ಮೆಟ್ರೋಗೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ
ಬಿಬಿಎಂಪಿಗೆ 4 ಮಾದರಿಯ ಸೇವಾ ಶುಲ್ಕ ಪಾವತಿಸಲಿರುವ ಮೆಟ್ರೋ ನಿಗಮ| ಶುಲ್ಕ ನಿಗದಿ ಪಡಿಸಿದ ಉನ್ನತ ಮಟ್ಟದ ಸಮಿತಿ| ಮೆಟ್ರೋಗೆ ಸೇರಿದ ಜಮೀನು ಮತ್ತು ಕಟ್ಟಡಗಳಿಗೆ ಶೇ.75ರಷ್ಟು ಸೇವಾ ಶುಲ್ಕ ವಿಧಿಸಿ. ಶೇ.25 ರಷ್ಟು ವಿನಾಯಿತಿ|
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಫೆ.15): ಬಿಬಿಎಂಪಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿದ ಮಾದರಿಯಲ್ಲಿಯೇ ‘ನಮ್ಮ ಮೆಟ್ರೋ’ (ಬಿಎಂಆರ್‌ಸಿಎಲ್) ನಿಲ್ದಾಣ, ಕಟ್ಟಡ ಸೇರಿದಂತೆ ಇನ್ನಿತರ ಸ್ವತ್ತುಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿ ಸೇವಾ ಶುಲ್ಕ ವಿಧಿಸಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿದ 400ಕ್ಕೂ ಅಧಿಕ ಆಸ್ತಿಗಳಿವೆ. ಈ ಆಸ್ತಿಗಳಿಗೆ ಪ್ರತಿವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ನೀಡಿ ಶೇಕಡ 25ರಷ್ಟು ಮಾತ್ರ ಸೇವಾ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದೇ ಮಾದರಿಯಲ್ಲಿ ‘ನಮ್ಮ ಮೆಟ್ರೋ’ಗೆ ಸೇರಿದ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿ ಸೇವಾ ಶುಲ್ಕ ವಸೂಲಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಸರ್ಕಾರಿ ಕಟ್ಟಡಗಳಿಗೂ ಮೆಟ್ರೋಗೂ ವಿಧಿಸುತ್ತಿರುವ ಸೇವಾ ಶುಲ್ಕದಲ್ಲಿ ವ್ಯತ್ಯಾಸವಿದೆ. ಮೆಟ್ರೋಗೆ ಅದು ನಡೆಸುತ್ತಿರುವ ಚಟುವಟಿಕೆ ಆಧರಿಸಿ ನಾಲ್ಕು ರೀತಿಯ ದರವನ್ನು ನಿಗದಿಪಡಿಸಲಾಗಿದೆ. ಏಕೆಂದರೆ, ನಮ್ಮ ಮೆಟ್ರೋ ತನ್ನ ಸ್ವತ್ತಿನಲ್ಲಿ ಹೋಟೆಲ್, ಖಾಸಗಿ ಕಚೇರಿ, ವ್ಯಾಪಾರಿ ಮಳಿಗೆ, ಪಾರ್ಕಿಂಗ್ ಶುಲ್ಕ ವಸೂಲಿ ಸೇರಿದಂತೆ ಇನ್ನಿತರೆ ವಾಣಿಜ್ಯ ಚಟುವಟಿಕೆ ಮೂಲಕ ಆದಾಯ ಸಂಗ್ರಹಿಸುತ್ತಿದೆ.
