ರಾಜೀನಾಮೆ ಕೊಟ್ಟು ಸಿದ್ದರಾಮನ ಹುಂಡಿಗೆ ಪಲಾಯನ ಮಾಡಿದರೆ ಒಳಿತು: ಸಿದ್ದು ವಿರುದ್ಧ ಹರಿಹಾಯ್ದ ಬಿಜೆಪಿ
ನಾನು ಸತ್ಯ ಹರಿಶ್ಚಂದ್ರರ ಅಪರಾವತಾರ ತಪ್ಪೇ ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಲಜ್ಜೆಬಿಟ್ಟು ನಿಂತಿದ್ದ ಭ್ರಷ್ಟ ಸಿದ್ದರಾಮಯ್ಯ ಅವರ ವಿರುದ್ಧ ಯಾವಾಗ ಇ.ಡಿ.ಯಲ್ಲಿ ಪ್ರಕರಣ ದಾಖಲಾಯಿತೋ ಆಗಲೇ ಅವರ ಜಂಘಾಬಲ ಉಡುಗಿ ಹೋಗಿತ್ತು. ಲೋಕಾಯುಕ್ತ ತನಿಖೆ ಮೇಲೆ ಅಧಿಕಾರದ ಪ್ರಭಾವ ಬೀರಿ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ಸಿದ್ದರಾಮಯ್ಯನವರು, ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗುತ್ತಿದ್ದಂತೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿದ್ದಾರೆ: ಬಿಜೆಪಿ
ಬೆಂಗಳೂರು(ಅ.02): “ಕಳ್ಳ ಕಳ್ಳನೇ ಹೊರತು ತಪ್ಪು ಒಪ್ಪಿಕೊಂಡರೇ ಸಾಚಾ ಆಗುವುದಿಲ್ಲ” ಬಿಜೆಪಿ ಬಿಡುವುದೂ ಇಲ್ಲ!A1 ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳು ನಡೆಸಿದ ಮೈಸೂರು ಚಲೋ ಪಾದಯಾತ್ರೆ ಇಂದು ಸಾರ್ಥಕವಾಗಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಇಂದು(ಬುಧವಾರ) ಎಕ್ಸ್‌ನಲ್ಲಿ ಸರಣಿ ಟ್ವೀಟ್ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ, ಮೈಸೂರು ಚಲೋ ಪಾದಯಾತ್ರೆ ಯಶಸ್ವಿಗೊಂಡ ನಂತರ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರು. ಹೈಕೋರ್ಟ್ ಭ್ರಷ್ಟ ಸಿದ್ದರಾಮಯ್ಯ ಅರ್ಜಿ ತಿರಸ್ಕರಿಸಿ, ತನಿಖೆ ನಡೆಯಬೇಕೆಂದು ಆದೇಶ ನೀಡಿತು. ಹೈಕೋರ್ಟ್ ಆದೇಶದವರೆಗೂ ತೀರ್ಪು ಕಾಯ್ದಿರಿಸಿಕೊಂಡಿದ್ದ ಜನಪ್ರತಿನಿಧಿ ನ್ಯಾಯಾಲಯ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ A1, ಅವರ ಪತ್ನಿ ಪಾರ್ವತಿ A2, ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ A3, ಜಮೀನು ಮಾರಾಟ ಮಾಡಿದ ದೇವರಾಜು A4 ಎಂದು ಲೋಕಾಯುಕ್ತ ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸುವಂತೆ ಆದೇಶ ನೀಡಿತು. ಇಷ್ಟಾದರೂ ಭಂಡತನದ ಬ್ರ್ಯಾಂಡ್ ಅಂಬಾಸಿಡರ್ ಎಂಬಂತೆ ಪೋಸ್ ಕೊಟ್ಟ ಐಪಿಸಿ 420 A1 ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದಿಲ್ಲ ತನಿಖೆ ಎದುರಿಸುತ್ತೇನೆಂದು ಮೊಂಡುವಾದ ಮಾಡಲು ಶುರು ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದೆ.
ಬಿಜೆಪಿಗರಿಗೆ ಗಾಂಧಿಜಿ ನಾಯಕ ಅಲ್ಲಾ, ಖಳನಾಯ: ಕಮಲ ನಾಯಕರ ವಿರುದ್ಧ ಸಿದ್ದರಾಮಯ್ಯ ಗರಂ
ನಾನು ಸತ್ಯ ಹರಿಶ್ಚಂದ್ರರ ಅಪರಾವತಾರ ತಪ್ಪೇ ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಲಜ್ಜೆಬಿಟ್ಟು ನಿಂತಿದ್ದ ಭ್ರಷ್ಟ ಸಿದ್ದರಾಮಯ್ಯ ಅವರ ವಿರುದ್ಧ ಯಾವಾಗ ಇ.ಡಿ.ಯಲ್ಲಿ ಪ್ರಕರಣ ದಾಖಲಾಯಿತೋ ಆಗಲೇ ಅವರ ಜಂಘಾಬಲ ಉಡುಗಿ ಹೋಗಿತ್ತು. ಲೋಕಾಯುಕ್ತ ತನಿಖೆ ಮೇಲೆ ಅಧಿಕಾರದ ಪ್ರಭಾವ ಬೀರಿ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ಸಿದ್ದರಾಮಯ್ಯನವರು, ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗುತ್ತಿದ್ದಂತೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿದ್ದಾರೆ. ಇ.ಡಿ.ಗೆ ಬಂದ ದೂರಿನನ್ವಯ ಲೋಕಾಯುಕ್ತದಲ್ಲಿ ದಾಖಲಾದ ಎಫ್‌ಐಆರ್ ಮಾದರಿಯಲ್ಲಿಯೇ ಇಸಿಐಆರ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿತು. ಯಾವ ಕ್ಷಣದಲ್ಲಿ ಬೇಕಾದರೂ ಇ.ಡಿ. ನೋಟಿಸ್ ಕೊಡಬಹುದೆಂದು ಭಯಭೀತಗೊಂಡ ಭ್ರಷ್ಟ A1 ಆರೋಪಿ ರಾತ್ರೋರಾತ್ರಿ ತಮ್ಮ ಆಪ್ತರ ಮೂಲಕ ಒಂದು ಪತ್ರ ಸಿದ್ಧಪಡಿಸಿ A2 ಆರೋಪಿಯಿಂದ ಸಹಿ ಹಾಕಿಸಿ 14 ಸೈಟುಗಳನ್ನು ವಾಪಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.
