು ಹೇಳಿದರು.
ಡೋಲಾಯಮಾನ ಸ್ಥಿತಿ
ಭಾರತದ ವಿದೇಶಾಂಗ ನೀತಿಯಂತೂ ಭಾ.ಜ.ಪ ಕಾಲದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ನಮ್ಮ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಅಲಿಪ್ತ ನೀತಿಯನ್ನು ರೂಪಿಸಿದ ಪ್ರಧಾನ ವ್ಯಕ್ತಿಯಾಗಿದ್ದರು. ಆದರೆ ಪ್ರಸಕ್ತ ವಿದೇಶಾಂಗ ನೀತಿ ಡೋಲಾಯಮಾನ ಸ್ಥಿತಿಯಲ್ಲಿದೆ. ನಮ್ಮ ತೆರಿಗೆ ಹಣದ ಬಗ್ಗೆ ಕೂಡಾ ಬಿಜೆಪಿಯರಿಗೆ ಕಾಳಜಿ ಇಲ್ಲ. ನಿರ್ಮಲಾ ಸೀತಾರಾಮ ನ್ ಅವರಂತೂ ನೀರುಳ್ಳಿ ಬೆಲೆ ಏರಿಕೆ ಬಗ್ಗೆ ಮಾತಾಡಿದರೆ ನಾನು ನೀರುಳ್ಳಿ ತಿನ್ನಲ್ಲ ಎನ್ನುವಂತಹಾ ಬುದ್ಧಿವಂತೆ. ಇಂತಹವರ ಬಗ್ಗೆ ಏನು ಹೇಳಲು ಸಾಧ್ಯ ಎಂದರು.
ಉದ್ಯೋಗದ ಬಗ್ಗೆ ಕೇಳಿದರೆ ಮಿಲೆನಿಯಮ್ ಜನತೆ ಸ್ವಯಂ ಉದ್ಯೋಗದ ಕಡೆ ಆಕರ್ಷಿತರಾಗಿದ್ದಾರೆ ಅಂತ ಹೇಳ್ತಾರೆ. 26 ಸಾರ್ವಜನಿಕ ಜನರನ್ನು ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿದ ಕೀರ್ತಿ ಅವರದು. ಇಂತಹವರಿಂದ ಯಾವ ರೀತಿಯ ಬೆಳವಣಿಗೆ ಸಾಧ್ಯ ಎಂದು ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೌರಾಡಳಿತ ಮತ್ತು ನಗರ ಅಭಿವೃದ್ಧಿ ಸಚಿವ ರಹೀಮ್ ಖಾನ್, ಬಿ.ಎಂ.ಟಿ.ಸಿ. ಅಧ್ಯಕ್ಷರಾದ ವಿ.ಎಸ್. ಆರಾಧ್ಯ, ದಾವಣಗೆರೆ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಹಿರಿಯ ವಕ್ತಾರ ರಾಮಚಂದ್ರಪ್ಪ, ಮಾಧ್ಯಮ ಸಂಯೋಜಕ ಡಿ.ಬಸವರಾಜ್, ಮಾಧ್ಯಮ ಉಸ್ತುವಾರಿಗಳಾದ ಸ್ವಾತಿ ಚಂದ್ರಶೇಖರ್ ಮತ್ತು ಯು.ಟಿ.ಫರ್ಝಾನ ಹಾಗೂ ಇತರ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

