ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.01): 'ಬಿಬಿಎಂಪಿ ಅಧಿನಿಯಮ 2020’ ಜಾರಿಗೆ ಬಂದರೆ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ದೊಡ್ಡ ಅಘಾತ ಕಾದಿದ್ದು, ಆಸ್ತಿ ತೆರಿಗೆ ವಸೂಲಿಗೆ ಸುಸ್ತಿದಾರರ ಚರ ಆಸ್ತಿ ಜೊತೆಗೆ ಸ್ಥಿರ ಆಸ್ತಿಯೂ ಜಪ್ತಿ ಆಗಲಿದೆ.

ಪ್ರಸ್ತುತ ಕೆಎಂಸಿ ಕಾಯ್ದೆ 1976ರ ಅಡಿಯಲ್ಲಿ ಬಿಬಿಎಂಪಿ ಆಡಳಿತ ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲಿಕರು ತೆರಿಗೆ ಪಾವತಿ ಮಾಡದಿದ್ದರೆ ದುಪ್ಪಟ್ಟು ದಂಡ ವಿಧಿಸಿ ನೋಟಿಸ್‌ ಕೊಟ್ಟು ವಸೂಲಿ ಮಾಡಲು ಚರ ಆಸ್ತಿಗಳನ್ನು ಮಾತ್ರ ಜಪ್ತಿಗೆ (ಕುರ್ಚಿ, ಟಿವಿ, ಮನೆಯಲ್ಲಿ ಪಾತ್ರೆ ಹಾಗೂ ಇತ್ಯಾದಿ) ಅವಕಾಶವಿದೆ. ಈ ರೀತಿ ಜಪ್ತಿ, ವಸೂಲಿ ಮಾಡಿದರೂ ಕೆಲವು ವೇಳೆ ಆಸ್ತಿ ತೆರಿಗೆ ಬಾಕಿ ಪೂರ್ಣ ಪ್ರಮಾಣದಲ್ಲಿ ವಸೂಲಿ ಆಗುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಬೆಂಗಳೂರಿಗಾಗಿ ಹೊಸದಾಗಿ ರೂಪಿಸಲಾದ ‘ಬಿಬಿಎಂಪಿ ಅಧಿನಿಯಮ 2020’ರಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಚರ ಆಸ್ತಿಯ ಜೊತೆಗೆ ಸ್ಥಿರ ಆಸ್ತಿಯನ್ನು ಮುಟ್ಟುಗೋಲು ಅಥವಾ ಜಪ್ತಿಗೆ ಅವಕಾಶ ನೀಡಲಾಗಿದೆ. ಈ ರೀತಿ ಜಪ್ತಿ ಮಾಡಿದ ಆಸ್ತಿಯನ್ನು ಹರಾಜು ಹಾಕಿ ತನಗೆ ಬರಬೇಕಾದ ಆಸ್ತಿ ತೆರಿಗೆಯನ್ನು ವಸೂಲಿ ಮಾಡಿಕೊಳ್ಳಬಹುದಾಗಿದೆ.

ನಿಯಮ ರಚನೆ:

ಕಳೆದ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಆಯುಕ್ತರು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ನಿಯಮ 164ರಿಂದ 170 ಅಡಿಯಲ್ಲಿ ಬಾಕಿದಾರರ ಚರ ಆಸ್ತಿಯ ಜತೆಗೆ ಸ್ಥಿರ ಆಸ್ತಿಯನ್ನು ಜಪ್ತಿ, ಹರಾಜು ಮತ್ತು ಮಾರಾಟಕ್ಕೆ ಅವಕಾಶವಿದ್ದು, ಆ ನಿಯಮವನ್ನು ಕೆಎಂಸಿ ಕಾಯ್ದೆಯಲ್ಲಿ ಅಳವಡಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದರ ಜತೆಗೆ ‘ಬಿಬಿಎಂಪಿ ಅಧಿನಿಯಮ 2020’ ಅಳವಡಿಕೆ ಮಾಡಿದೆ. ಜತೆಗೆ ಸ್ಥಿರ ಆಸ್ತಿ ಜಪ್ತಿ ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ವೇಳೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಅನುಸರಿಸಬೇಕಾದ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋಗೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ

ದೊಡ್ಡ ಆಸ್ತಿ ಹೊಂದಿರುವ ಸುಸ್ತಿದಾರರಿಂದ ಚರ ಆಸ್ತಿ ಮಾತ್ರ ಜಪ್ತಿ ಮಾಡಿ ಬಾಕಿ ವಸೂಲಿ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಸ್ಥಿರ ಆಸ್ತಿ ಜಪ್ತಿ ಹಾಗೂ ಹರಾಜಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಒಪ್ಪಿಗೆ ನೀಡಿದ್ದು, ಬಿಬಿಎಂಪಿ ಹೊಸ ಅಧಿನಿಯಮದಲ್ಲಿ ಅವಳವಡಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಮಹಾನಗರ, ಪಾಲಿಕೆಗಳಿಗೆ ಅನ್ವಯ

ಕೆಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ 10 ಮಹಾನಗರ ಪಾಲಿಕೆ, 59 ನಗರಸಭೆಗಳು, 116 ಪುರಸಭೆಗಳು ಮತ್ತು 97 ಪಟ್ಟಣ ಪಂಚಾಯಿತಿಗಳಿಗೂ ಈ ನಿಯಮ ಅನ್ವಯಗೊಳ್ಳಲಿದ್ದು, ಆಸ್ತಿ ತೆರಿಗೆ ಸುಸ್ತಿದಾರರ ಚರ ಆಸ್ತಿಯ ಜತೆಗೆ ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ಹಾಕಿ ಬಾಕಿ ವಸೂಲಿ ಮಾಡಬಹುದಾಗಿದೆ.