ರಾಜಕೀಯ ಷಡ್ಯಂತ್ರ ಮಾಡಿ ಕಿಡ್ನಾಪ್ ಕೇಸ್ ಹಾಕಿಸಿ ಅರೆಸ್ಟ್ ಮಾಡಿದ್ದಾರೆ; ಮಾಜಿ ಸಚಿವ ಹೆಚ್.ಡಿ. ರೇವಣ್ಣ
ಕಳೆದ 40 ವರ್ಷಗಳಿಂದ ನಾನು ರಾಜಕಾರಣ ಮಾಡಿದರೂ ನನ್ನ ಮೇಲೆ ಯಾವುದೇ ಆಪಾದನೆ ಬಂದಿರಲಿಲ್ಲ. ರಾಜಕೀಯ ಷಡ್ಯಂತ್ರ ಮಾಡಿ ನನ್ನ ಮೇಲೆ ಕಿಡ್ನಾಪ್ ಕೇಸ್ ಹಾಕಿಸಿ ಬಂಧಿಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಬೆಂಗಳೂರು (ಮೇ 05): ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ನಾನು ರಾಜಕಾರಣ ಮಾಡಿದರೂ ನನ್ನ ಮೇಲೆ ಯಾವುದೇ ಆಪಾದನೆ ಬಂದಿರಲಿಲ್ಲ. ರಾಜಕೀಯ ಷಡ್ಯಂತ್ರ ಮಾಡಿ ನನ್ನ ಮೇಲೆ ಕಿಡ್ನಾಪ್ ಕೇಸ್ ಹಾಕಿಸಿ ಬಂಧಿಸಿದ್ದಾರೆ ಎಂದು ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಕೇಸ್ ಆರೋಪಿ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಎಸ್‌ಐಟಿ ಪೊಲೀಸರಿಂದ ಬಂಧನವಾಗಿರುವ ಶಾಸಕ ಹೆಚ್.ಡಿ. ರೇವಣ್ಣ ಅವರು ಮೊಟ್ಟ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಸ್‌ಐಟಿ ವಶದಲ್ಲಿರುವ ರೇವಣ್ಣ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ಆವರಣದೊಳಗೆ ಪ್ರವೇಶ ಮಾಡುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಮೇಲೆ ಷಡ್ಯಂತ್ರ ಮಾಡಿ, ಕಿಡ್ನಾಪ್ ಕೇಸ್ ಹಾಕಿಸಿ ಬಂಧಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಮಹಿಳೆಯನ್ನು ರೇವಣ್ಣನೇ ಕಿಡ್ನಾಪ್ ಮಾಡಿಸಿದ್ದು ಎಸ್‌ಐಟಿ ಮುಂದೆ ಬಾಯಿಬಿಟ್ಟ A2 ಆರೋಪಿ
ನನ್ನನ್ನು ಬಂಧನ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಕಳೆದ 40 ವರ್ಷದ ರಾಜಕಾರಣದಲ್ಲಿ ನನ್ನ ಮೇಲೆ ಯಾವುದೇ ಆಪಾದನೆ ಇಲ್ಲ. ಏ.28ರಂದು ನನ್ನ ಮೇಲೆ ದೂರು ಮಾಡಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಯಾವುದೇ ಪುರಾವೆ ಸಿಕ್ಕಿರಲಿಲ್ಲ. ನನ್ನನ್ನು ಬಂಧಿಸಲೇಬೇಕು ಎಂಬ ದುರುದ್ದೇಶದಿಂದ ನನ್ನ ಮೇಲೆ ಕಿಡ್ನಾಪ್ ಕೇಸ್ ಹಾಕಿಸಿ ಅರೆಸ್ಟ್ ಮಾಡಿಸಿದ್ದಾರೆ. ನಾನು ಎಲ್ಲಾ ಪೂರ್ತಿ ವಿಷಯ ಹೇಳ್ತೀನಿ, ಇದು ರಾಜಕೀಯ ಷಡ್ಯಂತ್ರವಾಗಿದೆ ಎಂದು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ರೇವಣ್ಣ ಇಸಿಜಿಯಲ್ಲಿ ವ್ಯತ್ಯಾಸ: ಹೆಚ್.