Asianet Suvarna News Asianet Suvarna News

ಬ್ರ್ಯಾಂಡ್‌ ಬೆಂಗಳೂರು: ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ದಟ್ಟಣೆ ಶುಲ್ಕ ವಸೂಲಿ!

ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಪಾರ್ಕಿಂಗ್‌ ನೀತಿ ಸಮರ್ಪಕ ಜಾರಿ, ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ವಾಹನ ಸವಾರರಿಂದ ದಟ್ಟಣೆ ಶುಲ್ಕ ವಸೂಲಿ, ಸಮಗ್ರ ಮಾಸ್ಟರ್‌ ಪ್ಲ್ಯಾನ್‌ ರಚಿಸುವುದು ಸೇರಿದಂತೆ ವಿವಿಧ ಕ್ರಮ ಕೈಗೊಳ್ಳುವಂತೆ ಐಐಎಸ್ಸಿ ಮತ್ತು ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಆರ್‌ಐಎಂ) ಸಿದ್ಧಪಡಿಸಿರುವ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
 

Brand Bengaluru Congestion charges on high traffic roads in Bengaluru gvd
Author
First Published Sep 6, 2023, 6:43 AM IST

ಗಿರೀಶ್‌ ಗರಗ

ಬೆಂಗಳೂರು (ಸೆ.06): ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಪಾರ್ಕಿಂಗ್‌ ನೀತಿ ಸಮರ್ಪಕ ಜಾರಿ, ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ವಾಹನ ಸವಾರರಿಂದ ದಟ್ಟಣೆ ಶುಲ್ಕ ವಸೂಲಿ, ಸಮಗ್ರ ಮಾಸ್ಟರ್‌ ಪ್ಲ್ಯಾನ್‌ ರಚಿಸುವುದು ಸೇರಿದಂತೆ ವಿವಿಧ ಕ್ರಮ ಕೈಗೊಳ್ಳುವಂತೆ ಐಐಎಸ್ಸಿ ಮತ್ತು ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಆರ್‌ಐಎಂ) ಸಿದ್ಧಪಡಿಸಿರುವ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಬ್ರ್ಯಾಂಡ್‌ ಬೆಂಗಳೂರು ಯೋಜನೆ ಅಡಿಯಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ತರಬೇಕಾದ ಬದಲಾವಣೆ ಕುರಿತಂತೆ ಸಾರ್ವಜನಿಕರಿಂದ ಅಭಿಪ್ರಾಯ, ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಆ ಸಲಹೆಗಳನ್ನು ಒಟ್ಟುಗೂಡಿಸಿ ಪ್ರತ್ಯೇಕ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಐಐಎಸ್ಸಿ ಮತ್ತು ಆರ್‌ಐಎಂಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಅದರಂತೆ ಐಐಎಸ್ಸಿ ಪ್ರೊ.ಆಶಿಶ್‌ ವರ್ಮಾ ಮತ್ತು ಆರ್‌ಐಎಂನ ಪ್ರೊ.ಮೇಘ್ನಾ ವರ್ಮಾ ಕರಡು ವರದಿ ಸಿದ್ಧಪಡಿಸಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದಾರೆ. ಅದರಲ್ಲಿ ಸಂಚಾರ ದಟ್ಟಣೆ ನಿಯಂತ್ರಕ್ಕೆ ಜನರಿಂದ ಬಂದ ಅಭಿಪ್ರಾಯಗಳು ಹಾಗೂ ಅದನ್ನಾಧರಿಸಿ ಕೈಗೊಳ್ಳಬಹುದಾದ ಕ್ರಮಗಳನ್ನು ಉಲ್ಲೇಖಿಸಲಾಗಿದೆ.