ಮಾಧ್ಯಮಗಳು 14 ಸೈಟು ವಾಪಸ್ ಕೊಡುತ್ತೀರಾ ಎಂದು ಭ್ರಷ್ಟ ಸಿಎಂ ಅವರನ್ನು ಪ್ರಶ್ನೆ ಮಾಡಿದಾಗ 62 ಕೋಟಿ ರೂಪಾಯಿ ಕೊಟ್ಟರೆ ವಾಪಸ್ ಕೊಡುತ್ತೇನೆಂದು ಪಿತ್ರಾರ್ಜಿತ ಆಸ್ತಿ ಎನ್ನುವಂತೆ ಪಟ್ಟು ಹಿಡಿದಿದ್ದರು. ಆದರೆ, ಮುಡಾ ಭ್ರಷ್ಟಾಚಾರದ ಕುಣಿಕೆ ಬಿಗಿಯಾಗುತ್ತಿದ್ದಂತೆ ನಾನು ಜೈಲು ಸೇರುವುದು ಖಚಿತ ಎಂದು ಇದೀಗ 14 ಸೈಟುಗಳನ್ನು ವಾಪಸ್ ಕೊಡುತ್ತೇನೆಂದು ಸದಾರಮೆ ನಾಟಕ ಆಡುತ್ತಿದ್ದಾರೆ. ಭ್ರಷ್ಟ ಸಿದ್ದರಾಮಯ್ಯನವರು ತಮ್ಮ ಭ್ರಷ್ಟಾಚಾರ ಸಾಬೀತು ಆಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ ತಮ್ಮ ಹಳೆಯ ಛಾಳಿಯನ್ನು ಮುಂದುವರಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕೆಂಡ ಕಾರಿದೆ.
ಸಿಎಂರಿಂದ ಭಂಡತನ ಪ್ರದರ್ಶನ, ಆಪಾದನೆ ಬಂದ ಮೇಲೆ ಮರಳಿ ಕೊಡೋ ಚಾಳಿ ಬೆಳೆಸಿಕೊಂಡ ಸಿದ್ದು: ದೊಡ್ಡನಗೌಡ ಪಾಟೀಲ್
ಲಂಚದ ರೂಪದಲ್ಲಿ ವಜ್ರಖಚಿತ ಹ್ಯೂಬ್ಲೋಟ್ ವಾಚ್ ಪಡೆದುಕೊಂಡಿದ್ದಾಗ ಇನ್ನೇನು ರಾಜೀನಾಮೆ ಕೊಡಲೇಬೇಕು ಎಂಬ ಸ್ಥಿತಿ ಬಂದಾಗ ಕೋಟಿ ಬೆಲೆಯ ವಾಚ್ ಅನ್ನು ಸದನದಲ್ಲಿ ಒಪ್ಪಿಸಿ ತಪ್ಪೊಪ್ಪಿಕೊಂಡು ಬಚಾವ್ ಆಗಿದ್ದರು. ಆದರೆ, ಈ ಬಾರಿ 14 ಸೈಟು ವಾಪಸ್ ಕೊಟ್ಟ ತಕ್ಷಣ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಸದನದಲ್ಲಿ ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಿಜೆಪಿ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೆ ರಣಹೇಡಿಯಂತೆ ಓಡಿ ಹೋದಾಗಲೇ ಹಗರಣ ನಡೆದಿರುವುದು ಸಾಬೀತಾಗಿತ್ತು. ಆಗಲೇ ಬಿಜೆಪಿಯೂ ಹೋರಾಟಕ್ಕೆ ಧುಮುಕಿತ್ತು ಎಂದು ಹೇಳಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ಭ್ರಷ್ಟ ಮಾಜಿ ಸಚಿವ ಬಿ. ನಾಗೇಂದ್ರರನ್ನ ಬಿಜೆಪಿಯೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದಂತೆ, ಮುಡಾ ಹಗರಣದ A1 ಭ್ರಷ್ಟ ಸಿದ್ದರಾಮಯ್ಯ ಅವರನ್ನು ಕಳುಹಿಸುವುದು ನಿಶ್ಚಿತ. ಅದಕ್ಕೂ ಮೊದಲು ಲಜ್ಜೆಗೆಟ್ಟು ಕುರ್ಚಿ ಮೇಲೆ ಕೂರುವುದು ಬಿಟ್ಟು ರಾಜೀನಾಮೆ ಕೊಟ್ಟು ಸಿದ್ದರಾಮನ ಹುಂಡಿಗೆ ಪಲಾಯನ ಮಾಡಿದರೆ ಒಳಿತು ಎಂದು ರಾಜ್ಯ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದೆ.