ಹುಬ್ಬಳ್ಳಿಯ ವಿಜಯನಗರದಲ್ಲಿ ಆಟವಾಡಲು ಹೋಗಿದ್ದ 9 ವರ್ಷದ ಬಾಲಕ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಬಾಲಕನ ಸ್ನೇಹಿತರು ಭಯದಿಂದ ವಿಷಯ ಮುಚ್ಚಿಟ್ಟಿದ್ದು, ಪೋಷಕರು ದೂರು ನೀಡಿದ ನಂತರ ಪೊಲೀಸರ ತನಿಖೆಯಿಂದ ಈ ದುರಂತ ಘಟನೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ (ಮೇ.20): ಆಟವಾಡಲು ಹೋದ ಮಗ ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ದಿನವಿಡೀ ಹುಡುಕಾಟ ನಡೆಸಿದ್ದರು. ಆದರೆ, ಇಂದು ಆ ಬಾಲಕ ನಿರ್ಮಾಣ ಹಂತದ ಕಟ್ಟಡದ ಕಂದಕದಲ್ಲಿ ಶವವಾಗಿ ಪತ್ತೆಯಾಗುವ ಮೂಲಕ ಹೆತ್ತವರ ಪಾಲಿಗೆ ಕಡು ಕತ್ತಲು ಆವರಿಸಿದೆ. ಮನೆ ನಿರ್ಮಾಣಕ್ಕಾಗಿ ತೆಗೆದು ಹಾಗೆಯೇ ಬಿಟ್ಟಿದ್ದ ಆಳವಾದ ಗುಂಡಿಗೆ ಬಿದ್ದು ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ಸಂಭವಿಸಿದೆ.

ಹುಬ್ಬಳ್ಳಿಯ ಉದಯ ನಗರದ ನಿವಾಸಿಯಾದ ಬಾಲಾಜಿ (9) ಮೃತಪಟ್ಟ ದುರ್ದೈವಿ ಬಾಲಕ. ಕಟ್ಟಡ ನಿರ್ಮಿಸುವವರ ಬೇಜವಾಬ್ದಾರಿತನ ಹಾಗೂ ಆಟದ ಮೋಜಿನಲ್ಲಿ ಗೆಳೆಯರು ಮಾಡಿದ ಒಂದು ಸಣ್ಣ ತಪ್ಪು ಈ ಕಂದನ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾಗಿದೆ.
ಪೊಲೀಸರ ತನಿಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸೋಮವಾರ ಬಾಲಾಜಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರದ ಕಡೆಗೆ ಹೋಗಿದ್ದ. ಅಲ್ಲಿನ ಒಂದು ಪಾಳುಬಿದ್ದ ಹಾಗೂ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಆವರಣದಲ್ಲಿ ತೆಂಗಿನಕಾಯಿ ಕೀಳಲು ಈ ಬಾಲಕರು ಮುಂದಾಗಿದ್ದಾರೆ. ಈ ವೇಳೆ ಮನೆ ನಿರ್ಮಾಣಕ್ಕಾಗಿ ಪಿಲ್ಲರ್ (ಕಾಲಂ) ಹಾಕಲು ತೆಗೆಯಲಾಗಿದ್ದ ಆಳವಾದ ಗುಂಡಿಯ ಬಳಿ ತೆರಳಿದಾಗ, ದುರದೃಷ್ಟವಶಾತ್ ಬಾಲಾಜಿ ಕಾಲು ಜಾರಿ ನೇರವಾಗಿ ಗುಂಡಿಯೊಳಗೆ ಬಿದ್ದಿದ್ದಾನೆ.
ಬಾಲಕ ಬೀಳುತ್ತಿದ್ದಂತೆ ಹೆದರಿ ಓಡಿಹೋದ ಗೆಳೆಯರು!
ಬಾಲಾಜಿ ಗುಂಡಿಗೆ ಬೀಳುತ್ತಿದ್ದಂತೆ ತೀವ್ರ ಭೀತಿಗೊಳಗಾದ ಆತನ ಸ್ನೇಹಿತರು, ಯಾರಿಗಾದರೂ ವಿಷಯ ತಿಳಿದರೆ ತಮಗೆ ಬೈಯಬಹುದು ಅಥವಾ ಶಿಕ್ಷೆಯಾಗಬಹುದು ಎಂಬ ಭಯದಿಂದ ಅಲ್ಲಿಂದ ತಕ್ಷಣವೇ ಎಸ್ಕೇಪ್ ಆಗಿದ್ದಾರೆ. ಇತ್ತ ಮಗ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಬಾಲಾಜಿಯ ಪೋಷಕರು ದಿನವಿಡೀ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದಿದ್ದಾಗ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಅಶೋಕನಗರ ಠಾಣೆಯ ಪೊಲೀಸರು, ನಿನ್ನೆ ಬಾಲಾಜಿ ಜೊತೆ ಆಟವಾಡುತ್ತಿದ್ದ ಸ್ನೇಹಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ತಾವೆಲ್ಲರೂ ತೆಂಗಿನಕಾಯಿ ತೆಗೆಯಲು ಹೋಗಿದ್ದಾಗ ಬಾಲಾಜಿ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಗಿ ಬಾಲಕರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಗೆಳೆಯರು ನೀಡಿದ ಮಾಹಿತಿಯ ಆಧಾರದ ಮೇಲೆ ಇಂದು ಬೆಳಿಗ್ಗೆ ಪೊಲೀಸರು ಮತ್ತು ಸ್ಥಳೀಯರು ವಿಜಯನಗರದ ಆ ಕಟ್ಟಡದ ಬಳಿ ತೆರಳಿ ತಪಾಸಣೆ ನಡೆಸಿದಾಗ, ಕಾಲಂ ಗುಂಡಿಯಲ್ಲಿ ಬಾಲಾಜಿಯ ಮೃತದೇಹ ಪತ್ತೆಯಾಗಿದೆ. ಮಗನ ಶವವನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಕರುಣಾಜನಕ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಪೊಲೀಸರ ಭೇಟಿ; ತನಿಖೆ ಚುರುಕು
ಸ್ಥಳಕ್ಕೆ ಅಶೋಕನಗರ ಪೊಲೀಸ್ ನಿರಕ್ಷಕರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಾರ್ವಜನಿಕರ ಸಹಾಯದಿಂದ ಬಾಲಕನ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ.