ಎಸ್ಸೆಸ್ಸೆಲ್ಸಿ, ಪಿಯುಗೆ ಇನ್ಮುಂದೆ 3 ಪರೀಕ್ಷೆ: ಪರೀಕ್ಷಾ ವ್ಯವಸ್ಥೆ ಭಾರೀ ಬದಲಾವಣೆ

10 ಸಾವಿರ ಪ್ರತಿಕ್ರಿಯೆಗಳು: ಬ್ರ್ಯಾಂಡ್‌ ಬೆಂಗಳೂರು ಅಡಿಯಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ನಗರದಲ್ಲಿ ಉತ್ತಮ ಸಂಚಾರ ವ್ಯವಸ್ಥೆ ಜಾರಿಗಾಗಿ ಜೂನ್‌ನಲ್ಲಿ ಸರ್ಕಾರದಿಂದ ಆನ್‌ಲೈನ್‌ ಮೂಲಕ ಸಲಹೆ ನೀಡುವಂತೆ ಸೂಚಿಸಲಾಗಿತ್ತು. ಅದರ ಪ್ರಕಾರ ಕಳೆದ ಆಗಸ್ಟ್‌ವರೆಗೆ 10,479 ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ನಕಲಿ, ಅಪ್ರಸ್ತುತ ಸೇರಿದಂತೆ ಇನ್ನಿತರ ಪ್ರತಿಕ್ರಿಯೆಗಳನ್ನು ತೆಗೆದು ಹಾಕಿ ಅಂತಿಮವಾಗಿ 6,075 ಪ್ರತಿಕ್ರಿಯೆಗಳನ್ನಷ್ಟೇ ಪರಿಗಣಿಸಿ, ಪರಿಶೀಲಿಸಲಾಗಿದೆ. ಅವುಗಳನ್ನು ಸಕ್ರಿಯ ಚಲನಶೀಲತೆ, ಬಸ್‌ ಮತ್ತು ಮೆಟ್ರೋ ಹಾಗೂ ರಸ್ತೆ ಮತ್ತು ಸಂಚಾರ ವಿಷಯಗಳಂತೆ ವಿಂಗಡಿಸಲಾಗಿದೆ.

ಸಮಗ್ರ ಸಾರಿಗೆ ಯೋಜನೆ: ಮುಂಬರುವ ವರ್ಷಗಳಲ್ಲಿ ನಗರದಲ್ಲಿ ಹೆಚ್ಚಲಿರುವ ವಾಹನ ಹಾಗೂ ಸಂಚಾರ ದಟ್ಟಣೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮಾಸ್ಟರ್‌ಪ್ಲಾನ್‌ (ಮಹಾಯೋಜನೆ) ಹಾಗೂ ಸಮಗ್ರ ಸಾರಿಗೆ ಯೋಜನೆ ರೂಪಿಸಬೇಕಿದೆ. ಅದು ಕಾಲಕಾಲಕ್ಕೆ ಬದಲಿಸುವ ಮೂಲಕ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಜಾರಿಗೊಳಿಸಬೇಕು, ವಾಹನ ನಿಲುಗಡೆ ನೀತಿಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು, ಶುಲ್ಕ ವಸೂಲಿ ಮಾಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. 

ಜತೆಗೆ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ)ವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಪರಿಸರಕ್ಕೆ ಉತ್ತಮವಾದಂತಹ ಎಲೆಕ್ಟ್ರಿಕ್‌ ವಾಹನಗಳು, ಸೈಕಲ್‌ಗಳ ಬಳಕೆ, ಬಸ್‌, ಮೆಟ್ರೋದಂತಹ ಸಮೂಹ ಸಾರಿಗೆಯನ್ನು ಬಳಸಲು ಜನರನ್ನು ಉತ್ತೇಜಿಸಬೇಕು. ಮೆಟ್ರೋ ನಿಲ್ದಾಣಗಳಿಂದ ಬೇರೆಬೇರೆ ಬಡಾವಣೆಗಳಿಗೆ ಸಂಪರ್ಕ ನೀಡುವಂತೆ ಬಸ್‌ ಸೇರಿದಂತೆ ಇನ್ನಿತರ ಸಂಪರ್ಕ ಸಾರಿಗೆ ವ್ಯವಸ್ಥೆ ಮಾಡಬೇಕು. ಜತೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ರೀಚಾಜ್‌ರ್‍ ಮಾಡಿಕೊಳ್ಳಲು ಚಾರ್ಜಿಂಗ್‌ ಕೇಂದ್ರಗಳನ್ನು ಸಮರ್ಪಕವಾಗಿ ಸ್ಥಾಪಿಸಬೇಕು ಎಂದು ತಿಳಿಸಲಾಗಿದೆ.

