"ನೀನ್ಯಾಕೆ ಮಾತಾಡ್ತೀ..?': ವಿರಾಟ್ ಕೊಹ್ಲಿ ಮೇಲೆ ಕಿಡಿಕಾರಿದ ಸನ್ನಿ..!
ಗುಜರಾತ್ ಟೈಟಾನ್ಸ್ ಎದುರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 44 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ನಗುನಗುತ್ತಲೇ ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದರು.
ಬೆಂಗಳೂರು(ಮೇ.05): ಭಾರತ ಕ್ರಿಕೆಟ್ ತಂಡದ ದಂತಕಥೆ ಸುನಿಲ್ ಗವಾಸ್ಕರ್, ಇದೀಗ ವಿರಾಟ್ ಕೊಹ್ಲಿ ಮೇಲೆ ಕಿಡಿಕಾರಿದ್ದಾರೆ. ಕೆಲದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ವೀಕ್ಷಕ ವಿವರಣೆಗಾರರು ಹಾಗೂ ಕ್ರಿಕೆಟ್ ಪಂಡಿತರು ಎನಿಸಿಕೊಂಡವರು ತಮ್ಮ ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಬಗ್ಗೆ ಮಾಡುತ್ತಿದ್ದ ಟೀಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದರು. ಈ ಬಗ್ಗೆ ಇದೀಗ ಸನ್ನಿ ಮತ್ತೆ ಕೊಹ್ಲಿ ಮೇಲೆ ಹರಿಹಾಯ್ದಿದ್ದಾರೆ.
ಪವರ್ ಪ್ಲೇ ಬಳಿಕ ರನ್ ಗಳಿಸಲು ವಿರಾಟ್ ಕೊಹ್ಲಿ ಸಾಕಷ್ಟು ಪರದಾಡುತ್ತಿದ್ದಾರೆ. ಸ್ಟ್ರೈಕ್‌ರೇಟ್ ಕಮ್ಮಿಯಿರುವ ವಿರಾಟ್ ಕೊಹ್ಲಿಯನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡುವ ಮುನ್ನ ಸಾಕಷ್ಟು ಚರ್ಚೆಗಳು ನಡೆದಿದ್ದವು. ತಮ್ಮ ಸ್ಟ್ರೈಕ್‌ರೇಟ್ ಬಗ್ಗೆ ಮಾತನಾಡುವವರಿಗೆ ಕೆಲದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದನ್ನೇ ಐಪಿಎಲ್ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಪದೇ ಪದೇ ಪ್ರಸಾರ ಮಾಡುತ್ತಿತ್ತು ಇದನ್ನು ಗಮನಿಸಿದ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.
'ಕೂತು ಮಾತಾಡೋದು ಸುಲಭ..': ನಗುನಗುತ್ತಲೇ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ
ಗುಜರಾತ್ ಟೈಟಾನ್ಸ್ ಎದುರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 44 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ನಗುನಗುತ್ತಲೇ ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದರು.
"ಸಾಕಷ್ಟು ಮಂದಿ ನನ್ನ ಸ್ಟ್ರೈಕ್‌ರೇಟ್ ಬಗ್ಗೆ ಹಾಗೂ ನಾನು ಸ್ಪಿನ್ನರ್‌ಗಳ ವಿರುದ್ದ ಚೆನ್ನಾಗಿ ಆಡಲ್ಲ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ನನ್ನ ಗುರಿ ನನ್ನ ತಂಡದ ಗೆಲುವಿಗಾಗಿ ಆಡಬೇಕು ಅಂದುಕೊಂಡಿದ್ದೇನೆ. ಈ ಕಾರಣಕ್ಕಾಗಿಯೇ ನಾನು ಕಳೆದ 15 ವರ್ಷಗಳಿಂದ ತಂಡದಲ್ಲಿದ್ದೇನೆ. ಮೈದಾನದಲ್ಲಿ ಆಡುವವರಿಗೆ ಪಂದ್ಯ ಪರಿಸ್ಥಿತಿ ಏನು ಎನ್ನುವುದರ ಅರಿವಿರುತ್ತದೆಯೇ ಹೊರತು ಕಾಮೆಂಟರಿ ಬಾಕ್ಸ್‌ನಲ್ಲಿ ಕೂತು ಹರಟುವವರಿಗಲ್ಲ" ಎಂದು ಕೊಹ್ಲಿ ಹೇಳಿದ್ದರು.
ಮುಂಬೈ ಇಂಡಿಯನ್ಸ್ ನಾಕೌಟ್ ಸ್ಟೇಜ್‌ಗೆ ಎಂಟ್ರಿ ನೀಡದೇ ಇದ್ದದ್ದೇ ಒಳ್ಳೇದಾಯ್ತಾ..? ಟೀಮ್ ಇಂಡಿಯಾಗೆ ಲಾಭ..!
ಕೊಹ್ಲಿಯ ಈ ಮಾತು ಸನ್ನಿಯನ್ನು ಕೆರಳುವಂತೆ ಮಾಡಿದೆ. "ಕಾಮೆಂಟೇಟರ್‌ಗಳು ನಿಮ್ಮ ಸ್ಟ್ರೈಕ್‌ರೇಟ್ 118 ಇದ್ದಾಗ ಪ್ರಶ್ನಿಸಿದ್ದಾರೆ. ಯಾರು ಏನು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಯಾಕೆಂದರೆ ನಾನು ಎಲ್ಲಾ ಮ್ಯಾಚ್‌ಗಳನ್ನು ನೋಡಿಲ್ಲ. ಸರಿ ಒಂದು ವೇಳೆ ಹೊರಗಿನ ಮಾತುಗಳಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ ಎಂದಾದರೇ ಬಿಟ್ಹಾಕು. ಅದಕ್ಕೆಲ್ಲಾ ಯಾಕೆ ಪ್ರತಿಕ್ರಿಯೆ ಕೊಡುತ್ತೀಯ. ನಾವು ಜಾಸ್ತಿ ಅಲ್ಲದಿದ್ದರೂ ಸ್ವಲ್ಪ ಕ್ರಿಕೆಟ್ ಆಡಿದ್ದೇವೆ. ನಾವೇನು ಲೆಜೆಂಡ್‌ಗಳಲ್ಲ. ನಮಗೇನು ಕಾಣುತ್ತೋ ಅದನ್ನೇ ಮಾತನಾಡಿದ್ದೇವೆ. ನಮಗೆ ಇಂತದ್ದನ್ನು ಮೆಚ್ಚಬೇಕು ಅಥವಾ ಮೆಚ್ಚಬಾರದು ಎಂದೇನು ಇಲ್ಲ. ನಮಗೆ ಏನು ಇಷ್ಟವಾಗುತ್ತೋ ಅಥವಾ ಇಷ್ಟವಾಗುವುದಿಲ್ಲವೋ ಅದನ್ನು ಹೇಳಿದ್ದೇವೆ ಅಷ್ಟೇ" ಎಂದು ಗವಾಸ್ಕರ್ ಹೇಳಿದ್ದಾರೆ.