ನಾಲ್ಕು ಮಾದರಿ ಸೇವಾ ಶುಲ್ಕ:
ಮೆಟ್ರೋ ನಿಲ್ದಾಣದ ಸೀಮಿತ ಪ್ರದೇಶ, ಡಿಪೋಗಳು, ಕಾರ್ಯಾಗಾರ, ಆಡಳಿತ ಕಚೇರಿ ಹಾಗೂ ತರಬೇತಿ ಕಚೇರಿಗಳಿಗೆ ಮಾತ್ರ ಶೇ.25ರಷ್ಟು ಸೇವಾ ಶುಲ್ಕ ವಿಧಿಸಿ ಶೇ.70ರಷ್ಟು ರಿಯಾಯಿತಿ ನೀಡಿದೆ. ಇನ್ನು ಸಿಬ್ಬಂದಿ ವಾಸಿಸುವ ಮನೆಗಳಿಗೆ ಶೇ.50ರಷ್ಟು ಸೇವಾ ಶುಲ್ಕ ವಿಧಿಸಿ ಉಳಿದ ಶೇ.50ರಷ್ಟು ಪಾವತಿಗೆ ಸೂಚಿಸಿದೆ. ನಿಲ್ದಾಣದಿಂದ ಹೊರಗಡೆ ಇರುವ ಮೆಟ್ರೋಗೆ ಸೇರಿದ ಜಮೀನು ಮತ್ತು ಕಟ್ಟಡಗಳಿಗೆ ಶೇ.75ರಷ್ಟು ಸೇವಾ ಶುಲ್ಕ ವಿಧಿಸಿ. ಶೇ.25 ರಷ್ಟು ವಿನಾಯಿತಿ ನೀಡಿದೆ. ಮೆಟ್ರೋ ನಿಲ್ದಾಣದ ಹೊರ ಮತ್ತು ಒಳಗೆ ಇರುವ ಮಳಿಗೆ, ಅಂಗಡಿ, ಕಿಯೋಸ್ಕ್, ನಿಲ್ದಾಣದಲ್ಲಿರುವ ಪಾರ್ಕಿಂಗ್ ಜಾಗಕ್ಕೆ ರಿಯಾಯ್ತಿಯಿಲ್ಲ. ಶೇ.100ರಷ್ಟು ಸೇವಾ ಶುಲ್ಕ ವಿಧಿಸಲಾಗಿದೆ.
ಇನ್ಮುಂದೆ ಬೆಂಗಳೂರು ಮೆಟ್ರೋದಲ್ಲಿ ಕನ್ನಡ ಕಡ್ಡಾಯ
ನಮ್ಮ ಮೆಟ್ರೋ ಇಷ್ಟುವರ್ಷ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿರಲಿಲ್ಲ. ಇದೀಗ ದೆಹಲಿ ಮೆಟ್ರೋ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಅನ್ವಯ ತೆರಿಗೆ ವ್ಯಾಪ್ತಿಗೆ ಸೇರಿಸಿ ಸೇವಾ ಶುಲ್ಕ ದರ ನಿಗದಿಪಡಿಸಲಾಗಿದೆ. ಬಿಬಿಎಂಪಿಗೆ ಎಷ್ಟು ಶುಲ್ಕ ಬರಲಿದೆ ಎಂಬುದು ಒಟ್ಟು ಆಸ್ತಿಯ ಲೆಕ್ಕಾಚಾರದ ಬಳಿಕ ಗೊತ್ತಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
‘ಬಾಕಿ ವಸೂಲಿ ಮಾಡುತ್ತೀವಿ’
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಟ್ಟಡಗಳಿಗೆ ಬಿಬಿಎಂಪಿ ಆಸ್ತಿ ತೆರಿಗೆ ವಿನಾಯಿತಿ ನೀಡಿ ಸೇವಾ ಶುಲ್ಕ ನಿಗದಿ ಪಡಿಸಿದೆ. ಆದರೂ ಸರ್ಕಾರಿ ಇಲಾಖೆಗಳಿಂದ ಪ್ರತಿವರ್ಷ ಸೇವಾ ಶುಲ್ಕವನ್ನು ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿವೆ. 2020-21ನೇ ಸಾಲಿನಲ್ಲಿ ಸರ್ಕಾರಿ ಕಟ್ಟಡಗಳಿಂದ ಸುಮಾರು .100 ಕೋಟಿಗೂ ಅಧಿಕ ಮೊತ್ತದ ಸೇವಾ ಶುಲ್ಕ ವಸೂಲಿ ಆಗಬೇಕಿದೆ. ಸರ್ಕಾರಿ ಕಟ್ಟಡಗಳು ಎಂಬ ಕಾರಣಕ್ಕೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಈ ಬಾರಿ ಸಾಕಷ್ಟು ಸರ್ಕಾರಿ ಇಲಾಖೆಗಳಿಂದ ಸೇವಾ ಶುಲ್ಕ ಬಾಕಿ ವಸೂಲಿ ಮಾಡಲಾಗಿದೆ. ಬಾಕಿರುವ ಸರ್ಕಾರಿ ಕಟ್ಟಡಗಳಿಂದ ಮಾಚ್‌ರ್ 30ರೊಳಗಾಗಿ ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.