ಡಿ. ರೇವಣ್ಣ ಅವರನ್ನು ನಿನ್ನೆ ಬಂಧಿಸಿದಾಗಲೂ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಬಿಪಿ ಹಾಗೂ ಶುಗರ್ ಲೆವಲ್ ನಾರ್ಮಲ್ ಇತ್ತು. ಆದರೆ, ಈ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಹೀಗಾಗಿ ಆಸ್ಪತ್ರೆಗೆ ಅಡ್ಮಿಟ್ ಮಾಡುವಂತೆ ಎಸ್ ಐಟಿ ಪೊಲೀಸರಿಗೆ ವೈದ್ಯರು ಸೂಚಿಸಿದ್ದರು. ಆದರೂ, ಅವರನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡದೇ ಎಸ್ ಐಟಿ ತಂಡದ ಸಿಬ್ಬಂದಿ ಸಿಐಡಿ ಕಚೇರಿಗೆ ಕರೆತಂದಿದ್ದರು. ಹೀಗಾಗಿ, ಬಂಧನದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕಿದ್ದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಕರೆದೊಯ್ಯುವ ಮೊದಲು ಪುನಃ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು ಇಸಿಜಿ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಈ ವೇಳೆ ಇಸಿಜಿಯಲ್ಲಿ ಜಾಸ್ತಿ ವ್ಯತ್ಯಾಸ ಕಂಡು ಬಂದ್ರೆ ಆಸ್ಪತ್ರೆಗೆ ದಾಖಲಿಸೋ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹಾಸನ ಕಾಮಕಾಂಡ; ಸಂತ್ರಸ್ತೆ ಕಿಡ್ನಾಪ್ ಮಾಡಿ ತಗ್ಲಾಕೊಂಡ ಹೆಚ್.ಡಿ. ರೇವಣ್ಣ ಅರೆಸ್ಟ್, ಇನ್ಮುಂದೆ ಜೈಲೇ ಗತಿ!
ಎಸ್‌ಐಟಿ ತಂಡದ ವಶಕ್ಕೆ ಒಪ್ಪಿಸುವ ಸಾಧ್ಯತೆ: ವೈದ್ಯಕೀಯ ತಪಾಸಣೆ ನಂತರ ರೇವಣ್ಣ ಅವರನ್ನು ಎಸ್‌ಐಟಿ ತಂಡದಿಂದ ನ್ಯಾಯಾಧೀಶರಾದ ರವೀಂದ್ರಕುಮಾರ್ ಬಿ.ಕಟ್ಟಿಮನಿ ಅವರ ಮುಂದೆ ಹಾಜರು ಪಡಿಸಲಿದೆ. ಕೋರಮಂಗಲದ ಎನ್‌ಜಿವಿಯಲ್ಲಿ ಇರುವ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದು, ಈ ಸ್ಥಳದಲ್ಲಿ ಡಿಸಿಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ಭಾರಿ ಭದ್ರತೆ ನೀಡಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಎಸ್‌ಐಟಿ ಅಧಿಕಾರಿಗಳು ಒಂದು ವಾರದಿಂದ 15 ದಿನಗಳ ಕಾಲ ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೇಳುವ ಸಾಧ್ಯತೆಯಿದೆ. ಆದರೆ, ಹೆಚ್ಚು ದಿನ ಎಸ್‌ಐಟಿ ವಶಕ್ಕೆ ಒಪ್ಪಿಸದೇ ಜಾಮೀನು ಮಂಜೂರು ಮಾಡುವುದಕ್ಕೆ ರೇವಣ್ಣ ಪರ ವಕೀಲರು ಕೂಡ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರಾದ ಮೂರ್ತಿ ಡಿ. ನಾಯ್ಕ್ ಅವರು ಕೂಡ ನ್ಯಾಯಾಧೀಶರ ಮನೆಯ ಬಳಿ ಕಾಯುತ್ತಿದ್ದಾರೆ.