ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಘೋಷಿಸುವಂತೆ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ತುಮಕೂರು ಜಿಲ್ಲೆಯನ್ನು ಬೆಂಗಳೂರಿನ..

ತುಮಕೂರು (ಮೇ.20): ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಘೋಷಿಸುವಂತೆ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ತುಮಕೂರು ಜಿಲ್ಲೆಯನ್ನು ಬೆಂಗಳೂರಿನ ಒಂದು ಭಾಗವಾಗಿ ಮಾಡಲು ವಿನಂತಿ ಮಾಡಿದರು. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಿದಂತೆ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಮಾಡುವಂತೆ ಮನವಿ ಮಾಡುತ್ತೇನೆ. ಮುಂದೆ ತುಮಕೂರು ಬೆಂಗಳೂರಿನ ಒಂದು ಭಾಗವಾಗಲಿದೆ ಎಂದರು.

Add Asianetnews Kannada as a Preferred SourcegooglePreferred

ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಬಡವರು, ರೈತರು, ಕಾರ್ಮಿಕರು ಮತ್ತು ಶೋಷಿತರ ಸ್ವಾಭಿಮಾನದ ಬದುಕಿಗಾಗಿ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದಕ್ಕಾಗಿ ಈ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ ₹2 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಹಲವು ದಶಕಗಳಿಂದ ರಾಜ್ಯದ ಹಟ್ಟಿ, ತಾಂಡ, ಮಜರೆ ಗ್ರಾಮಗಳು ಕಂದಾಯ ಗ್ರಾಮಗಳಾಗದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಇದನ್ನು ರಾಜ್ಯ ಕಂದಾಯ ಇಲಾಖೆ ಆದ್ಯತೆ ಕಾರ್ಯಕ್ರಮವಾಗಿ ತೆಗೆದುಕೊಂಡು 14 ಲಕ್ಷಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ರಾಜ್ಯದಲ್ಲಿ ವಿತರಿಸಿದೆ. ತುಮಕೂರು ಜಿಲ್ಲೆಯೊಂದರಲ್ಲೇ 22 ಸಾವಿರ ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ನೀಡುವ ಮೂಲಕ ಇಂದು ಗಿನ್ನಿಸ್ ದಾಖಲೆ ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ 650 ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ನೀಡಿ ಇಂದು ಮತ್ತೊಂದು ದಾಖಲೆ ಸೃಷ್ಟಿಸಿದೆ ಎಂದು ತಿಳಿಸಿದರು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ರಾಜ್ಯಕ್ಕೆ ₹10 ಲಕ್ಷದ, 24 ಸಾವಿರ ಕೋಟಿ ಬಂಡವಾಳ ಹರಿದುಬಂದಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ನೀಡಿದ ಪ್ರತಿಯೊಂದು ಮಾತನ್ನು ಉಳಿಸಿಕೊಂಡಿದ್ದಾರೆ ಎಂದರು. ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕಳೆದ 16 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಗೂ ಅಸಾಧ್ಯವೆನಿಸಿದ್ದ ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಇಂದು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಕಂದಾಯ ಇಲಾಖೆಯು ಒಂದು ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಬಾವಿಯ ಆಳದಷ್ಟೇ ಕೆಲಸಗಳಿರುತ್ತವೆ. ಎಷ್ಟೇ ಕೆಲಸ ಮಾಡಿದರೂ ಇನ್ನೂ ಮಾಡಬೇಕಾದದ್ದು ಬಾಕಿ ಇರುತ್ತದೆ. ಸಾರ್ವಜನಿಕರ ಪ್ರೋತ್ಸಾಹ ಮತ್ತು ಶಕ್ತಿಯಿಂದ ಬಾಕಿ ಉಳಿದಿರುವ ಎಲ್ಲಾ ಕಂದಾಯ ಸೇವೆಗಳನ್ನು ಶೀಘ್ರದಲ್ಲೇ ಜನರ ಬಾಗಿಲಿಗೆ ತಲುಪಿಸಲು ನಮ್ಮ ಇಲಾಖೆ ಬದ್ಧವಾಗಿದೆ. ವಿಧಾನಸೌಧದಲ್ಲಿ ನಮಗೆ ದೊರೆತಿರುವ ಅಧಿಕಾರವು ಕೇವಲ ಆಡಳಿತ ನಡೆಸುವುದಕ್ಕಾಗಿ ಅಲ್ಲ. ಬದಲಿಗೆ ಸಾರ್ವಜನಿಕರ ಸೇವೆಗಾಗಿ ಎಂಬುದನ್ನು ಅರಿತಿದ್ದೇವೆ ಎಂದರು.

ಐತಿಹಾಸಿಕ ಕಾರ್ಯ ಯಶಸ್ವಿ

ರಾಜ್ಯದಲ್ಲಿನ ಲಂಬಾಣಿ ತಾಂಡಗಳು, ಗೊಲ್ಲರಹಟ್ಟಿ ಹಾಗೂ ನಾಯಕರ ಹಟ್ಟಿಗಳ ನಿವಾಸಿಗಳಿಗೆ ಶಾಶ್ವತ ನೆಲೆಯನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಆಂದೋಲನದ ರೂಪದಲ್ಲಿ ಅವರ ಮನೆ ಬಾಗಿಲಿಗೆ ಹೋಗಿ ಹಕ್ಕುಪತ್ರ ವಿತರಿಸುವ ಐತಿಹಾಸಿಕ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಹಿಂದೆ ಕೃಷಿ ಹಾಗೂ ಕೂಲಿ ಕಾರ್ಮಿಕರಾಗಿ ಊರಿನ ಹೊರಗಿನ ವಸತಿ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದರು. ಅವರಿಗೆ ಯಾವುದೇ ಹಕ್ಕುಪತ್ರ ಇರಲಿಲ್ಲ. ಇಂದು ಕೃಷಿ ಮತ್ತು ಕೂಲಿ ಕಾರ್ಮಿಕರಿಗೆ ಹಕ್ಕುಪತ್ರವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಿದ್ಧಪಡಿಸಿದ್ದ ಸರ್ಕಾರದ 3 ವರ್ಷಗಳ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು, ಕಂದಾಯ ಇಲಾಖೆಯ ಜನಪರ ಯೋಜನೆಗಳು ಹಾಗೂ ಸೌಲಭ್ಯಗಳ ವಿತರಣೆಯ ಮಾಹಿತಿಯನ್ನು ಒಳಗೊಂಡ ಬೃಹತ್ ವಸ್ತುಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.