ಲಂಡನ್‌ ಮಾದರಿ ದಟ್ಟಣೆ ಶುಲ್ಕ: ಲಂಡನ್‌ನ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ದಟ್ಟಣೆ ಶುಲ್ಕ ವಿಧಿಸಲಾಗುತ್ತಿದ್ದು, ಅದೇ ಮಾದರಿಯನ್ನು ಬೆಂಗಳೂರಿನಲ್ಲಿಯೂ ಜಾರಿಗೊಳಿಸಬೇಕು. ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ದಟ್ಟಣೆ ಶುಲ್ಕ ವಸೂಲಿ ಮಾಡುವ ಮೂಲಕ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬಹುದು. ಅದರ ಜತೆಗೆ ಬ್ರೆಜಿಲ್‌ನ ಕ್ಯುರಿಟಿಬಾ ರಸ್ತೆಯ ಪಕ್ಕದಲ್ಲಿ ಉದ್ಯಾನ ನಿರ್ಮಾಣ ಸೇರಿದಂತೆ ಇನ್ನಿತರ ಕ್ರಮಗಳ ಮೂಲಕ ವಾಹನ ಸಂಚಾರ ನಿಷೇಧಿಸಿ, ಪಾದಚಾರಿ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಅಳವಡಿಕೆ ಮಾಡಬೇಕು. ಡೆನ್ಮಾರ್ಕ್ನಲ್ಲಿ ವಾಹನಗಳ ಸಂಖ್ಯೆ ಕಡಿಮೆ ಮಾಡಲು ತೆರಿಗೆ ಹೆಚ್ಚಳ, ಖರೀದಿ ಮೊತ್ತವನ್ನು ದುಪ್ಪಟ್ಟುಗೊಳಿಸಲಾಗಿದೆ. ಸಿಂಗಾಪುರದಲ್ಲಿ ವಾಹನ ನೋಂದಣಿ ಶುಲ್ಕಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಇದೇ ಮಾದರಿ ಅನುಸರಿಸಿ ವಾಹನ ನೋಂದಣಿ ಸಂಖ್ಯೆ ಇಳಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾವೇರಿ ನೀರಿಗಾಗಿ ಈಗ ರೈತರಿಂದಲೇ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ!

ವರದಿಯಲ್ಲಿನ ಪ್ರಮುಖ ಶಿಫಾರಸುಗಳು
* ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು
* ಫೀಡರ್‌ ಸೇವೆಯ ಲಾಭ ಹೆಚ್ಚಿಸಲು ಬಿಎಂಟಿಸಿ ಮತ್ತು ಮೆಟ್ರೋ ನಡುವೆ ಆದಾಯ ಹಂಚಿಕೆ ವ್ಯವಸ್ಥೆ ಜಾರಿ ಮಾಡಬೇಕು
* ಬಸ್‌ ಸೇವೆಯ ವೇಗ ಹೆಚ್ಚಿಸಲು, ಬಸ್‌ಗಳ ಸಂಚಾರದ (ಟ್ರಿಪ್‌) ಸಂಖ್ಯೆ ಹೆಚ್ಚಿಸಬೇಕು
* ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಸುತ್ತಲಿನ ಪ್ರದೇಶಗಳಿಗೆ ವಿಸ್ತರಿಸಬೇಕು
* ಮೋಟಾರು ವಾಹನಗಳ ಬದಲು ಸೈಕಲ್‌ ಬಳಕೆಗೆ ಪ್ರೋತ್ಸಾಹಿಸಬೇಕು
* ಶಾಪಿಂಗ್‌ ಸೇರಿ ಇನ್ನಿತರ ಕಾರ್ಯಕ್ಕಾಗಿ ಜನರ ಓಡಾಟ ತಪ್ಪಿಸಲು ಮಿಶ್ರ ಭೂಬಳಕೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಬೇಕು
* ಸಂಚಾರ ಸಿಗ್ನಲ್‌ಗಳನ್ನು ಉನ್ನತೀಕರಿಸಬೇಕು
* ಪಾದಚಾರಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

Follow Us:
Download App:
  • android
  • ios